ಮಂಗಳೂರು: ತನ್ನ ಜೀವ ತೆಗೆಯಲು ಕಸಾಯಿ ಖಾನೆಗೆ (Cow slaughter) ಎಳೆದುತಂದ ಯುವಕನನ್ನೇ ಎಮ್ಮೆಯೊಂದು ತಿವಿದು ಕೊಂದ (Buffalo kills man) ಘಟನೆ ಕಾಸರಗೋಡಿನಲ್ಲಿ ನಡೆದಿದೆ! ಚಿತ್ರದುರ್ಗ ಮೂಲದ ಸಾದಿಕ್ (22) ವಾಹನದ ಮೂಲಕ ಎಮ್ಮೆಯನ್ನು ತಂದಿದ್ದ. ಆದರೆ ಒಮ್ಮೆ ಕಸಾಯಿ ಖಾನೆ ತಲುಪುತ್ತಿದ್ದಂತೆಯೇ ಸಿಡಿದೆದ್ದ ಎಮ್ಮೆ ತನ್ನ ಜೀವ ತೆಗೆಯಲು ಮುಂದಾದ ಸಾದಿಕ್ನನ್ನು ತಿವಿದು ಕೊಂದಿದೆ.
ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರಿನ ಕಸಾಯಿ ಖಾನೆಯಲ್ಲಿ ಈ ಘಟನೆ ನಡೆದಿದೆ.
ಸಾದಿಕ್ ಎಂಬ ಯುವಕ ಈ ಎಮ್ಮೆಯನ್ನು ವಾಹನದಲ್ಲಿ ತುಂಬಿಸಿ ತಂದಿದ್ದ. ಕಸಾಯಿ ಖಾನೆಗೆ ವಾಹನಗಳನ್ನು ಒಯ್ಯುವುದೆಂದರೆ ಅವುಗಳ ಕಾಲುಗಳನ್ನು ಕಟ್ಟಲಾಗುತ್ತದೆ. ಅವುಗಳು ಬೊಬ್ಬೆ ಹೊಡೆಯದಂತೆ ಬಾಯಿಗೂ ಹಗ್ಗ ಸುತ್ತಲಾಗಿರುತ್ತದೆ.
ಹೀಗೆ ತಂದ ಎಮ್ಮೆಯನ್ನು ವಾಹನದಿಂದ ಇಳಿಸುವಾಗ ಒಮ್ಮೆಲೇ ಕೊರಳಲ್ಲಿದ್ದ ಹಗ್ಗ ತುಂಡಾಯಿತು. ಹೀಗೆ ಹಗ್ಗ ಬಿಚ್ಚಿದ ಎಮ್ಮೆ ತನ್ನೆಲ್ಲ ಆಕ್ರೋಶದೊಂದಿಗೆ ಓಡಾಡಿ ದಾಂಧಲೆ ನಡೆಸಿದೆ. ಹೇಗಾದರೂ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಹಠದೊಂದಿಗೆ ಅದು ಕಂಡಲ್ಲೆಲ್ಲ ಓಡಿದೆ. ಹಲವು ಅಂಗಡಿಗಳಿಗೆ ನುಗ್ಗಿ ದಾಂಧಲೆ ನಡೆಸಿದೆ.
ಈ ನಡುವೆ, ಎಮ್ಮೆಯನ್ನು ಹಿಡಿಯಲೆಂದು ಸಾದಿಕ್ ಕೂಡಾ ಬೆನ್ನು ಹತ್ತಿದ್ದಾನೆ. ಒಂದು ಹಂತದಲ್ಲಿ ಎಮ್ಮೆಯನ್ನು ಹಿಡಿಯುವ ಪ್ರಯತ್ನದಲ್ಲಿ ಸಾದಿಕ್ನಿಗೆ ಅದು ನೇರವಾಗಿ ಹೊಟ್ಟೆಗೆ ತಿವಿದಿದೆ. ಎಮ್ಮೆಯ ಆಕ್ರೋಶ ಎಷ್ಟಿತ್ತೆಂದರೆ ಅದು ಸಾದಿಕ್ನನ್ನು ಕೊಂಬಿನಿಂದ ತಿವಿದು ಎತ್ತಿ ಎಸೆದಿದೆ.
ಈ ದಾಂಧಲೆಯಲ್ಲಿ ತೀವ್ರವಾಗಿ ಗಾಯಗೊಂಡ ಸಾದಿಕ್ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾನೆ.
ಇಷ್ಟಾದರೂ ಎಮ್ಮೆಯ ದಾಂಧಲೆ ಮಾತ್ರ ನಿಂತಿಲ್ಲ. ಅದನ್ನು ಹಿಡಿಯಲು ನೂರಾರು ಜನರು ಪ್ರಯತ್ನಿಸಿದರು. ಈ ವೇಳೆ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಬಳಿಕ ಪೊಲೀಸರು ಮತ್ತು ಅಗ್ನಿ ಶಾಮಕ ದಳದವರು ಆಗಮಿಸಿದರು. ಅಂತಿಮವಾಗಿ ಹೇಗೋ ಎಮ್ಮೆಯನ್ನು ಹಿಡಿಯಲಾಯಿತು.
ಇದನ್ನೂ ಓದಿ : Cow Slaughter : ಮನೆಮನೆಗೆ ತೆರಳಿ ಗೋಮಾಂಸ ಮಾರಾಟ ಮಾಡುತ್ತಿದ್ದ ಯುವಕನಿಗೆ ಬಜರಂಗದಳ ಧರ್ಮದೇಟು