Site icon Vistara News

Criminal politics | RTI ಕಾರ್ಯಕರ್ತನ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿ ಜೆಡಿಎಸ್‌ಗೆ ಸೇರ್ಪಡೆ! ಜಮೀರ್‌ ವಿರುದ್ಧ ಕಣಕ್ಕೆ?

Gowarmma- Govindaraju

ಬೆಂಗಳೂರು: ಕ್ರಿಮಿನಲ್‌ ರಾಜಕಾರಣವೆಂಬ (Criminal politics) ವಿವಾದಿತ ಅಖಾಡಕ್ಕೆ ಜೆಡಿಎಸ್‌ ಅಧಿಕೃತ ಎಂಟ್ರಿ ಪಡೆದುಕೊಂಡಿದೆ! ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿ ಮತ್ತು ಅವರ ಪತ್ನಿ ಅಧಿಕೃತವಾಗಿ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಇದುವರೆಗೆ ಬಿಜೆಪಿ-ಕಾಂಗ್ರೆಸ್‌ ನಡುವೆ ನಡೆಯುತ್ತಿದ್ದ ʻಗ್ಯಾಂಗ್‌ ವಾರ್‌ʼ ಇನ್ನು ತ್ರಿಕೋನ ಸ್ಪರ್ಧೆಯ ಕಣವಾಗಲಿದೆ.

ಅಂದ ಹಾಗೆ ಕ್ರಿಮಿನಲ್‌ ಹಿನ್ನೆಲೆಯನ್ನು ಹೊಂದಿದ್ದು ಜೆಡಿಎಸ್‌ ಸೇರ್ಪಡೆಯಾದವರೆಂದರೆ ಆಜಾದ್ ನಗರ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಗೌರಮ್ಮ ಮತ್ತು ಅವರ ಪತಿ ಗೋವಿಂದರಾಜು. ಈ ದಂಪತಿ ಈ ಹಿಂದೆ ಚಾಮರಾಜ ಪೇಟೆಯಲ್ಲಿ ಆರ್‌ಟಿಐ ಕಾರ್ಯಕರ್ತ ಲಿಂಗರಾಜು ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದರು. ಇವರಿಬ್ಬರು ಸುಪಾರಿ ಕೊಟ್ಟು ಲಿಂಗರಾಜು ಅವರನ್ನು ಕೊಲ್ಲಿಸಿದ್ದರು ಎಂಬ ಆರೋಪವಿದೆ.

ಇದರ ಜತೆಗೆ ಕೊಲೆ ಪ್ರಕರಣ, ಅಕ್ರಮ ಹಣ ವರ್ಗಾವಣೆ, ಅಕ್ರಮ ಹಣ ಸಂಪಾದನೆ ಸೇರಿದಂತೆ ಹಲವು ಆರೋಪಗಳಿವೆ. ಸುಪಾರಿ ಕೊಟ್ಟು ಲಿಂಗರಾಜು ಹತ್ಯೆ ಮಾಡಲಾಗಿತ್ತು ಎಂಬ ಆರೋಪದಡಿ ಜೈಲುಪಾಲಾಗಿದ್ದ ಗೋವಿಂದರಾಜು, ಗೌರಮ್ಮ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಿಡುಗಡೆಗೊಂಡಿದ್ದರು.

೨೦೨೧ರಲ್ಲಿ ನಡೆದ ಕೊಲೆ ಇದಾಗಿದ್ದು, ಕೆಲವೇ ಸಮಯದಲ್ಲಿ ಬಿಡುಗಡೆಗೊಂಡಿದ್ದಾರೆ ಮತ್ತು ಕೇಸ್‌ನಲ್ಲಿ ಖುಲಾಸೆಗೊಂಡ ಬೆನ್ನಲ್ಲೇ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದಾರೆ.

ಚಾಮರಾಜಪೇಟೆ ಕ್ಷೇತ್ರದಲ್ಲಿ ಜಮೀರ್ ವಿರುದ್ಧ ಸ್ಪರ್ಧಿಸಲು ಗೋವಿಂದರಾಜು ಟಿಕೆಟ್‌ ಬಯಸಿದ್ದಾರೆ ಎಂದು ಹೇಳಲಾಗಿದೆ.

ಗೋವಿಂದ ರಾಜು ಹೇಳುವುದೇನು?
ಜೆಪಿ ಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗೋವಿಂದರಾಜು ಜೆಡಿಎಸ್‌ ಸೇರಿದ್ದಾರೆ. ಪಕ್ಷ ಸೇರ್ಪಡೆಯ ಬಳಿಕ ಮಾತನಾಡಿದ ಅವರು, ʻʻಇಂದು ಸಾಕಷ್ಟು ಮುಖಂಡರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಂಡಿದ್ದೇನೆ. ಕುಮಾರಸ್ವಾಮಿ ನಾಯಕತ್ವದಲ್ಲಿ ಕೆಲಸ ಮಾಡುತ್ತೇನೆ. ಪಕ್ಷ ಟಿಕೆಟ್ ನೀಡಿದ್ರೆ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆʼʼ ಎಂದು ಹೇಳಿದರು.

ʻʻನಾನು ಈಗ ಎಲ್ಲ ಆರೋಪಗಳಿಂದ ಮುಕ್ತನಾಗಿದ್ದೇನೆ. ಹಾಗಾಗಿ ಪಕ್ಷ ಸೇರ್ಪಡೆಯಿಂದ ಯಾರಿಗೂ ಮುಜುಗರವಾಗುವ ಪ್ರಶ್ನೆ ಇಲ್ಲʼʼ ಎಂದಿರುವ ಗೋವಿಂದರಾಜು, ʻʻಚಾಮರಾಜಪೇಟೆಯಲ್ಲಿ 2013, 2018ರಲ್ಲಿ ಜಮೀರ್‌ ಅವರಿಗೆ ಬೆಂಬಲವಾಗಿ ಕೆಲಸ ಮಾಡಿದ್ದೇನೆ. ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ಹಾಗಾಗಿ ಜೆಡಿಎಸ್ ಸೇರ್ಪಡೆಯಾಗಿದ್ದೇನೆ ಎಂದರು. ಟಿಕೆಟ್‌ ಕೊಡುವ ಬಗ್ಗೆ ಪಕ್ಷ ನಿರ್ಧರಿಸುತ್ತದೆ ಎಂದರು.

ಚಾಮರಾಜ ಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೌಡಿ ಸೈಲೆಂಟ್‌ ಸುನಿಲ್‌ ಬಿಜೆಪಿ ನಾಯಕರ ಜತೆ ಕಾಣಿಸಿಕೊಂಡ ಬಗ್ಗೆ ಯಾವುದೇ ಪ್ರತಿಕ್ರಿಯೆ ನಿರಾಕರಿಸಿದರು.

ಇದನ್ನೂ ಓದಿ | Criminal politics | ರಾಮುಲು ಗೂಂಡಾಗಿರಿ ತಪ್ಪೊಪ್ಪಿಗೆ ಹೇಳಿಕೆ ಮುಂದಿಟ್ಟುಕೊಂಡು ಬಿಜೆಪಿಯನ್ನು ಕೆಣಕಿದ ಕಾಂಗ್ರೆಸ್‌

Exit mobile version