ಬೆಂಗಳೂರು: ೨೦೨೩ ವಿಧಾನಸಭಾ ಚುನಾವಣೆ ಸಮೀಪ ಆಗುತ್ತಿರುವ ಹೊತ್ತಿನಲ್ಲಿ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಕೆಸರೆರಚಾಟ ಜೋರಾಗಿದೆ. ಸದ್ಯ ರೌಡಿ ರಾಜಕೀಯ (Criminal Politics) ಚಾಲ್ತಿಯಲ್ಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಮಾಡಿದ್ದು, ಸೋಲಿನ ಭಯವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸಂಘಪರಿವಾರದ ಅಧಃಪತನ ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಬಿಜೆಪಿ ರೌಡಿ ಮೋರ್ಚಾ ವೆಬ್‌ಸೈಟ್ ಲಿಂಕ್ ಅನ್ನೂ ಹಾಕಿದ್ದಾರೆ.
ಸಿದ್ದರಾಮಯ್ಯ ಟ್ವೀಟ್‌ನಲ್ಲೇನಿದೆ?
೧. ಸೋಲಿನ ಭೀತಿಯಲ್ಲಿರುವ ರಾಜ್ಯ ಬಿಜೆಪಿಯು ಬೀದಿ ರೌಡಿಗಳನ್ನು ಕಟ್ಟಿಕೊಂಡು ಚುನಾವಣೆ ಗೆಲ್ಲಲು ಹೊರಟಿರುವುದು, ಧರ್ಮ-ಸಂಸ್ಕೃತಿ ಬಗ್ಗೆ ಬೊಗಳೆ ಬಿಡುವ ಸಂಘ ಪರಿವಾರದ ನೈತಿಕ ಅಧಃಪತನವಲ್ಲದೆ ಮತ್ತೇನು?
ಇದನ್ನೂ ಓದಿ | Criminal politics | ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಈಗ ಕೆಪಿಸಿಸಿ ಅಧ್ಯಕ್ಷ: ಬಿಜೆಪಿ ಚಾರ್ಜ್‌ಶೀಟ್
೨. ಗಣಿಲೂಟಿಕೋರ ರೌಡಿಗಳನ್ನು ಕಟ್ಟಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿಯ ಮುಖ್ಯಮಂತ್ರಿಗಳು ಕೊನೆಗೆ ಜೈಲು ಪಾಲಾಗಬೇಕಾಯಿತು. ಈಗ ಹೊಸ ರೌಡಿಪಡೆ ಕಟ್ಟುತ್ತಿರುವುದು ಯಾರನ್ನು ಜೈಲಿಗೆ ಕಳಿಸಲು?
೩. ಬಾಯಿ ಬಿಟ್ಟರೆ ಸಂಸ್ಕೃತಿ, ಆಚಾರ, ವಿಚಾರದ ಮಂತ್ರ ಉದುರಿಸುವ ಆರ್‌ಎಸ್‌ಎಸ್ ನಾಯಕರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿಕೊಂಡಿದ್ದು ರೌಡಿ ಮೋರ್ಚಾ ಕಟ್ಟಲು ಸಲಹೆ ನೀಡಲಿಕ್ಕಾಗಿಯೇ? ಆರ್‌ಎಸ್‌ಎಸ್ ಮೌನ ಸಮ್ಮತಿ ಲಕ್ಷಣವೇ?
ಈ ಮೂಲಕ ಬಿಜೆಪಿ ಸರ್ಕಾರದಲ್ಲಿ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜೈಲಿಗೆ ಹೋಗಿಬಂದಿರುವುದನ್ನೂ ಸಹ ಟ್ವೀಟ್ ಮೂಲಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ | Criminal politics | ರೌಡಿ ಪಾಲಿಟಿಕ್ಸ್ ಅಭಿಯಾನ ತೀವ್ರ: ಬಿಜೆಪಿಯನ್ನು ಗೇಲಿ ಮಾಡಲು ವೆಬ್‌ಸೈಟ್ ತೆರೆದ ಕಾಂಗ್ರೆಸ್