Site icon Vistara News

Criminal politics | ರೌಡಿಶೀಟರ್‌ಗಳಿಗೆ ಕ್ಲೀನ್‌ ಚಿಟ್‌ ಕೊಟ್ಟಿಲ್ಲ ಎಂದ ಸಿ.ಟಿ ರವಿ, ಕೆಪಿಸಿಸಿ ಅಧ್ಯಕ್ಷರೇ ಕೊತ್ವಾಲ ಶಿಷ್ಯ ಎಂದ ರೇಣುಕಾಚಾರ್ಯ

CT Ravi BJP

ಚಿಕ್ಕಮಗಳೂರು/ ಚಿತ್ರದುರ್ಗ: ರೌಡಿ ರಾಜಕೀಯದ ಚರ್ಚೆ (Criminal politics) ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ಭಾರಿ ಭಾರಿ ವಾಗ್ವಾದಕ್ಕೆ ಕಾರಣವಾಗಿದೆ. ಈ ನಡುವೆ, ರೌಡಿ ಶೀಟ್‌ ಇರೋರೆಲ್ಲ ರೌಡಿಗಳಲ್ಲ ಎಂಬ ಹೇಳಿಕೆ ನೀಡಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಮ್ಮ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಇದರ ನಡುವೆ, ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಡಿ.ಕೆ. ಶಿವಕುಮಾರ್‌ ಮೇಲೆ ಕಿಡಿ ಕಾರಿದ್ದಾರೆ.

ಸಿ.ಟಿ. ರವಿ ಹೇಳಿದ್ದೇನು?
ʻʻಎಲ್ಲಾ ರೌಡಿಶೀಟರ್‌ಗಳು ರೌಡಿಗಳಲ್ಲ ಎಂದು ನಾನು ಹೇಳಿದ್ದೆ. ಹಾಗಂತ ರೌಡಿಶೀಟ್‌ನಲ್ಲಿರೋ ಎಲ್ಲರಿಗೂ ಕ್ಲೀನ್ ಚಿಟ್ ಕೊಟ್ಟಿಲ್ಲʼʼ ಎಂದು ಸಿ.ಟಿ. ರವಿ ಹೇಳಿದರು.

ʻʻಸಾವಿರಾರು ಜನರನ್ನು ರಾಜಕೀಯದ ಕಾರಣಕ್ಕೆ ರೌಡಿ ಶೀಟ್‌ನಲ್ಲಿ ಸೇರಿಸ್ತಾರೆ. ಆದರೆ, ಅವರು ಯಾರೂ ರೌಡಿಗಳಾಗಿರುವುದಿಲ್ಲ, ಅವರ ಬಗ್ಗೆ ಹೇಳಿದ್ದೇನೆ. ಹಫ್ತಾ, ಬೆದರಿಕೆ ಹಾಕುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರೋರ ಬಗ್ಗೆ ನಾನೆಂದೂ ಕ್ಲೀನ್‌ಚಿಟ್ ಕೊಡಲ್ಲ. ರಾಜಕೀಯ ಕಾರಣಕ್ಕೆ ರೌಡಿ‌ಶೀಟರ್ ಸೇರಿಸಿರುವವರ ಬಗ್ಗೆ ಹೇಳಿದ್ದೇನೆʼʼ ಎಂದ ಸಿ.ಟಿ. ರವಿ ಅವರು, ಆರ್.ವಿ ದೇವರಾಜ್, ಹರಿಪ್ರಸಾದ್ ಬಗ್ಗೆ ಕಾಂಗ್ರೆಸ್ ಅವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ನನ್ನನ್ನು ಕುಡುಕ ಎಂದ್ರು, ಇದು ಕಾಂಗ್ರೆಸ್‌ ಮನಸ್ಥಿತಿ
ʻʻಈ ಹಿಂದೆ ನನ್ನನ್ನು ಕುಡುಕ ಅಂತಾ ಹೇಳಿದ್ರು. ಕುಡಿದು, ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಒಂದು ಉದಾಹರಣೆ ಇದ್ಯಾ? ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿಯಲ್ಲಿ ಬೆಳೆದವನು ನಾನು. ಇಂಥ ಹೇಳಿಕೆಗಳು ಕಾಂಗ್ರೆಸ್‌ನ ಮನಸ್ಥಿತಿಯನ್ನು ತೋರಿಸುತ್ತದೆ. ತಾನು ಕಳ್ಳ ಪರರ ನಂಬ ಅನ್ನೋ ಮನಸ್ಥಿತಿ ಕಾಂಗ್ರೆಸ್‌ನದ್ದು. ಬೆಳಗ್ಗೆ 5 ಗಂಟೆಯಿಂದ ರಾತ್ರಿ 11 ಗಂಟೆ ತನಕ ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆʼʼ ಎಂದು ಸಿ.ಟಿ. ರವಿ ಹೇಳಿಕೊಂಡರು.

ಕಾಂಗ್ರೆಸ್ ರಾಜ್ಯ ಅಧ್ಯಕ್ಷನೇ ಒಬ್ಬ ರೌಡಿ
ಈ ನಡುವೆ, ಹೊನ್ನಾಳಿಯಲ್ಲಿ ಮಾತನಾಡಿದ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು, ಕಾಂಗ್ರೆಸ್‌ನ ರಾಜ್ಯಾಧ್ಯಕ್ಷರೇ ಒಬ್ಬ ರೌಡಿ. ಅವರು ಕೊತ್ವಾಲ ರಾಮಚಂದ್ರನ ಶಿಷ್ಯ ಡಿಕೆಶಿ ಅನ್ನೋದು ಎಲ್ಲರಿಗೂ ಗೊತ್ತು. ಗೂಂಡಾಗಳನ್ನು, ರೌಡಿಗಳನ್ನು ಪೋಷಿಸುವ ಸಂಸ್ಕೃತಿ ಕಾಂಗ್ರೆಸ್‌ನದ್ದು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೇ ಮ್ಯಾನ್ ಪವರ್ ಮತ್ತು ಮನಿ ಪವರ್‌ನಿಂದʼʼ ಎಂದು ಹೇಳಿದರು.

ʻʻರೌಡಿಗಳಿಗೆ ಭಾಗ್ಯ ಕೊಟ್ಟಿದ್ದೇ ಕಾಂಗ್ರೆಸ್. ಎಲ್ಲ ರೌಡಿಗಳಿರೋದು ಕಾಂಗ್ರೆಸ್‌ನಲ್ಲೇ. ಬಿಜೆಪಿ ಅಂದ್ರೆ ದೇಶಭಕ್ತರಿರೋ ಪಕ್ಷ, ರೌಡಿಗಳನ್ನು ಮಟ್ಟ ಹಾಕಿದ್ದೇ ಬಿಜೆಪಿʼʼ ಎಂದು ರೇಣುಕಾಚಾರ್ಯ ಹೇಳಿದರು. ʻʻಬಿಜೆಪಿಯಲ್ಲಿ ಸುಶಿಕ್ಷಿತರ ದೊಡ್ಡ ಪಡೆ ಇದೆ. ರೌಡಿಗಳನ್ನು ತಗೊಂಡು ನಾವೇನು ಮಾಡೋಣ. ಬಿಜೆಪಿ ರೌಡಿಗಳ ಮನಪರಿವರ್ತಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದೆ, ಅಂತಹ ಕೆಲವರಿಗೆ ಅವಕಾಶ ಕೊಟ್ಟಿದೆ. ಗೂಂಡಾ ಮನಸ್ಸನ್ನು ಪರಿವರ್ತನೆ ಮಾಡಿದ ಪಕ್ಷ ಇದ್ದರೆ ಅದು ಬಿಜೆಪಿʼʼ ಎಂದು ರೇಣುಕಾಚಾರ್ಯ ನುಡಿದರು.

ಇದನ್ನೂ ಓದಿ | Criminal politics | ಕಾಂಗ್ರೆಸ್‌ಗೂ ಇದೆ ಕ್ರಿಮಿನಲ್‌ ಕನೆಕ್ಷನ್‌, ಮಾಜಿ ಶಾಸಕರ ಬರ್ತ್‌ಡೇ ಬ್ಯಾನರ್‌ನಲ್ಲಿ ರೌಡಿಗಳದೇ ದರ್ಬಾರ್‌!

Exit mobile version