ಬೆಂಗಳೂರು: ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಪಾದರಾಯನಪುರದಲ್ಲಿ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ, ಗಲಭೆ ನಡೆಸಿದ ಪ್ರಕರಣದಲ್ಲಿ (Padarayanapura Riots) 375 ಆರೋಪಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ (High court) ರದ್ದುಗೊಳಿಸಿದೆ.
2020ರ ಏಪ್ರಿಲ್ 19ರಂದು ಕೋವಿಡ್ 19 ಸೋಂಕಿತರ ಪತ್ತೆ ಕಾರ್ಯದ ವೇಳೆ ಬಿಬಿಎಂಪಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿ, ಟೇಬಲ್, ಟೆಂಟ್ ಕಿತ್ತೆಸೆದು ದಾಂಧಲೆ ನಡೆಸಿದ ಆರೋಪದಲ್ಲಿ ನವಾಜ್ ಪಾಷಾ ಸೇರಿ 375 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿತ್ತು. ಆದರೆ, ಸಕ್ಷಮ ಪ್ರಾಧಿಕಾರ ಖಾಸಗಿ ದೂರು ದಾಖಲಿಸದ ಹಿನ್ನೆಲೆ ನ್ಯಾಯಮೂರ್ತಿ ಕೆ.ನಟರಾಜನ್ ಅವರು ತಾಂತ್ರಿಕ ಕಾರಣಗಳಿಂದ ಕೇಸ್ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ನವಾಜ್ ಪಾಷಾ ಸೇರಿದಂತೆ ಇತರೆ ಆರೋಪಿಗಳು ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ಅರ್ಜಿದಾರರಿಗೂ ಪ್ರಕರಣಕ್ಕೂ ಸಂಬಂಧವಿಲ್ಲ. ಅವರೆಲ್ಲರ ಮನೆಗಳು ಬೇರೆಡೆ ಇವೆ. ಪೊಲೀಸರು ನಿಜವಾದ ಆರೋಪಿಗಳನ್ನು ಗುರುತಿಸದೆ ಸಂಬಂಧ ಇಲ್ಲದವರ ಮೇಲೆಲ್ಲಾ ಪ್ರಕರಣ ದಾಖಲಿಸಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಾಗ ಅವರಲ್ಲಿ ಸೋಂಕಿತರ ಪಟ್ಟಿಯೇ ಇರಲಿಲ್ಲ. ಗಲಭೆ ನಡೆದಿದೆ ಎನ್ನಲಾಗಿದೆ. ಆದರೆ ಯಾರೊಬ್ಬರಿಗೂ ಗಾಯವಾಗಿಲ್ಲ. ಹಾಗಾಗಿ, ಪ್ರಕರಣ ರದ್ದುಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.
ವಾದ-ಪ್ರತಿವಾದ ಆಲಿಸಿದ್ದ ನ್ಯಾಯಪೀಠ, ‘ಭಾರತೀಯ ದಂಡ ಸಂಹಿತೆ-1860ರ ಕಲಂ 172ರಿಂದ 188ರವರೆಗಿನ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ವಿವಿಧ ಕಲಂಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ, ಈ ಕುರಿತಂತೆ ಸಕ್ಷಮ ಪ್ರಾಧಿಕಾರ ದೂರು ದಾಖಲಿಸಿಲ್ಲ. ಅಂತೆಯೇ, ಬಿಬಿಎಂಪಿ ಅಧಿಕಾರಿಗಳು ಪಾದರಾಯನಪುರವನ್ನು ಸೀಲ್ ಡೌನ್ ಮಾಡಲು ಹೋದಾಗ 51 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು ಎಂದು ಹೇಳಿದ್ದಾರೆ. ಆದರೆ, ಯಾರಿಗೆಲ್ಲಾ ಆ ಸೋಂಕು ತಗುಲಿತ್ತು ಎಂಬ ಬಗ್ಗೆ ಯಾವುದೇ ವಿವರಗಳನ್ನು ಆರೋಪಪಟ್ಟಿಯಲ್ಲಿ ದಾಖಲಿಸಿಲ್ಲ’ ಎಂದು ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ | Crime News : ಹೆಡ್ ಮಾಸ್ಟರ್ ಅಪಘಾತದಲ್ಲಿ ದುರ್ಮರಣ, ಡಿಆರ್ ಪೊಲೀಸ್ ಆತ್ಮಹತ್ಯೆ
‘ಪೊಲೀಸರು 120ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಗಲಭೆ ನಡೆದಿದೆ ಎನ್ನಲಾದ ಸಮಯದಲ್ಲಿ ಯಾವುದೇ ಆಸ್ತಿ-ಪಾಸ್ತಿ ನಷ್ಟವಾಗಿಲ್ಲ. ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ. ಸಾಕ್ಷಿಗಳ ಹೇಳಿಕೆಗಳನ್ನು ಒಂದೇ ರೀತಿಯಲ್ಲಿ ದಾಖಲಿಸಿಕೊಳ್ಳಲಾಗಿದೆ’ ಎಂಬ ಅಭಿಪ್ರಾಯದೊಂದಿಗೆ ಎಲ್ಲರ ವಿರುದ್ಧದ ಪ್ರಕರಣ ಹೈಕೋರ್ಟ್ ರದ್ದುಗೊಳಿಸಿದೆ.