ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.
ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬವರ ಕೊಟ್ಟಿಗೆಯಲ್ಲಿ ಹಸು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿದೆ. ಒಂದೇ ದೇಹ ಎರಡು ತಲೆ, ನಾಲ್ಕು ಕಣ್ಣುಗಳನ್ನು, ಎರಡು ಕಿವಿಗಳನ್ನು ಹೊಂದಿದೆ.
ಪಶು ವೈದ್ಯಾಧಿಕಾರಿ ಪ್ರದೀಪ ಗಾಂವ್ಕಾರ ಅವರು ಸುರಕ್ಷಿತವಾಗಿ ಕರುವಿನ ಜನನವಾಗುವಂತೆ ನೋಡಿಕೊಂಡಿದ್ದು, ಇಂತಹ ಕರುಗಳು ಆಹಾರ ಸೇವನೆ, ಉಸಿರಾಟದ ಸಮಸ್ಯೆಯಿಂದ ಬದುಕುವುದು ಕಷ್ಟ ಎಂದಿದ್ದಾರೆ.
ಈ ಹಿಂದೆಯೂ ಕೆಲವು ಕಡೆ ಎರಡು ತಲೆ ಇರುವ ಕರುಗಳು ಹುಟ್ಟಿವೆ. ಆದರೆ, ತುಂಬ ದಿನ ಬದುಕುವುದಿಲ್ಲ. ಮನುಷ್ಯರಲ್ಲೂ ಈ ರೀತಿಯ ಕಾಂಜಾಯಿಂಟ್ ಅವಳಿಗಳು ಹುಟ್ಟುತ್ತವೆ. ಸಯಾಮಿ ಅವಳಿಗಳು ಕೆಲವೊಮ್ಮೆ ತುಂಬ ಬದುಕಿನ ಉದಾಹರಣೆಗಳು ಇವೆ.