Site icon Vistara News

ನಿಯೋಜಿತ CS ವಂದಿತಾ ಶರ್ಮಾ ಫುಲ್‌ ಆ್ಯಕ್ಟಿವ್‌: ತಂಡ ರಚನೆ ಆರಂಭ

ಬೆಂಗಳೂರಿನ ರಾಜಭವನದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ, ರಾಜ್ಯ ಸರ್ಕಾರದ ನಿಯೋಜಿತ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿಯಾಗಿ ನಿಯೋಜನೆಗೊಂಡಿರುವ ಹಿರಿಯ ಐಎಎಸ್‌ ಅಧಿಕಾರಿ ವಂದಿತಾ ಶರ್ಮಾ ಈಗಾಗಲೆ ಕ್ರಿಯಾಶೀಲರಾಗಿದ್ದು, ಆಡಳಿತ ಯಂತ್ರವನ್ನು ಮುನ್ನಡೆಸಲು ತಮ್ಮ ತಂಡ ಕಟ್ಟಿಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಸದ್ಯ ಮುಖ್ಯಕಾರ್ಯದರ್ಶಿ ಆಗಿರುವ ಪಿ. ರವಿಕುಮಾರ್‌ ಅವರು ಮೇ 31ರ ಮಂಗೌಾರ ನಿವೃತ್ತರಾಗಲಿದ್ದಾರೆ. ದೀರ್ಘ ಅವಧಿಗೆ ಮುಖ್ಯಕಾರ್ಯದರ್ಶಿಯಾಗಿದ್ದ ರವಿಕುಮಾರ್‌ ಸ್ಥಾನಕ್ಕೆ ಮುಖ್ಯಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ಆಯ್ಕೆ ಮಾಡಿದ್ದರು.

ಅಧಿಕಾರ ವಜಹಿಸಿಕೊಳ್ಳಲು ಎರಡು ದಿನ ಬಾಕಿ ಇರುವಂತೆಯೇ ವಂದಿತಾ ಶರ್ಮಾ ಆಡಳಿತ ಯಂತ್ರವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಭಾನುವಾರ ಸರ್ಕಾರಿ ರಜಾದಿನವಾದರೂ ಅಂದೇ 11 ಹಿರಿಯ ಮತ್ತು ಕಿರಿಯ ಐಎಎಸ್‌ ಅಧಿಕಾರಿಗಳ ವರ್ಗಾವಣೆಯನ್ನು ಮಾಡಿಸಲಾಗಿದೆ.

ತಮಗೆ ಹೆಚ್ಚುವರಿಯಾಗಿ ಇದ್ದ ಹೊಣೆಗಳನ್ನು ಹಿರಿಯ ಐಎಎಸ್‌ ಅಧಿಕಾರಿ ರಜನೀಶ್‌ ಗೋಯೆಲ್‌ ಅವರಿಗೆ ವರ್ಗಾವಣೆ ಮಾಡಿದ್ದಾರೆ. ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಅವರಿಗೆ, ವಂದಿತಾ ಶರ್ಮಾ ಅವರು ನಿರ್ವಹಣೆ ಮಾಡುತ್ತಿದ್ದ ಅಭಿವೃದ್ಧಿ ಆಯುಕ್ತರ ಹೊಣೆ ನೀಡಲಾಗಿದೆ.

ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶೀಯಾಗಿದ್ದ ಉಮಾಶಂಕರ್‌ ಅವರನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ವಿ. ಮಹೇಶ್‌ ಅವರನ್ನು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ನಿಯೋಜನೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್‌ ಕುಮಾರ್‌ ಪಾಂಡೆ ಅವರನ್ನು ವಾಣಿಜ್ಯ ಮತ್ತು ಕೈಗಾರಿಕೆ(ಎಂಎಸ್‌ಎಂಇ) ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

ಇನ್ನುಳಿದಂತೆ ಕಿರಿಯ ಐಎಎಸ್‌ ಅಧಿಕಾರಿಗಳಾದ ಡಾ. ರಾಮ್‌ ಪ್ರಸಾದ್‌ ಮನೋಹರ್‌ ಅವರನ್ನು ಬಿಬಿಎಂಪಿ ಆಸ್ತಿ ವಿಭಾಗದ ವಿಶೇಷ ಆಯುಕ್ತ, ವಿನೋದ್‌ ಪ್ರಿಯಾ ಅವರನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಎಂಡಿ, ಡಿ.ಎಸ್‌. ರಮೇಶ್‌ ಅವರನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕ, ಬಿ. ಶರತ್‌ ಅವರನ್ನು ಕೃಷಿ ಆಯುಕ್ತರನ್ನಾಗಿ, ಸಿ. ಸತ್ಯಭಾಮಾ ಅವರನ್ನು ಎಂಎಸ್‌ಎಂಇ ಇಲಾಖೆ ನಿರ್ದೇಶಕ, ಎಸ್‌.ಜೆ. ಸೋಮಶೇಖರ್‌ ಅವರನ್ನು ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಎಂಡಿಯಾಗ ವರ್ಗಾವಣೆ ಮಾಡಲಾಗಿದೆ.

ಕಾರ್ಯಕ್ರಮದಲ್ಲೂ ಭಾಗಿ

ಅಧಿಕಾರಿಗಳ ವರ್ಗಾವಣೆ ಒಂದೆಡೆಯಾದರೆ, ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಲ್ಲೂ ನಿಯೋಜಿತ ಮುಖ್ಯಕಾರ್ಯದರ್ಶಿ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದಾರೆ. ರಾಜಭವನದಲ್ಲಿ ನಿರ್ಮಿಸಲಾಗಿರುವ ಡಾ. ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಅನಾವರಣವನ್ನು ಸಿಎಂ ಬಸವರಾಜ ಬೊಮ್ಮಾಯಿ ಸೋಮವಾರ ಬೆಳಗ್ಗೆ ನೆರವೇರಿಸಿದರು. ಆದರೆ ಈ ಕಾರ್ಯಕ್ರಮದಲ್ಲಿ ಮುಖ್ಯಕಾರ್ಯದರ್ಶಿ ಪಿ. ರವಿಕುಮಾರ್‌ ಭಾಗವಹಿಸಿರಲಿಲ್ಲ. ಬದಲಿಗೆ ನಿಯೋಜಿತ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರೇ ಭಾಗವಹಿಸಿದ್ದರು.

ಸದ್ಯ 58.6 ವರ್ಷದವರಾದ ವಂದಿತಾ ಶರ್ಮಾ ಇನ್ನೂ ಒಂದೂವರೆ ವರ್ಷ ಮುಖ್ಯಕಾರ್ಯದರ್ಶಿಯಾಗಿರಲಿದ್ದಾರೆ. ಈ ಅವಧಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2023ರ ನವೆಂಬರ್‌ವರೆಗೆ ವಂದಿತಾ ಶರ್ಮಾ ಅವಧಿಯಿದ್ದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಬಯಸಿದಲ್ಲಿ ಕೆಲ ತಿಂಗಳು ಅವಧಿ ವಿಸ್ತರಣೆಗೂ ಅವಕಾಶವಿರುತ್ತದೆ.

Exit mobile version