Site icon Vistara News

COVID Subvariant JN.1: ಬೆಂಗಳೂರಿನಲ್ಲಿ ಮೂವರಿಗೆ ಕೊರೊನಾ?; ಕ್ರಿಸ್ಮಸ್‌, ಹೊಸ ವರ್ಷಕ್ಕೆ ನಿರ್ಬಂಧ?

Corona virus Bangalore

ಬೆಂಗಳೂರು: ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್‌ 1 (COVID Subvariant JN.1) ಪತ್ತೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ಮತ್ತು ತಪಾಸಣೆಗೆ ಸೂಚನೆ ನೀಡಲಾಗಿದ್ದು, ಇದೀಗ ಬೆಂಗಳೂರಿನಲ್ಲಿ ಮೂವರು ವ್ಯಕ್ತಿಗಳಲ್ಲಿ ಕೊರೊನಾ ವೈರಸ್‌ (Corona Virus) ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರವೇ ಈ ಬಗ್ಗೆ ಹೈ ಅಲರ್ಟ್‌ ಘೋಷಣೆ ಮಾಡಿದ್ದ ರಾಜ್ಯ ಆರೋಗ್ಯ ಇಲಾಖೆ (State Health Department) 60 ವರ್ಷ ಮೇಲ್ಪಟ್ಟು ಶೀತ, ಕೆಮ್ಮು ಮೊದಲಾದ ಸಮಸ್ಯೆ ಇರುವವರು, ಹೃದಯ ಸಂಬಂಧಿ ಸಮಸ್ಯೆ (Heart problem) ಇರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ. ಕೊರೊನಾ ಲಕ್ಷಣ ಇರುವ ಎಲ್ಲರೂ ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ.

ಮೂವರು ವೃದ್ಧರಲ್ಲಿ ಕೊರೊನಾ ಪತ್ತೆ, ಒಬ್ಬರು ಇಂದು ಡಿಸ್ಚಾರ್ಜ್‌

ಬೆಂಗಳೂರಿನ ಜಯದೇವ್ ಹೃದ್ರೋಗ ಚಿಕಿತ್ಸೆ ಆಸ್ಪತ್ರೆಗೆ ಹೃದಯ ಸಂಬಂಧಿಸಿದ ಚಿಕಿತ್ಸೆ ಗೆ ತೆರಳಿದ್ದ ಹಲವರನ್ನು ಕೊರೊನಾ ಟೆಸ್ಟ್‌ಗೆ ಒಳಪಡಿಸಿದಾಗ ಮೂವರು ವೃದ್ಧರಲ್ಲಿ ಕೊರೊನಾ ಪಾಸಿಟಿವ್‌ ಕಂಡುಬಂದಿದೆ. ಅವರನ್ನು ಸದ್ಯ ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೂವರಲ್ಲಿ ಒಬ್ಬರು ಗುಣಮುಖರಾಗಿದ್ದು, ಮಂಗಳವಾರ ಅವರನ್ನು ಡಿಸ್ಚಾರ್ಜ್ ಮಾಡಲಾಗುತ್ತಿದೆ. ಇದು ಮೂಲ ಕೊರೊನಾ ಆಗಿದ್ದು, ಉಪತಳಿ ಅಲ್ಲ ಎನ್ನಲಾಗಿದೆ.

ಇಂದು ಆರೋಗ್ಯ ಇಲಾಖೆಯ ಮಹತ್ವದ ಸಭೆ

ಈ ನಡುವೆ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ಮಂಗಳವಾರ ನಡೆಯಲಿದ್ದು, ಎಲ್ಲಾ ಜಿಲ್ಲೆಯ ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆ ಚರ್ಚೆ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಭೆ ನಡೆಸಲಿದ್ದಾರೆ. ಜಿಲ್ಲೆಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ. ಬುಧವಾರ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆ ಕರೆದಿದ್ದಾರೆ.

ತಾಂತ್ರಿಕ ಸಲಹಾ ಸಮಿತಿ ಶಿಫಾರಸಿನ ಚರ್ಚೆ

ಇದೇವೇಳೆ ರಾಜ್ಯದ ಕೊರೊನಾ ತಾಂತ್ರಿಕ ಸಲಹಾ ಸಮಿತಿ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ಕೂಡಾ ಮಂಗಳವಾರ ಆಯೋಜನೆಗೊಂಡಿದೆ. ಸಭೆ ಬಳಿಕ ರಾಜ್ಯದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾರ್ಗದರ್ಶಿ ಸೂಚನೆಗಳು ಹೊರಬೀಳುವ ಸಾಧ್ಯತೆಗಳಿವೆ.

ತಾಂತ್ರಿಕ ಸಲಹಾ ಸಮಿತಿ ಸಭೆ ಕಳೆದ ಭಾನುವಾರವೇ ನಡೆದಿದ್ದು, ಅದು ನೀಡಿದ ಸಲಹೆಗಳನ್ನು ಆರೋಗ್ಯ ಇಲಾಖೆ ಸರ್ಕಾರಕ್ಕೆ ಒದಗಿಸಿದೆ.

ಈಗ ಏನೇನು ನಿಯಮ? ಮುಂದೇನು?

ಸದ್ಯಕ್ಕೆ ಯಾವುದನ್ನೂ ಕಡ್ಡಾಯ ಪಾಲನೆಗೆ ಆದೇಶ ನೀಡಲಾಗಿಲ್ಲ. 60 ವರ್ಷ ಮೇಲ್ಪಟ್ಟವರಿಗೆ ಜ್ವರ ಹಾಗೂ ಕೆಮ್ಮು ಕಾಣಿಸಿಕೊಂಡರೇ ಮಾಸ್ಕ್ ಧರಿಸಲು ಸೂಚನೆ ನೀಡಲಾಗಿದೆ. ಗಡಿಭಾಗದಲ್ಲಿ ಯಾವುದೇ ನಿರ್ಬಂಧಗಳನ್ನ ಹೇರಲು ಸೂಚನೆ ನೀಡಲಾಗಿದೆ.

ಆದರೆ, ಮಂಗಳವಾ ನಡೆಯಲಿರುವ ಸಭೆಯ ಬಳಿಕ ಹೊಸ ಸೂಚನೆಗಳು ಬರುವ ಸಾಧ್ಯತೆಗಳು ಕಂಡುಬಂದಿವೆ. ಅದರಲ್ಲೂ ಮುಖ್ಯವಾಗಿ ಕ್ರಿಸ್ಮಸ್ ಹಾಗೂ ನ್ಯೂಇಯರ್‌ಗಳಿಗೆ ಬಂಧಿಸಿ ಕೆಲವೊಂದು ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಸಂಪೂರ್ಣವಾಗಿ ತಡೆಯುವ ಸಾಧ್ಯತೆಗಳು ಇಲ್ಲ, ಆದರೆ, ಕೆಲವೊಂದು ಮುನ್ನೆಚ್ಚರಿಕೆ ವಹಿಸಲು ಜನರಿಗೆ ಮತ್ತು ಆಯೋಜಕರಿಗೆ ಸೂಚಿಸುವ ಸಾಧ್ಯತೆಗಳಿವೆ.

ಟೆಸ್ಟಿಂಗ್ ಹೆಚ್ಚಳ, ಜಿನೋಮಿಕ್ ಸೀಕ್ವೆನ್ಸ್ ಮಾಡುವುದು, ಮಾಸ್ಕ್ ಧರಿಸಲು ಸೂಚನೆ ಮೊದಲಾದ ಕ್ರಮಗಳ ನಿರೀಕ್ಷೆ ಇದೆ. ಒಂದೊಮ್ಮೆ JN1 ತಳಿ ಪತ್ತೆಯಾದರೆ ಮುಂದೇನು ಮಾಡಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ.

Exit mobile version