ಬೆಂಗಳೂರು: ರಾಜ್ಯದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ರೊಚ್ಚಿಗೆದ್ದಿದ್ದಾರೆ. ಗೋ ಹತ್ಯಾ ನಿಷೇಧ ಕಾಯಿದೆಯಿಂದ (Cow slaughter) ಯಾವುದೇ ಲಾಭವಾಗಿಲ್ಲ. ಜನರಿಗೆ ನಷ್ಟವಾಗಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರನ್ನು ಜೈಲಿಗೆ ಹಾಕಲೂ ಸಿದ್ಧ ಎಂದು ಆಕ್ರೋಶದಿಂದ ಹೇಳಿದ್ದಾರೆ.
ʻʻಕಾಂಗ್ರೆಸ್ ನಾಯಕರು ನನ್ನ ಇಲಾಖೆ ಬಗ್ಗೆ ಸುಳ್ಳು ಆರೋಪ ಮಾಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕಾಂಗ್ರೆಸ್ ನಾಯಕರಿಗೆ ಬುದ್ಧಿ ಇಲ್ಲ ಅಂತ ಹೇಳಬೇಕಾ, ಏನು ಹೇಳಬೇಕೋ ಗೊತ್ತಾಗ್ತಿಲ್ಲʼʼ ಎಂದು ಮಾಧ್ಯಮ ಗೋಷ್ಠಿಯಲ್ಲಿ ಅವರು ಹರಿಹಾಯ್ದರು.
ʻʻ1964ರಲ್ಲಿ ಎಸ್ ನಿಜಲಿಂಗಪ್ಪನವರು ಮುಖ್ಯಮಂತ್ರಿ ಆಗಿದ್ದಾಗಲೇ ಗೋಹತ್ಯೆ ನಿಷೇಧ ಕಾನೂನು ಇತ್ತು. ನಾವು ಅದನ್ನು ಮತ್ತಷ್ಟು ಬಿಗಿ ಮಾಡಿದ್ದೇವೆ. ಮೂರು ವರ್ಷಗಳ ಅಂತರದಲ್ಲಿ ಹಸುಗಳನ್ನು ಉಳಿಸಬೇಕು ಎನ್ನುವುದು ಗೋಹತ್ಯೆ ನಿಷೇಧ ಕಾನೂನು ಬಿಗಿ ಮಾಡಿರುವುದರ ಉದ್ದೇಶ. 1964ರಲ್ಲಿ ಗೋಹತ್ಯೆಗೆ 1 ಸಾವಿರ ರೂ. ದಂಡ, 6 ತಿಂಗಳು ಜೈಲು ಶಿಕ್ಷೆ ಇತ್ತು. ಬಿಎಸ್ ಯಡಿಐೂರಪ್ಪ ಅವರ ನೇತೃತ್ವದ ಸರಕಾರದಲ್ಲಿ ಕಾನೂನನ್ನು ಬಿಗಿ ಮಾಡಿದೆವು. ಈಗ ಗೋಹತ್ಯೆ ಮಾಡಿದ್ರೆ 3ರಿಂದ 7 ವರ್ಷದವರೆಗೆ ಜೈಲು ಶಿಕ್ಷೆ ಇದೆ. 50 ಸಾವಿರದಿಂದ 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆʼʼ ಎಂದು ವಿವರಿಸಿದರು.
ಕಾಯಿದೆ ಜಾರಿ ಬಳಿಕ ಗೋಹತ್ಯೆ ಪ್ರಮಾಣ ಕುಸಿತ
ʻʻಯಾವುದೇ ಸಾಕ್ಷಿ, ದಾಖಲೆ ಇಲ್ಲದೆ ಕಾಂಗ್ರೆಸ್‌ನವರು ಆರೋಪ ಮಾಡಿದ್ದಾರೆ. ನಾನು ಸಚಿವನಾದ ಬಳಿಕ ಗೋರಕ್ಷಕನಾಗಿ ಗೋ ಸೇವೆ ಮಾಡುತ್ತಿದ್ದೇನೆ. ಕಾಯಿದೆಯಿಂದ ಗೋಹತ್ಯೆಯ ಸಂಖ್ಯೆ ಕಡಿಮೆಯಾಗಿದೆ. ಗೋಶಾಲೆಗಳ ನಿರ್ವಹಣೆ ಮಾಡುತ್ತಿದ್ದೇವೆ. ಖಾಸಗಿ ಗೋಶಾಲೆಗಳಿಗೂ ಉತ್ತೇಜನ ನೀಡುತ್ತಿದ್ದೇವೆ. ದೇಶದಲ್ಲಿ ಮೊದಲ ಬಾರಿಗೆ ಪಶುಸಂಜೀವಿನಿ ಆಂಬ್ಯುಲೆನ್ಸ್ ಶುರು ಮಾಡಿದ್ದೇವೆʼʼ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ
ʻʻವಿಪಕ್ಷ ನಾಯಕರಾದ ಸಿದ್ದರಾಮಯ್ಯ ಗೋಹತ್ಯೆ ನಿಷೇಧ ಕಾಯ್ದೆ ಹಿಂಪಡೆಯುತ್ತೇವೆ ಎಂದು ಹೇಳಿದ್ದಾರೆ. ಮಾತು ಮಾತಿಗೆ ನಾನು ಬೀಫ್ ತಿಂತೀನಿ ಅಂತ ಸಿದ್ದರಾಮಯ್ಯ ಹೇಳ್ತಾರೆ. ಒಂದು ವೇಳೆ ಬೀಫ್ ತಿಂದ್ರೆ,
ಹಸುವನ್ನು ಕತ್ತರಿಸಿದರೆ ಸಿದ್ದರಾಮಯ್ಯ ಆಗಲಿ, ಖರ್ಗೆಯಾಗಲಿ ಅವರನ್ನು ಜೈಲಿಗೆ ಹಾಕ್ತೀನಿ. ನನ್ನ ಮುಂದೆ ಬೀಫ್ ತಿಂದ್ರೆ ಅವರನ್ನ ಒಳಗೆ ಹಾಕಿಸ್ತೇನೆʼʼ ಎಂದು ಎಚ್ಚರಿಸಿದರು.
ಕುಮಾರಸ್ವಾಮಿ ಹೇಳಿಕೆಯಿಂದ ಕಾಂಗ್ರೆಸ್‌ಗೆ ಭಯ
ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಡಿಸಿಎಂ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ. ಕಾಂಗ್ರೆಸ್‌ನವರಿಗೆ ಮುಸ್ಲಿಂನವರು ಮತ ಹಾಕಲ್ಲ ಅಂತ ಹೆದರಿದ್ದಾರೆ. ಹೀಗಾಗಿ ಮುಸ್ಲಿಂ ಮತಗಳು ಕಳೆದುಹೋಗಬಹುದು ಎಂದು ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮಾತನಾಡ್ತಿದ್ದಾರೆ. ಮುಸ್ಲಿಂ ಬಾಂಧವರ ಪರವಾಗಿ ಕಾಂಗ್ರೆಸ್ ಹೀಗೆ ಮಾಡ್ತಿದೆʼʼ ಎಂದು ಪ್ರಭು ಚವ್ಹಾಣ್ ಹೇಳಿದರು.
ಗೋಹತ್ಯೆ ನಿಷೇಧ ಕಾಯ್ದೆಯಿಂದ ಯಾವುದೇ ನಷ್ಟವಾಗಿಲ್ಲ ಎಂದು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಮುಂದೆ ನಮ್ಮದೇ ಸರಕಾರ ಬರಲಿದ್ದು, ಇನ್ನಷ್ಟು ಕಠಿಣವಾಗಿ ಜಾರಿಗೆ ತರುತ್ತೇವೆ ಎಂದರು ಪ್ರಭು ಚವ್ಹಾಣ್.
ಇದನ್ನೂ ಓದಿ | ಅಕ್ರಮ ಗೋ ಹತ್ಯೆ | ರಾಜ್ಯದಲ್ಲೇ ಮೊದಲ ಬಾರಿಗೆ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಶುರು, ಖಾದರ್ ಆಕ್ರೋಶ