ಶಿರಸಿ: ಕಾಳಿ ನದಿಯಲ್ಲಿ ಈಜಲು ಹೋದ ವ್ಯಕ್ತಿಯೊಬ್ಬರನ್ನು ಮೊಸಳೆಗಳು ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕುಳಗಿ ರಸ್ತೆಯ ಈಶ್ವರ ದೇವಸ್ಥಾನದ ಬಳಿ ಗುರುವಾರ ಬೆಳಗ್ಗೆ ನಡೆದಿದೆ.
ಬೆಳಗ್ಗೆ ಕಾಳಿ ನದಿಯಲ್ಲಿ ಈಜಲು ತೆರಳಿದ್ದ ಗುಜರಾತ್ ಮೂಲದ ದಾಂಡೇಲಿ ನಿವಾಸಿ ಪೀತಾಂಬರಿ ದಾಸ್ ಅವರೇ ಮೊಸಳೆ ಬಾಯಿಗೆ ಸಿಕ್ಕಿದವರು.
ಪೀತಾಂಬರ ದಾಸ್ ಅವರು ದಂಡೆಯ ಮೇಲೆ ಚಪ್ಪಲಿ, ಬಟ್ಟೆಯನ್ನು ಇಟ್ಟು ನದಿಯಲ್ಲಿ ಇಳಿದಿದ್ದಾರೆ. ಈ ವೇಳೆ ಎರಡು ಮೊಸಳೆಗಳು ಈತನ ಮೇಲೆ ದಾಳಿ ನಡೆಸಿ ಹೊತ್ತೊಯ್ದಿದೆ ಎನ್ನಲಾಗಿದೆ. ಇದನ್ನು ಸ್ಥಳೀಯ ಜನರು ನೋಡಿ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು ವ್ಯಕ್ತಿಯ ಶವಕ್ಕಾಗಿ ಹುಡುಕಾಟ ನಡೆದಿದೆ. ಪೀತಾಂಬರಿ ದಾಸ್ ಅವರು ವ್ಯಾಪಾರಿಯಾಗಿದ್ದು, ಕುಟುಂಬದೊಂದಿಗೆ ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ.
ಇದು ಕಾಳಿ ನದಿಯ ಸೇತುವೆಯ ಪಕ್ಕದಲ್ಲೇ ಇರುವ ಪ್ರದೇಶವಾಗಿದ್ದು, ಸೇತುವೆಯಲ್ಲಿ ನಿಂತಿದ್ದವರೊಬ್ಬರು ಪೀತಾಂಬರಿ ದಾಸ್ ಅವರು ಈಜುತ್ತಿರುವುದನ್ನು ಮತ್ತು ಮೊಸಳೆಗಳು ಬಂದು ಅವರನ್ನು ಎಳೆದೊಯ್ಯುತ್ತಿರುವುದನ್ನು ನೋಡಿದ್ದಾರೆ ಎನ್ನಲಾಗಿದೆ.