ಹಾವೇರಿ: ತಮಿಳುನಾಡಿನ ಶಿವಕಾಶಿಯಿಂದ ವರದಿಯಾಗುತ್ತಿದ್ದ ಪಟಾಕಿ ದುರಂತ (Cracker Tragedy) ನಮ್ಮ ರಾಜ್ಯದ ಹಾವೇರಿಯಲ್ಲೇ (fire incident in Haveri) ಸಂಭವಿಸಿದೆ. ಪಟಾಕಿ ಗೋದಾಮಿನಲ್ಲಿ (Cracker Godown) ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ನಾಲ್ಕು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ (four workers burnt to death).
ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದ ಭೂಮಿಕಾ ಟ್ರೇಡರ್ಸ್ ಪಟಾಕಿ ಅಂಗಡಿಯ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡವನ್ನು ಸುಟ್ಟು ಭಸ್ಮ ಮಾಡಿದೆ. ಇದರ ಜತೆಗೆ ಕೆಲವು ವಾಹನಗಳು ಕೂಡಾ ಸುಟ್ಟು ಕರಕಲಾಗಿವೆ. ಅತ್ಯಂತ ಭಯಾನಕವೆಂಬಂತೆ ಮೂವರು ಕಾರ್ಮಿಕರು ಈ ಬೆಂಕಿಯಲ್ಲಿ ಬೆಂದಿದ್ದು ಮಾತ್ರವಲ್ಲ, ಸಂಪೂರ್ಣ ಸುಟ್ಟು ಕರಕಲಾಗಿ ಹೋಗಿದ್ದಾರೆ.
ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಈ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಂಗಡಿಯಲ್ಲಿದ್ದ ಬೈಕ್ ಹಾಗು ಟಾಟಾ ಏಸ್ ಗಾಡಿ ಸುಟ್ಟು ಭಸ್ಮವಾಗಿದ್ದು ಎಲ್ಲರ ಅರಿವಿಗೆ ಬಂದಿತ್ತು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನ ನಡೆಸಿದರು. ಈ ವೇಳೆಗೆ ಒಳಗಿದ್ದವರೆಲ್ಲ ಹೊರಗೆ ಓಡಿ ಬಂದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದ್ದರಿಂದ ಇಡೀ ಅಂಗಡಿ ಸುಟ್ಟು ಭಸ್ಮವಾದರೂ ಜೀವ ಹಾನಿ ಸಂಭವಿಸಿಲ್ಲ ಎಂಬ ನಿರಾಳತೆಯೊಂದು ಆ ಕ್ಷಣದಲ್ಲಿತ್ತು.
ಆದರೆ, ಸ್ವಲ್ಪ ಹೊತ್ತಿನಲ್ಲಿ ಆ ಕಾರ್ಮಿಕ ಇಲ್ಲ, ಈ ಕಾರ್ಮಿಕ ಇಲ್ಲ ಎಂಬ ಸುದ್ದಿಗಳು ಹರಿದಾಡಿದವು. ಇತ್ತ ಪಟಾಕಿ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಲೇ ಇತ್ತು. ಬೆಂಕಿ ಮತ್ತು ಹೊಗೆಯ ನಡುವೆ ಒಳಗೆ ಹೋಗುವುದು ಸಾಧ್ಯವೇ ಇರಲಿಲ್ಲ. ಸ್ವಲ್ಪ ಹೊತ್ತು ಪಟಾಕಿ ಸಿಡಿಯುವುದು ಕಡಿಮೆ ಆಯಿತು ಅನಿಸಿದ ಕೂಡಲೇ ಮತ್ತೆ ಜೋರಾದ ಸದ್ದು ಕೇಳುತ್ತಿತ್ತು. ಎಷ್ಟು ನೀರು ಹಾಕಿದರೂ ಬೆಂಕಿ ಮತ್ತು ಸದ್ದು ನಿಲ್ಲಲೇ ಇಲ್ಲ.
ಕೊನೆಗೆ ಒಂದು ಹಂತದಲ್ಲಿ ಅಗ್ನಿ ಶಾಮಕ ದಳ ಮತ್ತು ಇತರ ಸ್ಥಳೀಯರು ಸುರಕ್ಷಿತ ಉಪಕರಣಗಳೊಂದಿಗೆ ಒಳಗೆ ಹೋದಾಗ ಒಳಗೆ ಇಡೀ ಕಟ್ಟಡ ಸುಟ್ಟು ಕರಕಲಾಗಿ ಹೋಗಿತ್ತು. ಅದರ ನಡುವೆ ಮೂವರು ಕಾರ್ಮಿಕರು ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಹರಡಿತ್ತು.
ಮೂವರ ಮೃತದೇಹ ಪತ್ತೆ, ಇನ್ನೂ ಒಬ್ಬ ನಾಪತ್ತೆ?
ಕೊನೆಗೆ ಹುಡುಕಿದಾಗ ಮೂರು ದೇಹಗಳು ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾದವು. ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ದ್ಯಾಮಪ್ಪ ಓಲೇಕಾರ, ರಮೇಶ್ ಬಾರ್ಕಿ ಮತ್ತು ಶಿವಲಿಂಗ ಅಕ್ಕಿ ಎಂಬುವವರ ಮೃತದೇಹ ಪತ್ತೆಯಾಗಿದೆ. ಇನ್ನೂ ಒಬ್ಬ ಕಾರ್ಮಿಕ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಮೃತರು ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಗಣೇಶೋತ್ಸವಕ್ಕೆ ಪಟಾಕಿ ಬಂದಿತ್ತು
ಸಾಮಾನ್ಯವಾಗಿ ಈ ಅಂಗಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಇರುವುದಿಲ್ಲ. ಗಣೇಶ ಹಬ್ಬದ ನಿಮಿತ್ತವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿ ಸಾಮಗ್ರಿಗಳನ್ನು ತರಿಸಲಾಗಿತ್ತು. ಹೀಗಾಗಿ ಅವುಗಳನ್ನು ಸರಿಯಾಗಿ ಜೋಡಿಸುವ ಮತ್ತಿತರ ಕೆಲಸಗಳಿಗಾಗಿ ಪಟಾಕಿ ಅಂಗಡಿಯಲ್ಲಿ ಹೆಚ್ಚುವರಿಯಾಗಿ ಕೂಲಿ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.
ನೆಲ ಮಹಡಿಯ ರೂಂ ಒಳಗಡೆ ಈ ಮೃತದೇಹಗಳು ಸಿಕ್ಕಿದ್ದವು. ಕಾರ್ಮಿಕರು ಬೆಂಕಿಯ ಬಲೆಯಲ್ಲಿ ಸಿಕ್ಕಿಹಾಕಿಕೊಂಡಾಗ ರಕ್ಷಣೆಗಾಗಿ ಒಂದು ಕೋಣೆಯಲ್ಲಿ ಹೋಗಿ ಸೇರಿಕೊಂಡಿರಬಹುದು ಎಂದು ಹೇಳಲಾಗಿದೆ. ಬೆಂಕಿ ಕೋಣೆಯನ್ನು ಆವರಿಸಿದಾಗ ಹೊರಗಡೆ ಬರಲಾಗದೆ ಪ್ರಾಣ ಕಳೆದುಕೊಂಡಿರಬಹುದು ಎಂದು ಹೇಳಲಾಗಿದೆ.
ಈ ಅಂಗಡಿ ವೀರೇಶ ಸಾತೇನಹಳ್ಳಿ ಎಂಬವರಿಗೆ ಸೇರಿದ್ದಾಗಿದ್ದು, ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.
ಇದನ್ನೂ ಓದಿ : Fire tragedy : ಮೈಸೂರಿನ ಪಟಾಕಿ ಗೋದಾಮು ಬೆಂಕಿಗಾಹುತಿ, ದೀಪಾವಳಿಯಂತೆ ಸಿಡಿದ ಪಟಾಕಿಗಳು, ಲಕ್ಷಾಂತರ ರೂ. ನಷ್ಟ