ಬೆಂಗಳೂರು: ಗಂಡಾಗಿದ್ದರೂ ಹೆಣ್ಣಿನಂತೆ ದಿರಸು ಧರಿಸಿ ಓಡಾಡುತ್ತಿದ್ದ ಕ್ರಾಸ್ ಡ್ರೆಸ್ಸರ್ ಒಬ್ಬನನ್ನು ರಿಕ್ಷಾ ಚಾಲಕನೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಲ್ಲಿ ಆಗಿದ್ದೇನು?
ಒಂದೆರಡು ದಿನಗಳ ಹಿಂದೆ ಬಿಟಿಎಂ ಲೇಔಟ್‌ನ ಈ ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ಕೊಳೆತ ವಾಸನೆ ಬರಲು ಆರಂಭವಾಗಿತ್ತು. ಎಲ್ಲಿಂದ ಬರುತ್ತಿದೆ ಎಂದು ಹುಡುಕಿದಾಗ ಒಂದು ಮನೆಯಿಂದ ಬರುತ್ತಿದೆ ಎನ್ನುವುದು ಗೊತ್ತಾಯಿತು. ಪೊಲೀಸರು ಬಂದು ಪರಿಶೀಲನೆ ನಡೆಸಿದರು. ಅಷ್ಟು ಹೊತ್ತಿಗೆ ಕೋಣೆಯೊಳಗೆ ಮೃತದೇಹ ಬಿದ್ದಿರುವುದು ಕಂಡುಬಂತು.
ಅಕ್ಕಪಕ್ಕದವರನ್ನು ವಿಚಾರಿಸಿದಾಗ ಕಳೆದ ಮೂರು ತಿಂಗಳಿನಿಂದ ಆ ಮನೆಯಲ್ಲಿ ಒಬ್ಬ ಮಹಿಳೆ ವಾಸಿಸುತ್ತಿದ್ದರು ಎಂದು ತಿಳಿದುಬಂತು. ಅದೇ ಮಾಹಿತಿಯ ಆಧಾರದಲ್ಲಿ , ಧರಿಸಿದ್ದ ಬಟ್ಟೆಯ ಆಧಾರದಲ್ಲಿ ಅಪಾರ್ಟ್‌ಮೆಂಟ್ ವಾಸವಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬಹುಶಃ ಹೃದಯಾಘಾತದಿಂದ ಸಾವು ಸಂಭವಿಸಿರಬಹುದು ಎಂದು ಪೊಲೀಸರು ಷರಾ ಬರೆದರು.
ಪೋಸ್ಟ್ ಮಾರ್ಟಂ ಶಾಕ್
ಈ ನಡುವೆ ಶವದ ಪೋಸ್ಟ್ ಮಾರ್ಟಂ ನಡೆಸಿದಾಗ ವಿಚಿತ್ರವಾದ ಸಂಗತಿ ಬೆಳಕಿಗೆ ಬಂತು. ಪೊಲೀಸರು ಹೆಣ್ಣು ಎಂದು ತಂದಿದ್ದ ಶವ ಗಂಡಿನದಾಗಿತ್ತು! ಸಾವು ಸಂಭವಿಸಿದ್ದು ಹೃದಯಾಘಾತದಿಂದಲ್ಲ, ಚೂರಿಯ ಇರಿತದಿಂದ ಎಂದು ಗೊತ್ತಾಯಿತು. ಮೃತದೇಹ ಸಂಪೂರ್ಣ ಕೊಳೆತಿದ್ದುದರಿಂದ ಪೊಲೀಸರಿಗೆ ಈ ಚಾಕು ಇರಿತದ ಗುರುತುಗಳು ಗೊತ್ತಾಗಲಿಲ್ಲ ಅನಿಸುತ್ತದೆ.
ಸಿಸಿ ಟಿವಿ ಜಾಲಾಡಿದಾಗ
ಅದುವರೆಗೆ ಪೊಲೀಸರು ಈ ಮಹಿಳೆ ಎಲ್ಲಿಯವರು ಎಂಬ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ ಕೊಲೆ ಎಂದಾದ ಬಳಿಕ ಬೇರೆ ದಿಕ್ಕಿನಲ್ಲಿ ಯೋಚಿಸಲು ಆರಂಭಿಸಿದರು. ಅಪಾರ್ಟ್ ಮೆಂಟ್‌ನಲ್ಲಿರುವ ಈ ಮನೆಗೆ ಹಿಂದಿನ ದಿನಗಳಲ್ಲಿ ಯಾರಾದರೂ ಬಂದಿದ್ದರೇ ಎಂಬ ಬಗ್ಗೆ ಸಿಸಿಟಿವಿ ಫೂಟೇಜ್ ಪರಿಶೀಲನೆ ನಡೆಸಿದರು. ಆ ವೇಳೆ ಮೇ 30ರಂದು ವ್ಯಕ್ತಿಯೊಬ್ಬ ಈ ಮನೆಯ ಬಾಗಿಲನ್ನು ಹಾಕಿಕೊಂಡು ಹೊರಹೋಗುತ್ತಿರುವುದು ಕಂಡುಬಂತು. ಕೂಡಲೇ ಪೊಲೀಸರು ಬೇರೆ ಬೇರೆ ಫೂಟೇಜ್‌ಗಳನ್ನು ಪರಿಶೀಲಿಸಿದರು. ಆ ವ್ಯಕ್ತಿ ಒಂದು ರಿಕ್ಷಾ ಹತ್ತಿಕೊಂಡು ಹೋಗಿರುವುದು ಬೆಳಕಿಗೆ ಬಂತು. ಹೀಗೆ ತನಿಖೆ ಕೊನೆಗೆ ಹೋಗಿ ತಲುಪಿದ್ದು ರಕ್ಷಿತ್ ಗೌಡ ಎಂಬ ರಿಕ್ಷಾ ಚಾಲಕನ ಬಳಿಗೆ!
ಹಾಗಿದ್ದರೆ ಆವತ್ತು ಏನಾಗಿತ್ತು?
ಕೆಲವು ಸಮಯದ ಹಿಂದೆ ಒಬ್ಬ ಯುವತಿ ರಕ್ಷಿತ್ ಗೌಡನ ರಿಕ್ಷಾದಲ್ಲಿ ಪ್ರಯಾಣಿಸಿದ್ದಳು. ಆಗ ಅವಳ ಪರಿಚಯವಾಗಿ ಸ್ನೇಹಕ್ಕೆ ಪರಿವರ್ತನೆಯಾಗಿತ್ತು. ಈ ನಡುವೆ ಆಕೆ ಅವನನ್ನು ತನ್ನ ರೂಮಿಗೆ ಬರುವಂತೆ ತಿಳಿಸಿದ್ದಾಳೆ.
ನಿಜವೆಂದರೆ ಈ ರೀತಿ ಯುವತಿಯಂತೆ ಬಂದು ಕುಳಿತವನ ನಿಜವಾದ ಹೆಸರು ಪ್ರದೀಪ್. ವರ್ಷ ಸುಮಾರು 32. ಆತ ಪುರುಷನಾಗಿದ್ದರೂ ಹೆಣ್ಣಿನಂತೆ ಡ್ರೆಸ್ ಮಾಡಿಕೊಂಡು ಕ್ರಾಸ್ ಡ್ರೆಸರ್ ಆಗಿದ್ದ.. ಆತ ನಿಜವಾಗಿಯೂ ಮಾನಸಿಕವಾಗಿ ಹೆಣ್ಣಿನಂತೆ ಇದ್ದ ಆ ವ್ಯಾಮೋಹದಿಂದ ಡ್ರೆಸ್ ಮಾಡಿಕೊಳ್ಳುತ್ತಿದ್ದನೋ ತಿಳಿದಿಲ್ಲ. ಅಪಾರ್ಟ್ ಮೆಂಟ್‌ನ ಕೆಲವರು ಹೇಳುವ ಪ್ರಕಾರ ಆ ಮನೆಗೆ ಹಲವಾರು ಪುರುಷರು ಬಂದು ಹೋಗುತ್ತಿದ್ದರು. ಕೊಲೆಯಾಗಿರುವುದು ಗಂಡಸು ಎಂಬ ವಿಷಯ ತಿಳಿದ ಮೇಲೆ ಆತ ಸಲಿಂಗ ಕಾಮಿಯಾಗಿರಬಹುದು ಎಂಬ ಮಾತೂ ಅಲ್ಲಿ ಕೇಳಿಬರುತ್ತಿದೆ. ಅದಕ್ಕಾಗಿ ಈ ರೀತಿ ಡ್ರೆಸ್ ಧರಿಸಿ ಪುರುಷರನ್ನು ಬಲೆಗೆ ಕೆಡವುತ್ತಿದ್ದ ಎಂಬ ಅಭಿಪ್ರಾಯವಿದೆ.
ಇದನ್ನು ಓದಿ| ಪಬ್‌ಜಿ ಕೊಲೆ: ರಾತ್ರಿ ಗುಂಡು ಹಾರಿಸಿದ ಮಗ, ಬೆಳಗಿನವರೆಗೂ ಉಸಿರಾಡುತ್ತಿದ್ದ ತಾಯಿ
ಮೇ 30ರಂದು ನಡೆದಿದ್ದೇನು?
ಆಟೋ ಚಾಲಕ ರಕ್ಷಿತ್ ಗೌಡನ ಈಕೆ ಹೆಣ್ಣೆಂದೇ ಭ್ರಮಿಸಿ ಬಂದಿದ್ದನೋ ಅಥವಾ ಸಲಿಂಗ ಕಾಮಿ ಎಂದು ತಿಳಿದೇ ಬಂದಿದ್ದನೋ ಸ್ಪಷ್ಟವಾಗಿಲ್ಲ. ಆದರೆ, ಆವತ್ತು ಪಾನಮತ್ತನಾಗಿ ಅಲ್ಲಿಗೆ ಬಂದಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಅವರಿಬ್ಬರ ನಡುವೆ ಏನೋ ಜಗಳವಾಗಿದೆ. ಆಗ ಪ್ರದೀಪ್ ರಕ್ಷಿತ್‌ಗೆ ಕಪಾಳಕ್ಕೆ ಹೊಡೆದಿದ್ದಾನೆ. ನಂತರ ಅವರಿಬ್ಬರ ನಡುವೆ ಜೋರು ಹೊಡೆದಾಟ ನಡೆದಿದೆ. ಆಗ ಪ್ರದೀಪ್ ಮೊದಲು ರಕ್ಷಿತ್‌ಗೆ ಚೂರಿಯಿಂದ ಇರಿದಿದ್ದಾನೆ. ಬಳಿಕ ರಕ್ಷಿತ್ ಅದೇ ಚೂರಿಯನ್ನು ಕಿತ್ತುಕೊಂಡು ಪ್ರದೀಪನ ಹೊಟ್ಟೆ ಹಾಗೂ ಎಡಗೈಗೆ ಹಲವು ಬಾರಿ ಇರಿದಿದ್ದಾನೆ. ಬಳಿಕ ಅಪಾರ್ಟ್‌ಮೆಂಟ್‌ನ ಬಾಗಿಲಿನ ಚಿಲಕ ಹಾಕಿಕೊಂಡು ಅಲ್ಲಿಗೆ ಓಡಿ ಹೋಗಿದ್ದಾನೆ. ಪ್ರದೀಪ್‌ನ ಮೂಲ ಎಲ್ಲಿ ಎನ್ನುವುದು ಸ್ಪಷ್ಟವಾಗಿಲ್ಲ.
ಇದನ್ನು ಓದಿ| ಅಪರಿಚಿತ ಮಹಿಳೆಯ ಕತ್ತು ಹಿಸುಕಿ ಕೊಲೆ