Site icon Vistara News

CP Yogeshwar : ತಂದೆಯ ವಿರುದ್ಧವೇ ಸಿಡಿದ ಸಿ.ಪಿ. ಯೋಗೇಶ್ವರ್‌ ಪುತ್ರಿ! ಡಿಕೆಶಿ ಭೇಟಿ ಹಿಂದಿನ ರಹಸ್ಯವೇನು?

CP Yogeshwar daughter Nisha and DK Shivakumar

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಇತ್ತೀಚೆಗೆ ಅನೇಕ ಬೆಳವಣಿಗೆಗಳು (Karnataka Political Development) ನಡೆಯುತ್ತಿವೆ. ಶತ್ರುವಿನ ಶತ್ರು ಮಿತ್ರರು ಎಂಬಂತೆ ರಾಜಕೀಯದ ಹಳೇ ಗಾದೆಗಳು ಮತ್ತೆ ಚಾಲ್ತಿಯಲ್ಲಿವೆ. ‌ಇನ್ನು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DCM DK Shivakumar) ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (CP Yogeshwar) ರಾಜಕೀಯ ಬದ್ಧವೈರಿಗಳು. ಆದರೆ, ದಿಢೀರ್‌ ಬೆಳವಣಿಗೆ ಎಂಬಂತೆ ಸಿಪಿವೈ ಪುತ್ರಿ ಮಂಗಳವಾರ ಡಿಕೆಶಿಯನ್ನು ಭೇಟಿ ಮಾಡಿದ್ದರು. ಈ ವೇಳೆ ತನ್ನ ತಂದೆಯ ವಿರುದ್ಧವೇ ದೂರು ಹೇಳಿದ್ದಾರೆ ಎನ್ನಲಾಗಿದ್ದು, ಈ ವಿಷಯಕ್ಕೆ ತಾವು ಎಂಟ್ರಿ ಆಗುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಡಿ.ಕೆ. ಶಿವಕುಮಾರ್‌ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಸದ್ಯಕ್ಕೆ ಇದೊಂದು ಕೌಟುಂಬಿಕ ವಿಚಾರ ಎಂದು ತಿಳಿದು ಬಂದಿದೆ. ಡಿ.ಕೆ. ಶಿವಕುಮಾರ್‌ ಹಾಗೂ ಸಿ.ಪಿ. ಯೋಗೇಶ್ವರ್‌ ಅವರಿಗೆ ಪರಸ್ಪರ ಆಗಿಬರದು ಎಂಬ ವಿಚಾರವು ಎಲ್ಲರಿಗೂ ಗೊತ್ತಿರುವಂಥದ್ದೇ. ಇಷ್ಟಾದರೂ ಸಿಪಿವೈ ಪುತ್ರಿ ನಿಶಾ ಯೋಗೇಶ್ವರ್ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿರುವುದು ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಒಂದು ಹಂತದಲ್ಲಿ ಈ ಮೂಲಕ ಸಿ.ಪಿ. ಯೋಗೇಶ್ವರ್‌ ಅವರೇ ರಾಜಕೀಯ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆಯೇ? “ಆಪರೇಷನ್‌ ಸಿಂಗಾಪುರ” (Operation Singapore) ಹಿಂದಿನ ಭಾಗವಾಗಿ ಈ ಭೇಟಿ ನಡೆದಿದೆಯೇ? ಎಂಬಿತ್ಯಾದಿ ಊಹಾಪೋಹಗಳು ಎದ್ದಿದ್ದವು. ಆದರೆ, ಈಗ ಬಂದಿರುವ ಮಾಹಿತಿ ಪ್ರಕಾರ ಇದು ತಂದೆ-ಮಗಳ ಯುದ್ಧ ಎಂಬುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: DJ Halli case : ಇಂಡಿಯನ್ ಮುಜಾಹಿದ್ದೀನ್‌ಗಿಂತ I.N.D.I.A ಹೇಗೆ ಭಿನ್ನ?: ತೇಜಸ್ವಿ ಸೂರ್ಯ, ಸಿ.ಟಿ. ರವಿ ಕಿಡಿ

ತಂದೆಯ ಬದ್ಧ ವೈರಿ ಜತೆ ಮಗಳ ಮಾತುಕತೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಮಾಡಿದ ನಿಶಾ ಯೋಗೇಶ್ವರ್ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿಶಾ ರಾಜಕೀಯ ವಿಚಾರಗಳ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಡಿಕೆ ಶಿವಕುಮಾರ್‌ ಸಹ ಅವರೊಂದಿಗೆ ಮುಕ್ತವಾಗಿ ಮಾತನಾಡಿದ್ದಾರೆ ಎನ್ನಲಾಗಿದೆ.

ಅಪ್ಪನ ವಿರುದ್ಧ ಮಗಳ ದೂರು!

ಹೀಗೇ ಮಾತನಾಡುತ್ತಾ ಬಂದ ನಿಶಾ ಒಮ್ಮೆಗೆ ತನ್ನ ತಂದೆ ಸಿ.ಪಿ. ಯೋಗೇಶ್ವರ್‌ ವಿರುದ್ಧ ಡಿ.ಕೆ. ಶಿವಕುಮಾರ್‌ ಬಳಿ ದೂರು ಹೇಳಿದ್ದಾರೆ. ನನಗೆ ರಕ್ಷಣೆ ಬೇಕು ಎಂದ ಮನವಿ ಮಾಡಿಕೊಂಡಿದ್ದಾರೆ. ತಮ್ಮ ತಂದೆಯಿಂದ ನಮಗೆ ಕಿರುಕುಳ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನೀವು ನಮಗೆ ರಕ್ಷಣೆ ಕೊಡಬೇಕು. ನಮ್ಮನ್ನು ಈ ಅಪಾಯದಿಂದ ಪಾರು ಮಾಡಬೇಕು ಎಂದು ಕೋರಿಕೊಂಡಿದ್ದಾರೆ ಎನ್ನಲಾಗಿದೆ.

ನಿಶಾ ಯೋಗೇಶ್ವರ್ ಅವರು ಸಿ.ಪಿ. ಯೋಗೇಶ್ವರ್‌ ಅವರ ಮೊದಲ ಪತ್ನಿ ಮಗಳಾಗಿದ್ದಾರೆ. ಕೌಟುಂಬಿಕವಾಗಿ ಅವರ ಮಧ್ಯೆ ಎಲ್ಲವೂ ಸರಿ ಇಲ್ಲ ಎನ್ನಲಾಗಿದೆ. ಜತೆಗೆ ಆಸ್ತಿ ವಿಚಾರದಲ್ಲಿ ಸಿಪಿವೈ ಮತ್ತು ನಿಶಾ ನಡುವೆ ಜಗಳ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಡಿ.ಕೆ. ಶಿವಕುಮಾರ್‌ ಅವರ ಬಳಿ ನಿಶಾ, ರಕ್ಷಣೆ ಕೋರಿ ಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Rain News : ಎಲ್ಲೆಡೆ ವಾರ್‌ ರೂಂ; ಜೀವಹಾನಿ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಖಡಕ್‌ ವಾರ್ನಿಂಗ್

ಮಧ್ಯ ಪ್ರವೇಶ ಮಾಡಲ್ಲ ಎಂದ ಡಿಕೆಶಿ

ಈ ನಡುವೆ ನಿಶಾ ಹೇಳಿದ ಎಲ್ಲ ದೂರುಗಳನ್ನು ಸಾವಧಾನವಾಗಿ ಕೇಳಿಸಿಕೊಂಡ ಡಿ.ಕೆ. ಶಿವಕುಮಾರ್‌ ಅವರು, ನಿಮ್ಮ ಕುಟುಂಬದ ಜಗಳಕ್ಕೆ ನಾವು ಬರುವುದು ಸರಿಯಲ್ಲ. ಆದರೆ, ನೀವು ರಾಜಕೀಯಕ್ಕೆ ಬರುವುದಾದರೆ ನಮ್ಮ ಸಹಕಾರ ಇರುತ್ತದೆ. ನಿಮಗೆ ರಾಜಕೀಯವಾಗಿ ಏನು ಬೆಂಬಲ ಬೇಕೋ ಅದನ್ನು ಮಾಡಬಹುದು ಎಂದು ನಯವಾಗಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

Exit mobile version