ಹೊಸಪೇಟೆ: ಹಾಗೊಂದು ಘಟನೆ ನಡೆಯಲಿದೆ ಎನ್ನುವ ಯಾವ ಕಲ್ಪನೆಯೂ ಅಲ್ಲಿದ್ದ ಯಾರಿಗೂ ಇರಲಿಲ್ಲ. ಯಾಕೆಂದರೆ, ಅಲ್ಲಿ ಈ ರೀತಿಯ ಸಂಭ್ರಮಾಚರಣೆ ಹೊಸತೂ ಅಲ್ಲ. ಹೊಸಪೇಟೆಯ ತುಂಗ ಭದ್ರಾ ಡ್ಯಾಂ ಬಳಿಯ ಇ.ವಿ ಕ್ಯಾಂಪ್‌ನ ಗಣೇಶ ಶೆಡ್‌ನಲ್ಲಿ ಶ್ರೀ ಮಹಾಗಣಪತಿ ಮಂಡಳಿಯವರು ಗಣೇಶ ಪ್ರತಿಷ್ಠಾಪನೆ ಮಾಡುವುದು ಹೊಸತಲ್ಲ. ಅದರಲ್ಲೂ ಇದು ಈ ಭಾಗದಲ್ಲೇ ಪ್ರಸಿದ್ಧ.. ಈ ಬಾರಿ ಇಟ್ಟಿದ್ದಂತೂ ಸುಮಾರು ೩೪ ಅಡಿ ಎತ್ತರದ ಗಣಪ. ಅದಕ್ಕೆ ಪೂರಕವಾಗಿ ಬೇಕಾದಷ್ಟು ವ್ಯವಸ್ಥೆಗಳನ್ನು ಮಾಡುತ್ತಾರೆ.
ಇ.ವಿ. ಕ್ಯಾಂಪ್‌ನಲ್ಲಿ ಪೂಜೆ ಮಾಡಿ ಭವ್ಯ ಮೆರವಣಿಗೆ ಮೂಲಕ ಗಣೇಶ ದೇವಸ್ಥಾನದ ಹತ್ತಿರದಲ್ಲೇ ಇರುವ ಪವರ್‌ಕ್ಯಾನಲ್‌ನಲ್ಲಿ ಮೂರ್ತಿ ವಿಸರ್ಜನೆ ಮಾಡುವುದು ರೂಢಿ.
ಅಂತೆಯೇ ಶನಿವಾರ ರಾತ್ರಿ ದೊಡ್ಡ ಮಟ್ಟದಲ್ಲಿ ಮೆರವಣಿಗೆ ನಡೆದಿದೆ. ಸಾವಿರಾರು ಜನರು ಕುಣಿತ, ಹಾಡುಗಳ ಸಂಭ್ರಮದೊಂದಿಗೆ ಮೆರವಣಿಗೆ ಹೊರಟಿದ್ದರು. ಬೃಹತ್ ಗಣೇಶ ಮೂರ್ತಿ ಸಾಗುವ ದಾರಿಯಲ್ಲೂ ಸಾವಿರಾರು ಮಂದಿ ನಿಂತು ನೋಡಿದ್ದರು. ಲಾರಿಯಲ್ಲಿ ಕುಳಿತ ಗಣಪತಿ ಎಲ್ಲರನ್ನೂ ನೋಡುವವನಂತೆ ನಿಧಾನಕ್ಕೆ ಬಂದಿದ್ದ.
ಲಾರಿ ಪವರ್ ಕ್ಯಾನಲ್‌ನ ಸೇತುವೆಯ ಭಾಗಕ್ಕೆ ಬಂದಿದೆ. ಅಲ್ಲಿಂದ ಮುಂದಿನ ಕೆಲಸ ಕ್ರೇನ್‌ನದ್ದು. ಸೇತುವೆ ಮೇಲೆ ನಿಂತಿದ್ದ ಕ್ರೇನ್‌ಗೆ ಗಣಪತಿ ಮೂರ್ತಿಯನ್ನು ಕಟ್ಟಿ ಕ್ರೇನ್ ಮೂಲಕ ಎತ್ತಿ ನಾಲೆಗೆ ಇಳಿಸುವುದು ಯಾವತ್ತಿನಿಂದಲೂ ನಡೆದಿರುವ ಸಂಪ್ರದಾಯ. ಈ ಬಾರಿಯೂ ಕ್ರೇನ್‌ಗೆ ಬೆಲ್ಟ್ ರೋಪ್ ಕಟ್ಟಿ, ಅದರ ಸಹಾಯದಿಂದ ಮೂರ್ತಿಗೆ ಯಾವುದೆ ತೊಂದರೆ ಆಗದಂತೆ ನಾಲ್ಕೂ ಕಡೆಗಳಲ್ಲಿ ಸರಿಯಾಗಿ ಹುಕ್ ಹಾಕಿ ಮೇಲಕ್ಕೆ ಎತ್ತಲಾಗಿತ್ತು.
ಹೀಗೆ ಗಣಪತಿ ಮೂರ್ತಿಯನ್ನು ಮೇಲಕ್ಕೆ ಎತ್ತಿ ನಿಧಾನಕ್ಕೆ ಕಾಲುವೆಗೆ ಇಳಿಸುವ ಹೊತ್ತಿಗೆ ಒಮ್ಮಿಂದೊಮ್ಮೆಗೇ ಕ್ರೇನ್ ಬಲಕ್ಕೆ ವಾಲಿದೆ. ಕ್ಷಣ ಮಾತ್ರದಲ್ಲಿ ಕ್ರೇನ್ ಉರುಳಿದೆ. ಮತ್ತು ಗಣಪತಿ ಮೂರ್ತಿಯೂ ನೀರಿಗೆ ಬಿದ್ದಿದೆ. ಈ ನಡುವೆ ಕ್ರೇನ್ ಬಲಕ್ಕೆ ಉರುಳುತ್ತಿದ್ದಂತೆಯೇ ಕ್ರೇನ್ ಮತ್ತು ತಡೆಗೋಡೆಯ ಮಧ್ಯೆ ನಿಂತಿದ್ದ ಅಶೋಕ್ ಮತ್ತು ಸಾಯಿ ನಿಖಿಲ್ ಎಂಬ ೧೯ ವರ್ಷದ ಯುವಕರು ಅಲ್ಲೇ ಸಿಕ್ಕಿಬಿದ್ದಿದ್ದಾರೆ. ಅಶೋಕ್ ಅಂತೂ ತಡೆಗೋಡೆ ಮತ್ತು ಕ್ರೇನ್‌ನ ನಡುವೆ ಸಿಕ್ಕಿ ಅಪ್ಪಚ್ಚಿಯಾಗಿದ್ದರೆ ನಿಖಿಲ್‌ನ ಸೊಂಟದ ಭಾಗ ಸಿಕ್ಕಿಹಾಕಿಕೊಂಡು ಆ ಕಡೆಯೂ ಅಲ್ಲ, ಈ ಕಡೆಯೂ ಅಲ್ಲ ಎಂಬಂತಿತ್ತು. ಅಷ್ಟು ಹೊತ್ತಿಗೆ ರಾತ್ರಿ ಸುಮಾರು ೧.೨೫ ಆಗಿತ್ತು.
ಒಮ್ಮಿಂದೊಮ್ಮೆಗೇ ಉಂಟಾದ ಈ ದುರಂತದಿಂದ ಅಲ್ಲೋಲ್ಲ ಕಲ್ಲೋಲಕಲ್ಲೋಲವೇ ಆಯಿತು. ಆದರೆ, ಯಾರೂ ಏನೂ ಮಾಡುವಂತಿರಲಿಲ್ಲ. ಯಾಕೆಂದರೆ ಅಷ್ಟು ಶಕ್ತಿಶಾಲಿಯಾದ ಕ್ರೇನನ್ನು ಸರಿಸುವುದು ಸಾಧ್ಯವಿಲ್ಲದ ಮಾತಾಗಿತ್ತು. ಬಳಿಕ ಇನ್ನೆರಡು ಕ್ರೇನನ್ನು ತರಿಸಿ ಈ ಕ್ರೇನನ್ನು ಸರಿಸಿ ಇಬ್ಬರನ್ನೂ ಹೊರಗೆ ತರಲಾಯಿತು. ಆದರೆ, ಅಷ್ಟು ಹೊತ್ತಿಗೆ ಅಶೋಕ್ ಪ್ರಾಣವನ್ನೇ ಕಳೆದುಕೊಂಡಿದ್ದರು. ಸಾಯಿ ನಿಖಿಲ್ ಗಂಭೀರವಾಗಿ ಗಾಯಗೊಂಡಿದ್ದರು. ಸಾಯಿ ನಿಖಿಲ್ ನನ್ನು ಕೊಪ್ಪಳದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕಿಬರಲಿಲ್ಲ.
ಮಂಡಳಿ ಮೇಲೂ ಕೇಸು
ಇದೀಗ ನಿರ್ಲಕ್ಷ್ಯದಿಂದ ಕ್ರೇನ್ ಆಪರೇಟ್ ಮಾಡಿ ಕ್ರೇನ್ ಉರುಳಲು ಕಾರಣವಾದ ಆಪರೇಟರ್ ರಾಜು ಮತ್ತು ಇಷ್ಟು ದೊಡ್ಡ ಮೂರ್ತಿಯ ವಿಚಾರದಲ್ಲಿ ಸೂಕ್ತ ಎಚ್ಚರಿಕೆ ವಹಿಸದ ಕಾರಣಕ್ಕಾಗಿ ಗಣೇಶ ಮಹಾ ಮಂಡಳಿ ಹಾಗೂ ಅದರ ಅಧ್ಯಕ್ಷ ನೂಕರಾಜು ಅವರ ಮೇಲೆ ಕೇಸು ದಾಖಲಿಸಲಾಗಿದೆ. ಮೃತ ಯುವಕ ಅಶೋಕ್ ಸಂಬಂಧಿ ನಾಗರಾಜು ಎಂಬುವವರ ದೂರಿನ ಮೇರೆಗೆ FIR ದಾಖಲು ಮಾಡಲಾಗಿದೆ.
೩೪ ಅಡಿ ಎತ್ತರದ ಹೊಸಪೇಟೆ ಗಣಪ
ಹೊಸಪೇಟೆಯಲ್ಲಿ ಕಳೆದ ಆಗಸ್ಟ್ ೩೧ರಂದು ಸುಮಾರು ೩೪ ಅಡಿ ಎತ್ತರದ ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಶನಿವಾರ ವಿಸರ್ಜನಾ ಮೆರವಣಿಗೆ ನಡೆದಿತ್ತು. ಮೃತ ಮತ್ತು ಗಾಯಾಳು ಯುವಕ ಇಲ್ಲಿನ ಕೂಲಿಕಾರರ ಕುಟುಂಬಕ್ಕೆ ಸೇರಿದ ಬಡವರಾಗಿದ್ದಾರೆ.
ಇದನ್ನೂ ಓದಿ | ಹೊಸಪೇಟೆ | ಬೃಹತ್ ಗಣಪತಿ ಮೂರ್ತಿ ಸಹಿತ ಕ್ರೇನ್ ಪಲ್ಟಿ: ಅಡಿಗೆ ಸಿಲುಕಿ ಒಬ್ಬ ಮೃತ್ಯು, ಇನ್ನೊಬ್ಬ ಗಂಭೀರ