ಬೆಂಗಳೂರು: ಮಾದಕ ವಸ್ತುಗಳ ಮಾರಾಟದ ವಿರುದ್ಧ ಸಮರ ಸಾರಿರುವ ಬೆಂಗಳೂರು ಪೊಲೀಸರು, ಪ್ರಕರಣವೊಂದರ (Crime News) ತನಿಖೆಯ ಜಾಡು ಹಿಡಿದು ಹೊರಟು ಆಂಧ್ರ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇಲ್ಲಿನ ಜಯನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಹಶೀಷ್ ಆಯಿಲ್ ಹಾಗೂ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ನಯಾಜ್ ಪಾಷಾ, ಸಾಗರ್ ಸಾಹೋ, ಶೇಷಗಿರಿ ಬಂಧಿತ ಆರೋಪಿಗಳು.
ಈ ಹಿಂದೆ ಗಾಂಜಾ ಸೇವನೆ ಪ್ರಕರಣದಲ್ಲಿ ಆರೋಪಿ ನಯಾಜ್ ಪಾಷಾ ಎಂಬಾತ ಬಂಧನಕ್ಕೊಳಗಾಗಿದ್ದ. ಪೊಲೀಸರು ವಿಚಾರಣೆ ನಡೆಸಿದಾಗ ಗಾಂಜಾ ಸರಬರಾಜು ಆಗುತ್ತಿದ್ದರ ಬಗ್ಗೆ ಮಾಹಿತಿ ನೀಡಿದ್ದ. ಪ್ರಕರಣವನ್ನು ಕೈಗೆತ್ತಿಕೊಂಡ ಜಯನಗರ ಪೊಲೀಸರು ಇದಕ್ಕಾಗಿ ತಂಡವನ್ನು ರಚನೆ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದರು.
ಆಂಧ್ರದಲ್ಲಿ ಅಡಗಿದ್ದ ಆರೋಪಿಗಳು
ಆರೋಪಿ ನಯಾಜ್ ನೀಡಿದ ಮಾಹಿತಿ ಮೇರೆಗೆ ಜಯನಗರ ಇನ್ಸ್‌ಪೆಕ್ಟರ್ ಮಂಜುನಾಥ್ ಮತ್ತು ತಂಡ ಪಕ್ಕದ ಆಂಧ್ರ ಪ್ರದೇಶದ ಶ್ರೀಕಾಕುಲಂಗೆ ತೆರಳಿ ಅಡಗಿದ್ದ ಇತರೆ ಆರೋಪಿಗಳನ್ನು ಬಂಧಿಸಿದ್ದಾರೆ. ಆಂಧ್ರದ ಸ್ಥಳೀಯ ಪೊಲೀಸರ ಸಹಾಯ ಪಡೆದ ಕರ್ನಾಟಕ ಪೊಲೀಸರು ಸಾಗರ್ ಸಾಹೋ ಹಾಗೂ ಶೇಷಗಿರಿ ಎಂಬುವರನ್ನು ಬಂಧಿಸಿ ಕರೆ ತಂದಿದ್ದಾರೆ. ಬಂಧಿತರಿಂದ 20 ಲಕ್ಷ ರೂ. ಮೌಲ್ಯದ 50 ಕೆಜಿ ಗಾಂಜಾ ಹಾಗೂ 3 ಕೋಟಿ ರೂ. ಮೌಲ್ಯದ 6 ಕೆ.ಜಿ ಹಶೀಷ್ ಆಯಿಲ್ ಅನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | Murder Attempt | ಮಂಗಳೂರಲ್ಲಿ ವ್ಯಕ್ತಿ ಮೇಲೆ ಗಾಂಜಾ ಗ್ಯಾಂಗ್‌ನಿಂದ ದಾಳಿ, ಕೊಲೆ ಯತ್ನ