ಮಡಿಕೇರಿ: ಊರಿನ ಹಲವು ಮನೆಗಳ ಗೋವುಗಳನ್ನು ತಿಂದು ತೇಗಿದ್ದ ಹುಲಿಯೊಂದನ್ನು ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿದಿದೆ (Tiger trapped). ಕೊಡಗು ಜಿಲ್ಲೆ ಸಿದ್ದಾಪುರ ಸಮೀಪ ಮಾಲ್ದಾರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಘಟ್ಟದಳ್ಳದಲ್ಲಿ ಹಾಡಹಗಲೇ ಮೇಯಲು ಬಿಟ್ಟಿದ್ದ ಹಸುವನ್ನು ಕೊಂದ ವ್ಯಾಘ್ರನನ್ನು ಅರಣ್ಯ ಇಲಾಖೆಯು ಸೋಮವಾರದಂದು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಹಿಡಿದಿದೆ. ಮಾಲ್ದಾರೆ ಸಮೀಪದ ಅಸ್ತಾನದಲ್ಲಿ ಅಂತಿಮವಾಗಿ ಹುಲಿ ಸೆರೆ ಸಿಕ್ಕಿತು.
ಮತ್ತೆ ಮತ್ತೆ ದಾಳಿ ನಡೆಸಿದ ಹುಲಿ
ಕಳೆದ ಕೆಲವು ದಿನಗಳ ಹಿಂದೆ ಸರಣಿ ಗೋವುಗಳನ್ನು ಕೊಂದು ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆಯು ಸಾಕಾನೆಗಳ ಸಹಾಯದಿಂದ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಸೋಮವಾರದಂದು ಸಿದ್ದಾಪುರ ಸಮೀಪದ ಘಟ್ಟದಳ್ಳ ಚೇಂದಂಡ ನಂದಾ ಮಾದಪ್ಪ ಎಂಬುವವರಿಗೆ ಸೇರಿದ್ದ ಗದ್ದೆಯಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಕಾರ್ಮಿಕರ ಎದುರೇ ದಾಳಿ ನಡೆಸಿ ಕೊಂದು ಹಾಕಿತ್ತು.
ಇದಾದ ಮಾರನೆಯ ದಿನ ಮಾಲ್ದಾರೆ ಸಮೀಪದ ಅಸ್ತಾನದಲ್ಲಿ ಹುಲಿ ಪ್ರತ್ಯಕ್ಷವಾಗಿರುವುದನ್ನು ಕಂಡ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖಾಧಿಕಾರಿಗಳು ಆರು ಸಾಕಾನೆಗಳ ಸಹಾಯದೊಂದಿಗೆ ಹುಲಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಸೆರೆ ಸಿಕ್ಕ ಹುಲಿಗೆ ಪ್ರಾಥಮಿಕ ಚಿಕಿತ್ಸೆ ನಂತರ ಬನ್ನೇರುಘಟ್ಟಕ್ಕೆ ಸ್ಥಳಾಂತರಿಸಿದರು.
ಇದನ್ನೂ ಓದಿ | Tiger Safari : ಸಫಾರಿಯಲ್ಲಿ ಕಂಡವು ನಾಲ್ಕು ಹುಲಿ; ಪ್ರವಾಸಿಗರಿಗೆ ರೋಮಾಂಚನ ತಂದ ಹುಲಿಗಳ ದರ್ಶನ