ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಫ್ರೀ ಆಯ್ತು ಎನ್ನುವಾಗಲೇ ಮತ್ತೇ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ಹೆಚ್ಚಾಗಿ ಬಾಧಿಸಿದ್ದ ಸೋಂಕು, ಮೂರನೇ ಅಲೆಯ ಹೊತ್ತಿಗೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾದ್ರೂ ಬಹುತೇಕರು ಹೋಂ ಐಸೋಲೇಷನ್‌ನಲ್ಲೇ ಗುಣಮುಖರಾಗಿದ್ದರು. ಇದೀಗ ಮತ್ತೆ ಹೋದ್ಯಾ ಪಿಶಾಚಿ ಅಂದ್ರೆ ಮತ್ತೆ ಬಂದೆ ಗವಾಕ್ಷಿಯಲ್ಲಿ ಎಂಬಂತೆ ಕೋವಿಡ್ ಮತ್ತೆ ವ್ಯಾಪಿಸಲು ಸಿದ್ಧವಾಗ್ತಿದೆ. ಹೀಗಾಗಿಯೇ ಮತ್ತೆ ಕೋವಿಡ್ ಟಫ್ ರೂಲ್ಸ್‌ಗೆ ರಾಜ್ಯ ಆರೋಗ್ಯ ಇಲಾಖೆ ಮುಂದಾಗಿದ್ದು, ಮತ್ತೊಮ್ಮೆ ಫೇಸ್ ಮಾಸ್ಕ್ ಧರಿಸುವುದನ್ನ ಶುಕ್ರವಾರದಿಂದಲೇ ಕಡ್ಡಾಯ ಮಾಡಿದೆ.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಗೆ ವಿಮಾನ ಪ್ರಯಾಣಿಕರ ಓಡಾಟವೇ ಕಾರಣವಾಯ್ತಾ ಎಂಬ ಆತಂಕ ಮೂಡಿಸಿದೆ. ಜೂನ್ 6ರಿಂದ ನಿನ್ನೆಯ ತನಕ ಸುಮಾರು 28,838 ಪ್ರಯಾಣಿಕರನ್ನ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಅಂತರಾಷ್ಟ್ರೀಯ ಪ್ರಯಾಣಿಕರ ಓಡಾಟ ಹೆಚ್ಚಾದ ಕಾರಣ ಸೋಂಕು ಏರಿಕೆಗೆ ಕಾರಣವಾಗಿರಬಹುದು ಅಂತ ಹೇಳಲಾಗ್ತಿದೆ. ಪ್ರಮುಖವಾಗಿ ದಕ್ಷಿಣ ಕೊರಿಯಾ, ಹಾಂಕಾಂಗ್, ಚೀನಾ ದೇಶದಲ್ಲಿ ಸೋಂಕು ವ್ಯಾಪಿಸಿದ್ದರೆ ಇತ್ತ ಇಂಗ್ಲೆಂಡ್, ಜರ್ಮನಿ, ಕೊರಿಯಾ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.
ಇದನ್ನ ಓದಿ | ಮಹಾರಾಷ್ಟ್ರದಲ್ಲಿ ಕೋವಿಡ್ 4ನೇ ಅಲೆ ಭೀತಿ ಇದ್ದರೂ ಬೆಳಗಾವಿಯಲ್ಲಿ ನಿರ್ಲಕ್ಷ್ಯ
ಆರೋಗ್ಯ ಇಲಾಖೆಯ ಟಫ್ ರೂಲ್ಸ್ ಏನು?
- ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
- ಮಾಸ್ಕ್ ಕಡ್ಡಾಯ ಜಾರಿಗೆ ಮಾರ್ಷಲ್ಸ್ ಹಾಗೂ ಪೊಲೀಸ್ ಸಿಬ್ಬಂದಿ ಸಹಾಯ ಪಡೆಯುವುದು
- ಶಾಪಿಂಗ್ ಮಾಲ್, ರೆಸ್ಟೋರೆಂಟ್ ಗಳು, ಪಬ್ಗಳು, ಕೆಫೆಟೀರಿಯಾ, ಹೋಟೆಲ್, ಶಾಲಾ-ಕಾಲೇಜು, ಹಾಸ್ಟೆಲ್, ಕಚೇರಿ, ಕಾರ್ಖಾನೆ ಇತ್ಯಾದಿ ಜಾಗದಲ್ಲಿ ಜನರು ಮಾಸ್ಕ್ ಧರಿಸಬೇಕು
- ಸ್ವಂತ ವಾಹನ, ಸಾರ್ವಜನಿಕ ಸಾರಿಗೆ ಸೇವೆಯಾದ ಬಸ್, ಮೆಟ್ರೋ, ರೈಲಿನಲ್ಲೂ ಪ್ರಯಾಣಿಕರು ಹಾಗೂ ಸಿಬ್ಬಂದಿ ಮಾಸ್ಕ್ ಹಾಕಬೇಕು.
- ILI ಹಾಗೂ SARI ಲಕ್ಷಣಗಳು ಇರುವವರು, ಹೈರಿಸ್ಕ್ ಜನರು ಕೋವಿಡ್ ಪರೀಕ್ಷೆಗೆ ಒಳಪಟ್ಟ ನಂತರ ಸೋಂಕಿನ ಫಲಿತಾಂಶ ಬರುವವರೆಗೆ ಮನೆಯಲ್ಲಿಯೇ ಪ್ರತ್ಯೇಕವಾಗಿ ಇರಬೇಕು.
- ಕೋವಿಡ್ ಲಸಿಕೆ ಪಡೆಯದವರು ಕೂಡಲೇ ಮುಂಜಾಗ್ರತಾ ಡೋಸ್ ಪಡೆಯಬೇಕು.
ವಾರದ ಸೋಂಕಿತರ ಸಂಖ್ಯೆ ಏರಿಳಿತ
ದಿನ-ಟೆಸ್ಟಿಂಗ್- ಸೋಂಕು ದೃಢ- ವಿಮಾನ ಪ್ರಯಾಣಿಕರು | |
---|---|
ಜೂನ್ 5 | 21,413-301- 00 |
ಜೂನ್ 6 | 11,962-230- 10,154 |
ಜೂನ್ 7 | 16,474-348- 4525 |
ಜೂನ್ 8 | 23,246-376-4695 |
ಜೂನ್ 9 | 21,927- 471-00 |
ಜೂನ್ 10 | 22673- 525- 9464 |
ಇದನ್ನ ಓದಿ |ವಿಸ್ತಾರ Explainer: Char Dham ಯಾತ್ರಾ ಸಾವುಗಳಿಗೆ ಕೋವಿಡ್ ಕಾರಣವೇ?