Site icon Vistara News

Criminal politics | ಬಿಜೆಪಿಗೆ ನಾನು ಕಾಣೊಲ್ಲ, ಅವರಿಗೆ ರೌಡಿಗಳು, ಗೂಂಡಾಗಳು, ದುಡ್ಡಿರೋರೇ ಬೇಕು ಎಂದ ಮುತಾಲಿಕ್‌

pramod muthalik

ಕೊಪ್ಪಳ: ʻʻಬಿಜೆಪಿಗೆ ರೌಡಿಗಳು, ಗೂಂಡಾಗಳು, ದುಡ್ಡಿದ್ದವರು ಮಾತ್ರ ಕಾಣಿಸುತ್ತಾರೆ. ಪ್ರಮೋದ್‌ ಮುತಾಲಿಕ್ ಕಾಣೋದಿಲ್ಲʼʼ- ಹೀಗೆಂದು ಗರಂ (Criminal politics) ಆಗಿ ಹೇಳಿದ್ದಾರೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌.

ಹನುಮ ಜಯಂತಿ ಹಿನ್ನೆಲೆಯಲ್ಲಿ ಕೊಪ್ಪಳದ ಅಂಜನಾದ್ರಿಗೆ ಆಗಮಿಸಿದ ಪ್ರಮೋದ್ ಮುತಾಲಿಕ್ ಅವರು ರೌಡಿಗಳ ಸೇರ್ಪಡೆ ವಿಚಾರದಲ್ಲಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಬಿಜೆಪಿಗೆ ಇದು ಶೋಭೆಯಲ್ಲ ಎಂದರು.

ʻʻದುಡ್ಡಿದ್ದವರನ್ನು, ರೌಡಿಗಳನ್ನು, ಗೂಂಡಾಗಳನ್ನು ಪಕ್ಷದೊಳಗೆ ಸೇರಿಸಿಕೊಳ್ಳುತ್ತೀದ್ದೀರಿ. ತ್ಯಾಗ, ಬಲಿದಾನ, ಶ್ರಮ ವಹಿಸಿದ ಹಿಂದೂ ಪ್ರಖರ ಕಾರ್ಯಕರ್ತರು ನಿಮಗೆ ಕಾಣುತ್ತಿಲ್ಲ. ನಮ್ಮ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗಶ್ರೀ ಹಾಗೂ ನಾನು ರಾಜಕೀಯ ಪ್ರವೇಶ ನಿರ್ಧಾರ ಮಾಡಿದರೆ ನಾವು ನಿಮಗೆ ಕಾಣುವುದಿಲ್ಲ, ರೌಡಿಗಳು ಗೂಂಡಾಗಳು ಕಾಣುತ್ತಾರೆʼʼ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ʻʻಇಡೀ ಸಮಾಜದ ಸ್ವಾಸ್ಥ್ಯವನ್ನು, ನೈತಿಕತೆಯನ್ನು ಕೆಡಿಸುತ್ತಿರೋದು ಸರಿಯಲ್ಲʼʼ ಎಂದಿರುವ ಅವರು ಇದಕ್ಕೆಲ್ಲ ಸೆಡ್ಡು ಹೊಡೆಯುವಂತೆ ಹಿಂದೂ ಸಂಘಟನೆಗಳ ಒಕ್ಕೂಟದಿಂದ 25 ಪ್ರಖರ ಹಿಂದೂವಾದಿ ಅಭ್ಯರ್ಥಿಗಳನ್ನು ಕಣಕ್ಕಿಸುತ್ತೇವೆ ಎಂದರು. ಇದರಲ್ಲಿ ಐದು ಜನ ಸ್ವಾಮೀಜಿಗಳು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

೧೦೦ ಕೋಟಿ ಕೊಟ್ಟಿದ್ದಕ್ಕೆ ಅಭಿನಂದನೆ
ʻʻಕೊಪ್ಪಳದ ಗಂಗಾವತಿಯ ಅಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ರೂ. ಕೊಟ್ಟಿದ್ದಕ್ಕೆ ಸರ್ಕಾಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಅಂಜನಾದ್ರಿಯನ್ನು ಚುನಾವಣೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಮಾಡದೆ ಧಾರ್ಮಿಕ, ರಾಷ್ಟ್ರೀಯತೆ ಹಿನ್ನೆಲೆಯಲ್ಲಿ ಮಾಡಬೇಕುʼʼ ಎಂದರು ಅವರು.

ಅನ್ಯಧರ್ಮೀಯರ ವ್ಯಾಪಾರಕ್ಕೆ ಅವಕಾಶ ಬೇಡ
ʻʻಅಂಜನಾದ್ರಿ ಕ್ಷೇತ್ರದ ಆವರಣದಲ್ಲಿ 500 ಮೀಟರ್ ಅಂತರದಲ್ಲಿ ಅನ್ಯ ಧರ್ಮಿಯರ ವ್ಯಾಪಾರ, ವ್ಯವಹಾರಕ್ಕೆ ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ಕೊಟ್ಟರೆ ನಮ್ಮ ಹನುಮ ಭಕ್ತರು ಅದಕ್ಕೆ ಉತ್ತರ ಕೊಡುತ್ತಾರೆʼʼ ಎಂದು ಸವಾಲು ಹಾಕಿದ ಪ್ರಮೋದ್‌ ಮುತಾಲಿಕ್‌, ʻʻಚುನಾವಣೆಗೋಸ್ಕರ ಅದು ಮಾಡ್ತೀವಿ , ಇದು ಮಾಡ್ತೀವಿ ಅಂತ ಬೊಗಳೆ‌ ಬಿಡಬೇಡಿ. ಪ್ರಾಮಾಣಿಕವಾಗಿ ಹನುಮ ಸ್ಥಳಕ್ಕೆ ಮಾನ್ಯತೆ ಕೊಡಬೇಕುʼʼ ಎಂದು ಆಗ್ರಹಿಸಿದರು.

ಇದನ್ನೂ ಓದಿ | ವಿಸ್ತಾರ ವಿಶೇಷ | ಡಿಸೆಂಬರ್‌ ಅಂತ್ಯಕ್ಕೆ ಶ್ರೀರಾಮ ಸೇನೆ 25 ಅಭ್ಯರ್ಥಿಗಳ ಘೋಷಣೆ: BJP ನಿದ್ದೆಗೆಡಿಸಿದ ಮುತಾಲಿಕ್‌ ನಡೆ

Exit mobile version