ಬೆಂಗಳೂರು/ತುಮಕೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಗೋಹತ್ಯೆ ನಿಷೇಧ ಕಾಯಿದೆ (Prevention of Cow Slaughter Act) ಹಾಗೂ ಮತಾಂತರ ನಿಷೇಧ ಕಾಯಿದೆ (Anti conversion law) ಪರವಾಗಿ ಈಗ ರಾಜ್ಯದ ವಿವಿಧ ಮಠ ಮಾನ್ಯಗಳ ಸಾಧು-ಸಂತರು ನಿಂತಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ರದ್ದು ಮಾಡುವ ಪ್ರಸ್ತಾಪ ಮಾಡಿದ್ದಕ್ಕೆ ತೀವ್ರ ಆಕ್ರೋಶಗೊಂಡಿರುವ ಸ್ವಾಮೀಜಿಗಳು ಬೆಂಗಳೂರು ಹಾಗೂ ತುಮಕೂರಿನಲ್ಲಿ ಪ್ರತ್ಯೇಕವಾಗಿ ಸಮಾವೇಶ ನಡೆಸಿ, ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಗೋವು ಭಾರತೀಯ ಸಂಸ್ಕೃತಿಯ ಪ್ರತೀಕ. ಇದರ ಹತ್ಯೆ (Cow slaughter) ಸಲ್ಲದು. ಧರ್ಮ, ಸಂಸ್ಕೃತಿಯನ್ನು ಕಾಪಾಡಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮವನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆ ಮಾದರಿ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗಿದೆ.
ವಿಶ್ವ ಹಿಂದು ಪರಿಷತ್ (Vishwa Hindu Parishad) ವತಿಯಿಂದ ಮಲ್ಲೇಶ್ವರದ ಯದುಗಿರಿ ಯತಿರಾಜ ಮಠದಲ್ಲಿ ಸಮಾವೇಶವನ್ನು ನಡೆಸಲಾಗಿದೆ. ಇಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆಯಬಾರದು ಎಂದು ನಿರ್ಣಯವನ್ನು ಅಂಗೀಕಾರ ಮಾಡಲಾಗಿದೆ.
ಇದನ್ನೂ ಓದಿ: Karnataka Politics : ಬಿ.ಎಲ್. ಸಂತೋಷ್ ಭೇಟಿಯಾದ ರಮೇಶ್ ಜಾರಕಿಹೊಳಿ; ವಿರೋಧಿಗಳಿಗೆ ಠಕ್ಕರ್
ಈ ಬಗ್ಗೆ ವಿಸ್ತಾರ ನ್ಯೂಸ್ಗೆ ಪ್ರತಿಕ್ರಿಯೆ ನೀಡಿದ ಮೇಲುಕೋಟೆ ಯದುಗಿರಿ ಯತಿರಾಜ ಸ್ವಾಮೀಜಿ, ಗೋಹತ್ಯೆ ನಿಷೇಧ ಮಾಡಬೇಕು ಎನ್ನುವುದು ಯಾವುದೇ ರಾಜಕೀಯ ವಿಷಯ ಅಲ್ಲ. ಮತಾಂತರ ನಿಷೇಧವೂ ರಾಜಕೀಯ ವಿಷಯ ಅಲ್ಲ. ಈ ಬಗ್ಗೆ ಕಾನೂನನ್ನು ಹಿಂಪಡೆಯಬಾರದು ಎಂದು ಸರ್ಕಾರವನ್ನು ಒತ್ತಾಯ ಮಾಡುತ್ತೇವೆ. ಈ ಸರ್ಕಾರ ಸ್ಪಂದಿಸುತ್ತದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಲವ್ ಜಿಹಾದ್ಗೆ ಅವಕಾಶ ನೀಡಬಾರದು: ಅಶ್ವತ್ಥನಾರಾಯಣ
ಹಿಂದು ಧರ್ಮ, ಸಂಸ್ಕೃತಿ, ಆಚಾರ ವಿಚಾರ ಕಾಪಾಡಬೇಕು ಎಂಬ ವಿಚಾರ ನಮ್ಮದು. ಗೋಹತ್ಯೆ ನಿಷೇಧ ಸಡಿಲಿಕೆ ಆಗಬಾರದು ಎಂದು ಸಂತರು ಸಂದೇಶ ಕೊಟ್ಟಿದ್ದಾರೆ. ಧರ್ಮ ಸ್ವಾತಂತ್ರ್ಯ ಎನ್ನುವುದು ಮತಾಂತರಕ್ಕೆ ಕಾರಣವಾಗಬಾರದು. ದುರ್ಬಲವಾದ ಕಾನೂನನ್ನು ಬಿಜೆಪಿ ಸರ್ಕಾರ ಬಲಪಡಿಸಿತ್ತು. ಈ ಸರ್ಕಾರ ಅದನ್ನು ದುರ್ಬಲಗೊಳಿಸಬಾರದು. ಲವ್ ಜಿಹಾದ್ಗೆ ಅವಕಾಶ ನೀಡಬಾರದು ಎಂಬ ಸಂದೇಶವನ್ನು ಕೊಡಲಾಗಿದೆ. ವ್ಯಕ್ತಿಯ ದೌರ್ಬಲ್ಯಗಳನ್ನು ಬಳಕೆ ಮಾಡಿಕೊಂಡು ಮತಾಂತರ ಮಾಡಬಾರದು ಎಂದು ಮಾಜಿ ಸಚಿವ ಅಶ್ವತ್ಥನಾರಾಯಣ ಹೇಳಿದರು.
ಮತಾಂತರ ಆಗಬಾರದು ಎಂದು ನಾವು ಹೇಳುವುದಿಲ್ಲ. ಆದರೆ, ಈ ಮತಾಂತರ ಪ್ರಕ್ರಿಯೆಯು ಪಾರದರ್ಶಕವಾಗಿರಬೇಕು. ಯಾವುದೇ ಕಾನೂನನ್ನು ಸಡಿಲ ಮಾಡಬಾರದು ಎಂದು ನಿರ್ಣಯ ಮಾಡಿದ್ದಾರೆ. ಈ ಕಾನೂನುಗಳನ್ನು ತಂದಿದ್ದೇ ಬಿಜೆಪಿ ಸರ್ಕಾರವಾಗಿದೆ. ಇದಕ್ಕೆ ನಾವು ಬದ್ಧವಾಗಿದ್ದೇವೆ. ಈ ಸರ್ಕಾರಕ್ಕೆ ಸಂತರು ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಇದರ ಕುರಿತು ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ. ಈ ವಿಚಾರದಲ್ಲಿ ನಮ್ಮ ಕಣಕಣದಲ್ಲೂ ಸ್ಪಷ್ಟತೆ ಇದೆ ಎಂದು ಅಶ್ವತ್ಥನಾರಾಯಣ ಗುಡುಗಿದರು.
ತುಮಕೂರಲ್ಲಿ ಸಂತ ಸಮಾವೇಶ; ಗೋಹತ್ಯೆ ನಿಷೇಧ ವಾಪಸ್ ಮಾಡದಿರಲು ಆಗ್ರಹ
ಗೋಹತ್ಯೆ ನಿಷೇಧ ಕಾಯಿದೆ ಹಾಗೂ ಮತಾಂತರ ನಿಷೇಧ ಕಾಯಿದೆ ಪರ ತುಮಕೂರಿನಲ್ಲಿ ಸಂತ ಸಮಾವೇಶ ನಡೆದಿದೆ. ಈ ಕಾಯಿದೆ ವಾಪಸ್ ಪಡೆಯಲು ಮುಂದಾದ ಸರ್ಕಾರದ ವಿರುದ್ಧ ಸಾಧು ಸಂತರು ಆಕ್ಷೇಪ ವ್ಯಕ್ತಪಡಿಸಿದರು.
ಇದನ್ನೂ ಓದಿ: Independence Day 2023 : ಆಗಸ್ಟ್ 15ರಂದು ಕೆಂಪುಕೋಟೆಗೆ ಆಹ್ವಾನ; ಬಣವಿಕಲ್ಲು ದಂಪತಿ ಸಂತಸ
ತುಮಕೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ವಿಶ್ವ ಹಿಂದು ಪರಿಷತ್ನಿಂದ ಸಂತ ಸಮಾವೇಶವನ್ನು ಆಯೋಜಿಸಲಾಗಿತ್ತು. 12ಕ್ಕೂ ಹೆಚ್ಚು ಮಠಗಳ ಸಾಧು ಸಂತರು ಭಾಗಿಯಾಗಿದ್ದರು. ಸಮಾವೇಶದಲ್ಲಿ ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದಿನ ಸರ್ಕಾರ ಮಾಡಿದ ಕೆಲವು ನಿರ್ಣಯಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲು ಮುಂದಾಗಲಾಗಿದೆ. ಆ ಮೂಲಕ ಹಿಂದುಗಳ ಅಸ್ಥಿತ್ವಕ್ಕೆ ಧಕ್ಕೆ ತರಬೇಕು, ಹಿಂದುಗಳ ಭಾವನೆಗೆ ಚ್ಯುತಿ ತರಬೇಕು ಎಂಬ ಉದ್ದೇಶದಿಂದ ತಿದ್ದುಪಡಿ ಮಾಡಲು ಈ ಸರ್ಕಾರ ಮುಂದಾಗಿದೆ. ಇದು ಒಳ್ಳೆಯ ಲಕ್ಷಣ ಅಲ್ಲ. ಯಾಕೆಂದರೆ ಯಾವುದೇ ಸರ್ಕಾರ ಸ್ಥಾಯಿ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರದ ಗ್ಯಾರಂಟಿ ನಂಬಿದ ಜನರಿಗೆ ಹೃದಯಾಘಾತವಾಗಿದೆ. ಗ್ಯಾರಂಟಿ ಆಘಾತವಾಗಿ ಭ್ರಮನಿರಸನ ಉಂಟಾಗಿದೆ. ಸರ್ಕಾರ ಸ್ಥಾಪಿತವಾಗಿ ಎರಡೇ ತಿಂಗಳಲ್ಲಿ ಜನರು ಗ್ಯಾರಂಟಿ ನಂಬಿ, ನಾವು ಮೋಸ ಹೋದೆವು ಎಂದು ಹೇಳುತ್ತಿದ್ದಾರೆ. ನಮ್ಮದು ಬಹುಮತದ ಸರ್ಕಾರದ ಅಂದುಕೊಂಡು ತೋಚಿದ್ದೆಲ್ಲವನ್ನೂ ಮಾಡಲು ಆಗಲ್ಲ. ಬಹುಮತದ ಸರ್ಕಾರದಲ್ಲಿ ಬಹುಮತೀಯರೂ ಇದ್ದಾರೆ ಅನ್ನೋದು ಗೊತ್ತಿರಲಿ. ತಲೆ ಕೆಟ್ಟು 50 ಜನರು ಅಲ್ಲಿಂದ ಇಲ್ಲಿಗೆ ಬಂದರೆ ಮುಗಿದೇ ಹೊಯಿತು ನಿಮ್ಮ ಬಹುಮತ. ಇಂಥ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಹಾಗಾಗಿ ನಾವು ಮಾಡಿದ್ದೇ ಸರಿ, ನಾವು ಹೇಳಿದ್ದೇ ಸರಿ ಅನ್ನೋ ಭಾವನೆ ಇರಬಾರದು. ಮಹಾರಾಷ್ಟ್ರ ರಾಜಕೀಯ ಸ್ಥಿತಿ ಹೇಗಾಗಿದೆ ಎಂಬುದರ ಅರಿವಿರಬೇಕು. ಹಿಂದಿನ ಸರ್ಕಾರ ಮಾಡಿದ ನಿರ್ಣಯ ಸರಿ ಇಲ್ಲ, ಹಾಗಾಗಿ ರದ್ದು ಮಾಡುತ್ತೇವೆ ಎಂದು ಸಕಾರಣ ಸಹಿತ ಹೇಳಿದರೆ ಒಪ್ಪಿಕೊಳ್ಳಬಹುದು. ಆದರೆ, ಹಿಂದಿನ ಸರ್ಕಾರ ಮಾಡಿದ್ದೆಲ್ಲವೂ ಸರಿ ಇಲ್ಲ ಅಂದರೆ ಒಪ್ಪಲು ಸಾಧ್ಯವಿಲ್ಲ. ಹಿಂದೂ ಧರ್ಮದಲ್ಲಿ ಗೋವಿಗೆ ಮಹತ್ವ ಕೊಟ್ಟುಕೊಂಡು ಬಂದಿದ್ದೇವೆ. ಆ ಭಾವನೆಗೆ ಧಕ್ಕೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದರು.
ನಮ್ಮನ್ನು ಕೇಳಿ ಪಠ್ಯ ಪುಸ್ತಕ ಬದಲಾವಣೆ ಮಾಡುತ್ತಿದ್ದೀರಾ?
ಗೊಲ್ಲಳ್ಳಿ ಮಠದ ವಿಭವ ವಿದ್ಯಾಶಂಕರ ಶ್ರೀ ಮಾತನಾಡಿ, ನಮ್ಮ ದೇಶದಲ್ಲಿ ತಾಯಿಗಿಂತ ಹೆಚ್ಚಾಗಿ ಗೋವನ್ನು ಪೂಜಿಸುತ್ತೇವೆ. ಅವಳ ಹತ್ಯೆ ಸಹಿಸಲು ಆಗೋದಿಲ್ಲ. ಆದ ಕಾರಣ ಗೋಹತ್ಯೆ ನಿಷೇಧ ಕಾಯಿದೆ ಮುಂದುವರಿಯಬೇಕು. ಗೋ ರಕ್ಷಣೆ ಆಗಬೇಕು. ಮತಾಂತರ ನಿರ್ಬಂಧ ಕಾಯಿದೆ ಕೂಡ ಮುಂದುವರಿಯಬೇಕು. ಲವ್ ಜಿಹಾದ್ ಕೂಡ ಒಂದು ಪಿಡುಗಾಗಿದೆ. ಪ್ರಸ್ತುತ ಸರ್ಕಾರ ಸಾಧು ಸಂತರ ಮೇಲೆ ಆರೋಪ ಮಾಡುತ್ತದೆ. ಹಿಂದಿನ ಸರ್ಕಾರ ಪಠ್ಯ ಪುಸ್ತಕ ಬದಲಾವಣೆ ಮಾಡಿದಾಗ ಸ್ವಾಮೀಜಿಗಳು ಧ್ವನಿ ಎತ್ತಿಲ್ಲ ಅಂತಾರೆ. ಆದರೆ, ಈ ಸರ್ಕಾರ ನಮ್ಮನ್ನು ಕೇಳಿ ಪಠ್ಯ ಪುಸ್ತಕ ಬದಲಾವಣೆ ಮಾಡ್ತಾ ಇದೆಯಾ? ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: Karnataka Politics : ಎಚ್ಡಿಕೆ ನೈಸ್ ದಾಖಲೆ ಕೊಟ್ರೆ ತನಿಖೆ ಎಂದ ಜೋಶಿ; ಪ್ರತ್ಯುತ್ತರ ಕೊಡುವೆನೆಂದ ಡಿಕೆಶಿ
ನಮ್ಮ ಧರ್ಮ ಇರುವುದೇ ಗೋವಿನ ಸಂಸ್ಕೃತಿ ಅಡಿ
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸರ್ಕಾರ ಮತಾಂತರ ನಿಷೇಧ ಕಾಯಿದೆ ಹಾಗೂ ಗೋ ಹತ್ಯೆ ನಿಷೇಧ ಕಾಯಿದೆ ಮುಂದುವರಿಸಬೇಕು. ನಮ್ಮ ಧರ್ಮ ಇರುವುದೇ ಗೋವಿನ ಸಂಸ್ಕೃತಿ ಅಡಿಯಲ್ಲಾಗಿದೆ. ದೇಶ ಗಟ್ಟಿಯಾಗಬೇಕೆಂದರೆ ಧರ್ಮ ಪಾಲನೆಯಾಗಬೇಕು ಎಂದು ಹೇಳಿದರು.