ವಿಜಯಪುರ: ಆಟವಾಡುವ ವೇಳೆ ಬಾಲಕ ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ (Crime News) ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ನಡೆದಿದೆ. ಜಮೀನಿನಲ್ಲಿ ಆಟವಾಡುತ್ತಿದ್ದಾಗ ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಕೊನೆಯುಸಿರೆಳೆದಿದ್ದಾನೆ. ಖುಷಾಲ್ ಹಾಲ್ಯಾಳ (6) ಮೃತ ಬಾಲಕ. ಬಸವನಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಾಲೂರಿನಲ್ಲಿ ರೈಲಿಗೆ ಸಿಲುಕಿ ದಂಪತಿ ಸಾವು
ಕೋಲಾರ: ಜಿಲ್ಲೆಯ ಮಾಲೂರು ರೈಲ್ವೆ ನಿಲ್ದಾಣ ಬಳಿ ರೈಲಿಗೆ ಸಿಲುಕಿ ದಂಪತಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಎಡಗಿನ ಬೆಲೆ ಗ್ರಾಮದ ನಿವಾಸಿಗಾದ ವಿದ್ಯಾಶ್ರೀ (38) ಮತ್ತು ಸಿದ್ದಲಿಂಗರಾಜು (46) ಮೃತ ದಂಪತಿ. ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದ್ದು, ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Accident Case : ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ; ಎರಡು ಹೋಳಾಯ್ತು ತಲೆ ಬುರುಡೆ
ಶಾರ್ಟ್ ಸಕ್ಯೂರ್ಟ್‌ನಿಂದ ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ; 4 ವರ್ಷದ ಮಗು ಉಸಿರುಗಟ್ಟಿ ಸಾವು
ಬೆಂಗಳೂರು: ಅಪಾರ್ಟ್‌ಮೆಂಟ್‌ವೊಂದರಲ್ಲಿ ಶಾರ್ಟ್ ಸಕ್ಯೂರ್ಟ್‌ನಿಂದ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿದ್ದರಿಂದ 4 ವರ್ಷದ ಮಗುವೊಂದು ಉಸಿರುಗಟ್ಟಿ (Fire Accident) ಮೃತಪಟ್ಟಿದೆ. ಈ ಹೃದಯವಿದ್ರಾವಕ ಘಟನೆ ಬೆಂಗಳೂರಿನ ಆರ್.ಟಿ.ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದಲ್ಲಿ ಭಾನುವಾರ (ಏ.16) ಸಂಜೆ ಸಂಭವಿಸಿದೆ. ಅನೂಪ್ (4 ವರ್ಷ) ಮೃತ ದುರ್ದೈವಿ.
ಸುಲ್ತಾನ್ ಪಾಳ್ಯ ಬಳಿಯಿರುವ ವುಡ್ ಅಪಾರ್ಟ್‌ಮೆಂಟ್‌ನ ನಾಲ್ಕನೇ ಮಹಡಿಯಲ್ಲಿರುವ ಮನೆಯೊಂದರಲ್ಲಿ ಶಾರ್ಟ್ ಸಕ್ಯೂರ್ಟ್ ಆಗಿದೆ. ಕುರಾನ್ ಖಂಡಕ್, ಲಕ್ಷ್ಮಿ ದಂಪತಿಯ 4 ವರ್ಷದ ಗಂಡು ಮಗು ಅನೂಪ್ ಮೃತಪಟ್ಟಿದ್ದಾನೆ. ಕುರಾನ್ ಖಂಡಕ್, ಲಕ್ಷ್ಮಿ ದಂಪತಿ ನೇಪಾಳ ಮೂಲದವರಾಗಿದ್ದು, ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲೇ ವಾಸವಾಗಿದ್ದರು. ಇನ್ನೂ ಇದೇ ವುಡ್ ಅಪಾರ್ಟ್‌ಮೆಂಟ್‌ನಲ್ಲಿ ಮಗುವಿನ ತಂದೆ ಕುರಾನ್ ಖಂಡಕ್ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಲಕ್ಷ್ಮಿ ಹೌಸ್ ಕೀಪಿಂಗ್ ಆಗಿ ಕೆಲಸ ಮಾಡುತ್ತಿದ್ದರು.
ದಂಪತಿ ವಾಸ್ತವ್ಯಕ್ಕಾಗಿ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯಲ್ಲಿ ಮನೆ ನೀಡಲಾಗಿತ್ತು. ಗಂಡ-ಹೆಂಡತಿ ಕೆಲಸ ಮಾಡುವುದರಿಂದ ಮಗುವಿನ ಲಾಲನೆ-ಪಾಲನೆ ಕಷ್ಟವಾಗಿತ್ತು. ಹೀಗಾಗಿ ಪ್ರತಿದಿನ ಮಧ್ಯಾಹ್ನ ಮಗುವನ್ನು ಮಲಗಿಸಿ ಡೋರ್ ಲಾಕ್ ಹಾಕಿಕೊಂಡು ತಮ್ಮ ಹೊರಗಿನ ಕೆಲಸ ಮಾಡುತ್ತಿದ್ದರು.
ನಿನ್ನೆ ಭಾನುವಾರ ಸಹ ಮಗು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್ ಮಾಡಿಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಸಂಭವಿಸಿದೆ. ಮಗು ಮಲಗಿದ್ದಾಗ ಸಂಜೆ ವೇಳೆ ಎಲೆಕ್ಟ್ರಿಕಲ್ ಶಾರ್ಟ್ ಸಕ್ಯೂರ್ಟ್ ಕಾಣಿಸಿಕೊಂಡು ದಟ್ಟ ಹೊಗೆ ಕಾಣಿಸಿಕೊಂಡಿದೆ.
ಇದನ್ನೂ ಓದಿ | Elephant Attack: ವಾಕಿಂಗ್ ಹೋಗುತ್ತಿದ್ದ ವ್ಯಕ್ತಿ ಮೇಲೆರಗಿ ಕೊಂದುಹಾಕಿದ ಒಂಟಿ ಸಲಗ
ಇತ್ತ ಎಂದಿನಂತೆ ಕೆಲಸ ಮುಗಿಸಿಕೊಂಡು ಬಂದಾಗ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡು ಪೋಷಕರು ಕೂಡಲೇ ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಅಗ್ನಿ ನಂದಿಸಿದರೂ ಅಷ್ಟೊತ್ತಿಗಾಗಲೇ ಉಸಿರುಗಟ್ಟಿ ಮಗುವಿನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ನಡೆದಿದೆ.