Site icon Vistara News

Criminal politics | ರಾಮುಲು ಗೂಂಡಾಗಿರಿ ತಪ್ಪೊಪ್ಪಿಗೆ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿಯನ್ನು ಕೆಣಕಿದ ಕಾಂಗ್ರೆಸ್‌

Sriramulu

ಬೆಂಗಳೂರು: ʻನಾನು ವಿದ್ಯಾರ್ಥಿಯಾಗಿದ್ದಾಗ ಕಾಪಿ ಹೊಡೆದು ಪಾಸಾಗಿದ್ದೇನೆ. ಕಾಪಿ ಹೊಡೆಯುವುದರಲ್ಲಿ ನಾನು ಪಿಎಚ್‌ಡಿ. ನಾನು ಗೂಂಡಾಗಿರಿ ಮಾಡ್ತಿದ್ದೆ. ಜಗಳ ಮಾಡುತ್ತಿದ್ದೆ. ಓದು ತಲೆಗೆ ಹತ್ತಲಿಲ್ಲʼʼ… ಹೀಗೆ ಸಾರಿಗೆ ಸಚಿವ ಶ್ರೀರಾಮುಲು ಲಹರಿಯಲ್ಲಿ ಮಾತನಾಡುತ್ತಿದ್ದರೆ ಕಾಂಗ್ರೆಸ್‌ ಒಳಗೊಳಗೇ ನಗುತ್ತಿತ್ತು! ಯಾಕೆಂದರೆ, ಕ್ರಿಮಿನಲ್‌ ಪಾಲಿಟಿಕ್ಸ್‌ (Criminal politics) ಅಭಿಯಾನದಲ್ಲಿ ಬಿಜೆಪಿಯನ್ನು ಗೇಲಿ ಮಾಡುವುದಕ್ಕೆ, ಹಣಿಯುವುದಕ್ಕೆ ಹೊಸ ಅಸ್ತ್ರ ಸಿಕ್ಕಿತು ಎಂದು!

ಬಿಜೆಪಿಗೆ ರೌಡಿಗಳು ಸೇರಿಕೊಳ್ಳುತ್ತಿರುವುದನ್ನು ಚೆನ್ನಾಗಿ ಎನ್‌ಕ್ಯಾಶ್‌ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ ಇದೀಗ ಶ್ರೀರಾಮುಲು ಟ್ವೀಟ್‌ನ್ನು ಮುಂದಿಟ್ಟುಕೊಂಡು ಮತ್ತಷ್ಟು ಕೆಣಕಿದೆ. ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿ, ʻಯಾವೊಬ್ಬ ಬಿಜೆಪಿಗರಿಗೂ ಒಳ್ಳೆಯ ಇತಿಹಾಸವಿಲ್ಲವೇಕೆ?ʼ ಎಂದು ಪ್ರಶ್ನಿಸಿದೆ.

ಕಾಂಗ್ರೆಸ್‌ ಮಾಡಿದ ಟ್ವೀಟ್‌ಗಳು
೧. ಬಿಜೆಪಿಯಲ್ಲಿ ರೌಡಿ ಮೋರ್ಚಾಗೆ ಮನ್ನಣೆ ಸಿಗುತ್ತಿರುವಾಗ ಬಿಜೆಪಿಗರು ಒಬ್ಬೊಬ್ಬರಾಗಿಯೇ ನಾನೂ ರೌಡಿಯಾಗಿದ್ದೆ, ನಾನೂ ಗೂಂಡಾಗಿರಿ ಮಾಡಿದ್ದೆ ಎಂದು ತಮ್ಮ ಅರ್ಹತೆಗಳನ್ನು ಮುಂದಿಡುತ್ತಿದ್ದಾರೆ! ಶ್ರೀರಾಮುಲು ಅವರು ಅಂದು ಕಾಪಿ ಹೊಡೆಯುವುದರಲ್ಲಿ ಪಿಹೆಚ್‌ಡಿ ಮಾಡಿದ್ದರು ಇಂದು ಭ್ರಷ್ಟಾಚಾರದಲ್ಲಿ ಪಿಹೆಚ್‌ಡಿ ಮಾಡಿದ್ದಾರೆ!

೨. ಯಾವುದೇ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ನಳಿನ್‌ ಕುಮಾರ್‌ ಕಟೀಲ್‌ ಮತ್ತು ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದವರು ಬೆತ್ತನಗೆರೆ ಶಂಕರನನ್ನು ಸೇರಿಸಿಕೊಂಡಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಈಗ ನೀವು ಹೇಳಿದ್ದು ಸುಳ್ಳು ಎಂಬುದನ್ನು ಒಪ್ಪುತ್ತೀರಾ? ತಪ್ಪಾಗಿದೆ ಎಂದಾದರೆ ಏಕೆ ಇನ್ನೂ ಪಕ್ಷದಿಂದ ಹೊರಹಾಕಿಲ್ಲ?

ಮನೆಯೊಳಗಿನ ವಿಚಾರವನ್ನೂ ಕೆಣಕ್ತೀರಲ್ಲಾ?
ಈ ನಡುವೆ, ತನಗೆ ನಾಲ್ಕು ಮಕ್ಕಳಾಗಲು ಕಾಂಗ್ರೆಸ್‌ ಕಾರಣ. ಆವಾಗಲೇ ಜನಸಂಖ್ಯಾ ನಿಯಂತ್ರಣ ಪಾಲಿಸಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಬಿಜೆಪಿ ಸಂಸದ ರವಿ ಕಿಶನ್‌ ಹೇಳಿದ್ದನ್ನು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ʻʻಎಲ್ಲದಕ್ಕೂ ಕಾಂಗ್ರೆಸ್ಸನ್ನೇ ಹೊಣೆ ಮಾಡುತ್ತಿದ್ದ ಬಿಜೆಪಿಗರು ಈಗ ತಮ್ಮ ಮನೆಯ ಖಾಸಗಿ ವಿಚಾರಗಳಿಗೂ ಕಾಂಗ್ರೆಸ್ಸನ್ನೇ ಹೊಣೆ ಮಾಡಿದ್ದಾರೆ. ಬಿಜೆಪಿಗರಿಗೆ ಮಕ್ಕಳು ಹುಟ್ಟುವುದಕ್ಕೂ ಕಾಂಗ್ರೆಸ್ಸೇ ಕಾರಣ, ಮಕ್ಕಳು ಹುಟ್ಟದಿರುವುದಕ್ಕೂ ಕಾಂಗ್ರೆಸ್ಸೇ ಕಾರಣ! ಮತಿಗೇಡಿ ಬಿಜೆಪಿಗರಿಂದ ಇನ್ನೂ ಯಾವ ಹೊಣೆಗಾರಿಕೆಯನ್ನು ಕಾಂಗ್ರೆಸ್ ಹೊರಬೇಕಿದೆಯೋ!ʼʼ ಎಂದು ಹೇಳಿದೆ.

ಇದನ್ನೂ ಓದಿ | Yellapura News | ನಿರ್ಭೀತಿಯಿಂದ ವಾಸ ಮಾಡಿ, ನಿಮ್ಮ ಬೆನ್ನಿಗೆ ಸರ್ಕಾರವಿದೆ: ಸಿದ್ಧಿ ಜನಾಂಗಕ್ಕೆ ಸಚಿವ ಶ್ರೀರಾಮುಲು ಭರವಸೆ

Exit mobile version