ಹಾಸನ: ರಾಜ್ಯದಲ್ಲಿ ಅಕ್ರಮ ಗೋಸಾಗಾಟ, ಗೋಹತ್ಯೆ ನಿಷೇಧ (Cow slaugher prevention bill) ಕಾಯಿದೆಯ ಬಗ್ಗೆ ಮತ್ತೆ ಜೋರಾಗಿ ಚರ್ಚೆಯಾಗುತ್ತಿದೆ. ಜಾನುವಾರುಗಳನ್ನು ಕದ್ದು ಸಾಗಿಸುವುದು, ಅಕ್ರಮವಾಗಿ, ಅಮಾನವೀಯವಾಗಿ ವಾಹನಗಳಲ್ಲಿ (Inhuman trafficking) ತುಂಬಿ ಸಾಗಿಸುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ಇದರ ನಡುವೆ, ಇದೆಲ್ಲದಕ್ಕಿಂತಲೂ ಅಮಾನವೀಯವಾದ ಇನ್ನೊಂದು ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಇಲ್ಲಿ ಮಾಂಸ ಸಾಗಾಟ, ಮಾರಾಟ ಜಾಲದ ದುಷ್ಕರ್ಮಿಗಳು ಎಮ್ಮೆಯೊಂದನ್ನು ಗುಂಡು ಹಾರಿಸಿ ಕೊಂದಿದ್ದಾರೆ (Buffalo murdered). ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ದುಷ್ಟರನ್ನು ಬಂಧಿಸಲಾಗಿದೆ. ಅವರಿಂದ ಕೃತ್ಯಕ್ಕೆ ಬಳಸಿದ ಬಂದೂಕನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕ್ಯಾಮನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಕಾಫಿ ತೋಟವೊಂದರಲ್ಲಿ ಮೇಯುತ್ತಿದ್ದ ಎಮ್ಮೆಯನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದಿದ್ದಾರೆ. ನಿರ್ಜನ ಜಾಗದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ಸ್ವಲ್ಪ ದೂರ ಯಾರೂ ಇಲ್ಲದ ಜಾಗಕ್ಕೆ ಸಾಗಿಸಿದ್ದಾರೆ. ಅಲ್ಲಿ ಎಮ್ಮೆಯನ್ನು ಮಾಂಸವಾಗಿ ಕತ್ತರಿಸುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.
ಕಾಫಿ ತೋಟದಲ್ಲಿ ಗುಂಡು ಹಾರಿದ ಸದ್ದೊಂದು ಕೇಳಿತ್ತು. ಇದು ಏನಿರಬಹುದು ಎಂದು ಸ್ಥಳೀಯರು ಯೋಚಿಸಿದಾಗ ಆ ಭಾಗದಲ್ಲಿ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ಓಡಾಡಿದ ಮಾಹಿತಿ ಸಿಕ್ಕಿತು. ಕೂಡಲೇ ಅವರು ಹುಡುಕಾಡಿದಾಗ ದುಷ್ಕರ್ಮಿಗಳು ತೋಟದ ಒಂದು ಮರೆಯಲ್ಲಿ ಎಮ್ಮೆಯನ್ನು ಮಾಂಸವಾಗಿ ಕತ್ತರಿಸುವುದು ಬೆಳಕಿಗೆ ಬಂತು.
ಸಾರ್ವಜನಿಕರು ಈ ಜಾಗಕ್ಕೆ ಬರುತ್ತಿದ್ದಂತೆಯೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಎಮ್ಮೆಯ ಹತ್ತಿರಕ್ಕೆ ಹೋದರೆ ಗುಂಡು ಹಾರಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಕ್ಯಾಮನಹಳ್ಳಿಯ ದಯಾನಿದಿ ಎಂಬುವವರಿಗೆ ಸೇರಿದ ಎಮ್ಮೆ ಇದಾಗಿತ್ತು. ದುಷ್ಕರ್ಮಿಗಳು ಪರವಾನಗಿ ಇಲ್ಲದ ಬಂದೂಕಿನಿಂದ ದಾಳಿ ನಡೆಸಿ ಎಮ್ಮೆಯನ್ನು ಕೊಂದಿದ್ದರು. ಈ ನಡುವೆ ಸ್ಥಳೀಯರ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಜಾನುವಾರು ಹತ್ಯೆ ಆರೋಪದಲ್ಲಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರಿಂದ ಒಂದು ಬಂದೂಕನ್ನು ವಶಕ್ಕೆ ಪಡೆಯಲಾಗಿದೆ. ಸಕಲೇಶಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಗೋವುಗಳ ಮಾರಣಹೋಮ ಆತಂಕ; ಜಿಲ್ಲಾಡಳಿತಕ್ಕೆ ಬಜರಂಗದಳ ಮೊರೆ
ಮಂಗಳೂರು: ಜೂನ್ 29ರಂದು ಮುಸ್ಲಿಂ ಸಮುದಾಯವು ಬಕ್ರೀದ್ (Eid al Adha) ಆಚರಣೆಗೆ ಸಜ್ಜಾಗಿದೆ. ಬಕ್ರೀದ್ ಹಬ್ಬದ (Bakrid festival) ಹಿನ್ನೆಲೆಯಲ್ಲಿ ಕುರ್ಬಾನಿ ಹೆಸರಿನಲ್ಲಿ ಸಾವಿರಾರು ಗೋವುಗಳ ಮಾರಣ ಹೋಮ ನಡೆಯುವ ಸಾಧ್ಯತೆ ಇದೆ ಎಂದು ಹಿಂದುಗಳು ಆತಂಕ ವ್ಯಕ್ತಪಡಿಸಿದ್ದಾರೆ. ಗೋವುಗಳ ಹತ್ಯೆಯ ಆತಂಕ ಇರುವ ಹಿನ್ನೆಲೆಯಲ್ಲಿ ಕೂಡಲೇ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಬಜರಂಗದಳವು ಜಿಲ್ಲಾಡಳಿತಕ್ಕೆ ಮೊರೆ ಇಟ್ಟಿದೆ.
ಇದನ್ನೂ ಓದಿ: Cow slaughter: ಗೋಹತ್ಯೆ ನಿಷೇಧ ಹಿಂಪಡೆದರೆ ರಾಜ್ಯಾದ್ಯಂತ ಹೋರಾಟ; ಮುತಾಲಿಕ್ ಎಚ್ಚರಿಕೆ
ಈ ಬಗ್ಗೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಸುನೀಲ್ ಕೆ.ಆರ್, ಕುರ್ಬಾನಿಗೆ ತಯಾರಿ ನಡೆಯುತ್ತಿರುವ ಬಗ್ಗೆ ಮಾಹಿತಿ ಬರುತ್ತಿದೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಅಕ್ರಮ ಗೋ ಸಾಗಾಣಿಕೆ, ಗೋವುಗಳ ಬಲಿಯನ್ನು ತಡೆಯಬೇಕು. ಇಂದಿನಿಂದ ಜೂನ್ 30 ರವರೆಗೆ ಚೆಕ್ ಪೋಸ್ಟ್ ತೆರೆಯಬೇಕು. ಗೋಸಾಗಾಟ ತಡೆಯಲು ವಿಶೇಷ ಪೊಲೀಸ್ ತಂಡ ರಚಿಸಬೇಕು ಎಂದು ಆಗ್ರಹಿಸಿದ್ದಾರೆ.