ಹಾವೇರಿ: ದಕ್ಷಿಣ ಭಾರತದಲ್ಲೆ ಅತ್ಯಂತ ದೊಡ್ಡದೆನ್ನಲಾಗುವ ಸ್ಫಟಿಕ ಲಿಂಗ ಸೋಮವಾರ ರಾತ್ರಿ ಕಳವಾಗಿದೆ.
ಹಾವೇರಿಯ ಲಿಂಗದಹಳ್ಳಿ ಹಿರೇಮಠದಲ್ಲಿದ್ದ ಬೃಹತ್ ಸ್ಫಟಿಕ ಲಿಂಗವನ್ನು ಕದ್ದೊಯ್ಯಲಾಗಿದೆ. ರಾಣೆಬೆನ್ನೂರು ತಾಲೂಕಿನಲ್ಲಿರುವ ಮಠದಲ್ಲಿ ಇದ್ದ ಸ್ಫಟಿಕ ಲಿಂಗ ಎಲ್ಲರ ಗಮನ ಸೆಳೆಯುವಂತಿತ್ತು. ಬೆಳಕನ್ನು ಪ್ರತಿಫಲಿಸುವ ಲಿಂಗದ ಪೂಜೆಗೆ ದೂರದೂರದಿಂದ ಜನರು ಆಗಮಿಸುತ್ತಿದ್ದರು.
ಇದನ್ನೂ ಓದಿ | ಕಳ್ಳತನ ಮಾಡಲು ಬಂದಿದ್ದವ ಮಹಡಿಯಿಂದ ಬಿದ್ದು ಸಾವು
ಈ ಸ್ಫಟಿಕ ಲಿಂಗ ಸುಮಾರು 8ನೇ ಶತಮಾನದ್ದು ಎನ್ನಲಾಗಿದೆ. ಮಂಗಳವಾರ ಬೆಳಗ್ಗೆ ನೋಡುವಾಗ ಇದು ಕಳವಾಗಿರುವುದು ಬೆಳಕಿಗೆ ಬಂತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ʼʼರಂಭಾಪುರಿ ಮಹಸಾನ್ನಿಧಾನದವರ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮಕ್ಕೆ ತೆರಳಿದ್ದೆವು. ನಂತರ ಧರ್ಮಸಭೆಯಲ್ಲಿ ಭಾಗವಹಿಸಿ ಅಲ್ಲಿಯೇ ಉಳಿದಿದ್ದೆವು. ರಾತ್ರಿ ಎಷ್ಟೊತ್ತಿಗೆ ಈ ಘಟನೆ ನಡೆದಿದೆಯೋ ಗೊತ್ತಿಲ್ಲ. ಬೆಳಗ್ಗೆ ಸ್ವಚ್ಛತೆಗೆ ಜನರು ತೆರಳಿದಾಗ ಬೆಳಕಿಗೆ ಬಂದಿದೆʼʼ ಎಂದು ಮಾಹಿತಿ ನೀಡಿದರು.
ʼʼದೇವಸ್ಥಾನದ ಆವರಣದಲ್ಲಿ ಅನೇಕ ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಈ ಪೈಕಿ ಕೆಲವು ಕೆಲಸ ಮಾಡುತ್ತಿಲ್ಲ. ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು ಸಿಸಿಟಿವಿಗಳ ಸಂಪರ್ಕವನ್ನು ಕಡಿತ ಮಾಡಿದ್ದೆವು. ಕೆಲವು ಕ್ಯಾಮೆರಾಗಳನ್ನು ಕಳ್ಳರು ಒಡೆದುಹಾಕಿದ್ದಾರೆʼʼ ಎಂದು ಸ್ವಾಮೀಜಿ ತಿಳಿಸಿದ್ದಾರೆ.
ರಾಣೆಬೆನ್ನೂರು ಪೊಲೀಸರಿಗೆ ದೂರು ನೀಡಲಾಗಿದ್ದು, ಮಾಹಿತಿ ಪಡೆದ ಸುತ್ತಮುತ್ತಲಿನ ಗ್ರಾಮಸ್ಥರು ಮಠಕ್ಕೆ ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ | ಪ್ರತಿ ಮಸೀದಿಯಲ್ಲೂ ಶಿವಲಿಂಗ ಹುಡುಕುವ ಅಗತ್ಯವೇನಿದೆ? ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್