ಬೆಂಗಳೂರು: ರಾಜ್ಯದಲ್ಲಿ ಸಾಲು ಸಾಲು ರೌಡಿಗಳು ಬಿಜೆಪಿ ಸೇರುತ್ತಿರುವ ಬಗ್ಗೆ ಜೋರಾಗಿ ಚರ್ಚೆ ನಡೆಯತ್ತಿದೆ. ಕಾಂಗ್ರೆಸ್ ಇದನ್ನು ದೊಡ್ಡ ವಿಚಾರವಾಗಿ ಪರಿವರ್ತನೆ ಮಾಡಿ ಬಿಜೆಪಿಯನ್ನು ರೌಡಿ ಮೋರ್ಚಾ ಎಂದು ಗೇಲಿ ಮಾಡುತ್ತಿದೆ. ಆದರೆ, ಈ ಕ್ರಿಮಿನಲ್ ಕನೆಕ್ಷನ್ ಇರುವುದು ಬಿಜೆಪಿಗೆ ಮಾತ್ರ ಅಲ್ಲ ಅನ್ನುವುದು ಈಗ ಸ್ಪಷ್ಟವಾಗಿ ಬಯಲಾಗಿದೆ.
ಕಾಂಗ್ರೆಸ್ ಮಾಜಿ ಶಾಸಕ ಆರ್.ವಿ ದೇವರಾಜ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಾಕಿರುವ ಬ್ಯಾನರ್‌ನಲ್ಲಿ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಹಲವು ಮಂದಿ ಕಾಣಿಸಿಕೊಂಡಿದ್ದಾರೆ.ಕಾಂಗ್ರೆಸ್ ಮುಖಂಡರು, ಶಾಸಕರ ಜನುಮದಿನಕ್ಕೆ ಶುಭಾಶಯ ಕೋರುವವರ ಪಟ್ಟಿಯಲ್ಲಿ ರೌಡಿಗಳದೇ ಮೇಲುಗೈ ಆಗಿರುವುದು ಚರ್ಚೆಗೆ ಕಾರಣವಾಗಿದೆ.
ಪ್ರೀತಂ ಅಲಿಯಾಸ್ ಬಿಲ್ಲಾ, ಮಂಜುನಾಥ ಅಲಿಯಾಸ್ ಜಾನಿ ಎಂಬ ರೌಡಿಗಳಿಬ್ಬರು ಶುಭಾಶಯ ಬ್ಯಾನರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೌಡಿ ಪ್ರೀತಮ್ ಅಲಿಯಾಸ್ ಬಿಲ್ಲಾ ಸಂಪಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣ ಎದುರಿಸುತ್ತಿದ್ದರೆ, ಮಂಜುನಾಥ ಅಲಿಯಾಸ್ ಜಾನಿ ಸಿದ್ಧಾಪುರ ಪೊಲೀಸ್ ಠಾಣೆಯ ರೌಡಿ.
ಡಿಸೆಂಬರ್ 3ರಂದು ಆರ್ ವಿ ದೇವರಾಜ್ ಅವರ ಹುಟ್ಟುಹಬ್ಬ ಇತ್ತು. ಪ್ರೀತಂ ಮತ್ತು ಮಂಜುನಾಥ್ ತನ್ನ ಸಹಚರರಿಗೆ ಹೇಳಿಸಿ ಬ್ಯಾನರ್, ಕಟೌಟ್ ಹಾಕಿಸಿದ್ದಾರೆ ಎನ್ನಲಾಗಿದೆ. ಮಿನರ್ವಾ ಸರ್ಕಲ್‌ನ ರಸ್ತೆಯ ಇಕ್ಕೆಲಗಳಲ್ಲಿ ಶುಭಕೋರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.
ಚುನಾವಣೆಯ ಸಂದರ್ಭದಲ್ಲಿ ರೌಡಿಗಳು ಈ ರೀತಿ ವಿಜೃಂಭಿಸುತ್ತಿರುವುದು ಸಣ್ಣ ಮಟ್ಟಿನ ಆತಂಕವನ್ನೂ ಸೃಷ್ಟಿಸಿದೆ.
ಇದನ್ನೂ ಓದಿ | Criminal politics | ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಈಗ ಕೆಪಿಸಿಸಿ ಅಧ್ಯಕ್ಷ: ಬಿಜೆಪಿ ಚಾರ್ಜ್‌ಶೀಟ್