ತುಮಕೂರು: ರಾಜ್ಯದ ನಾನಾ ಭಾಗಗಳಲ್ಲಿ ಇತ್ತೀಚೆಗೆ ಕಂಡುಬರುವ ಅತಿ ದೊಡ್ಡ ಸಮಸ್ಯೆ ಎಂದರೆ ಸ್ಮಶಾನದ್ದು (Crematorium Problem). ಸಾರ್ವಜನಿಕ ರುದ್ರಭೂಮಿ ಇಲ್ಲದೆ, ಅಥವಾ ನಿಗದಿತ ರುದ್ರಭೂಮಿಗೆ ಕಾನೂನು ತಕರಾರುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹಲವಾರು ಬಾರಿ ಜನರು ಕಳೇಬರವನ್ನು (Dead Body) ಇಟ್ಟುಕೊಂಡು ಪ್ರತಿಭಟನೆ ನಡೆಸಿದ ಘಟನೆಗಳು ನಡೆದಿದೆ. ಅದರ ಮುಂದುವರಿದ ಭಾಗವಾಗಿ ತುಮಕೂರಿನಲ್ಲಿ ಸ್ಮಶಾನಕ್ಕೆ ಜಾಗವಿಲ್ಲದ ಹಿನ್ನೆಲೆಯಲ್ಲಿ ಜನರು ಸಿಟ್ಟಿಗೆದ್ದು ಮಾರ್ಗದ ಬದಿಯೇ ಅಂತ್ಯ ಸಂಸ್ಕಾರ (Cremation near Road) ಮಾಡಿದ್ದಾರೆ.
ತುಮಕೂರು ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ದುರ್ಗದಹಳ್ಳಿ ಗ್ರಾಮದ ತಿಮ್ಮರಾಜುರವರ ತಂದೆ ಪೆದ್ದಯ್ಯ ಎಂಬುವವರು ಮೃತಪಟ್ಟಿದ್ದರು. ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದ ಪೆದ್ದಯ್ಯ ಅವರ ಶವದ ಅಂತ್ಯ ಸಂಸ್ಕಾರ ನಡೆಸಲು ಭಾರಿ ಕಷ್ಟ ಎದುರಿಸಿದರು. ಅವರಿಗೆ ಸ್ವಂತ ಜಮೀನು ಇಲ್ಲ. ಅಂತ್ಯಸಂಸ್ಕಾರಕ್ಕೆ ಸಾರ್ವಜನಿಕ ಸ್ಮಶಾನವಿಲ್ಲ. ಹೀಗಾಗಿ ಏನು ಮಾಡುವುದು ಎಂದು ತಿಳಿಯದೆ ಅವರು ಹಿನ್ನೆಲೆ ರಸ್ತೆ ಬದಿಯೇ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ತಿಮ್ಮನಾಯಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಬದಿ ಮೃತರ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಪ್ರತಿಭಟನೆ ಸಲ್ಲಿಸಲಾಯಿತು.
ಇದನ್ನೂ ಓದಿ : Electric Crematorium | ವಿದ್ಯುತ್ ಚಿತಾಗಾರದಲ್ಲಿ ಕೆಟ್ಟುನಿಂತ ಯಂತ್ರಗಳು; ಶವ ಸಂಸ್ಕಾರಕ್ಕೆ ಜನರ ಪರದಾಟ
ದುರ್ಗದಹಳ್ಳಿ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ಮಂಜೂರು ಮಾಡಿಕೊಡುವಂತೆ ಹಲವು ಬಾರಿ ಮನವಿ ಮಾಡಲಾಗಿತ್ತು. ತಹಸೀಲ್ದಾರ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಜಮೀನು ಮಂಜೂರು ಮಾಡಲು ಅಧಿಕಾರಿಗಳು ವಿಫಲವಾಗಿದ್ದರು. ಹೀಗಾಗಿ ಸಾರ್ವಜನಿಕರ ಸಹಕಾರದಿಂದಲೇ ತಿಮ್ಮರಾಜು ಅವರು ರಸ್ತೆ ಬದಿಯೇ ಅಂತ್ಯ ಸಂಸ್ಕಾರ ನಡೆಸಿದರು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.