Site icon Vistara News

ಬೊಮ್ಮಾಯಿ ಚಡ್ಡಿ ಬಿಚ್ಚಿಸ್ತೀವಿ ಅಂದ SDPI ನಾಯಕ, ತಾಕತ್ತು ಇದ್ರೆ ಮಾಡಿ ತೋರಿಸು ಎಂದು ಸವಾಲು ಹಾಕಿದ ಸಿ.ಟಿ. ರವಿ

CT RAVI SDPI

#image_title

ಚಿತ್ರದುರ್ಗ/ಚಿಕ್ಕಮಗಳೂರು: ಮುಸ್ಲಿಮರ 2ಬಿ ಮೀಸಲಾತಿ (Reservation) ಕಡಿತಗೊಳಿಸಿದ ಸರ್ಕಾರದ ವಿರುದ್ಧ ತೀವ್ರ ಹೋರಾಟ ಮಾಡುತ್ತೇವೆ. ಮುಂಬರುವ ದಿನಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಚಡ್ಡಿ ಬಿಚ್ಚಿಸುತ್ತೇವೆ ಎಂಬ ಎಸ್‌ಡಿಪಿಐ ನಾಯಕನ ಮಾತಿಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮೊದಲು ಮಾಡಿ ತೋರಿಸು, ನಾವೇನು ಅಂತ ನಾವೂ ತೋರಿಸ್ತೀವಿ ಎಂದು ಸವಾಲು ಹಾಕಿದರು.

ಮುಸ್ಲಿಮರ ಮೀಸಲಾತಿ ರದ್ದು ವಿರುದ್ಧ ಚಿತ್ರದುರ್ಗದಲ್ಲಿ ನಡೆದ ಪ್ರತಿಭಟನೆ ವೀರಾವೇಶದಿಂದ ಮಾತನಾಡಿದ ಎಸ್‌ಡಿಪಿಐ ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿ ಜಾಕಿರ್‌ ಹುಸೇನ್‌, ಸರ್ಕಾರ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಆಪಾದಿಸಿದರು.

ʻʻಬುರ್ಖಾ, ಆಜಾನ್ ಹಾಗೂ ಜಟ್ಕಾ ಹಲಾಲ್ ಕಟ್ ನಂಥ ವಿಚಾರಗಳನ್ನು ಎತ್ತಿ ಮುಸ್ಲಿಂ ಸಮುದಾಯವನ್ನು ಪ್ರತ್ಯೇಕ ಮಾಡಲು ಪ್ರಯತ್ನಿಸಲಾಗುತ್ತಿದೆ. ಈಗ 2ಬಿ ಮೀಸಲಾತಿಯನ್ನು ರದ್ದುಗೊಳಿಸಿ ನಮ್ಮ‌ಹೊಟ್ಟೆ ಮೇಲೆ ಹೊಡೆಯುತ್ತಿದೆʼʼ ಎಂದು ಹೇಳಿದ ಜಾಕಿ, ಹರಕು ಬಾಯಿ ಈಶ್ವರಪ್ಪ ಅಲ್ಲಾ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದು ದೂರಿದರು.

ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಮುಸ್ಲಿಂ ಮೀಸಲಾತಿ ರದ್ದತಿ ವಿರುದ್ಧ ಹೋರಾಟ ಮಾಡಲಿದೆ. ಹೋರಾಟಗಾರರಿಗೆ ನಮ್ಮ ಸಮುದಾಯದವರು ಬೆಂಬಲ ನೀಡಬೇಕು. ಈ ಹೋರಾಟವನ್ನು ಬೆಂಬಲಿಸಿ ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ. ಈ ವಿಚಾರದಲ್ಲಿ ಮುಂಬರುವ ದಿನಗಳಲ್ಲಿ ಸಿಎಂ ಬೊಮ್ಮಾಯಿ ಅವರ ಚಡ್ಡಿ ಬಿಚ್ಚಿಸುತ್ತೇವೆ. ತಲೆ ಹೋದರೂ, ಜೈಲಿಗೆ ಹೋದರೂ ಈ ಹೋರಾಟ ಬಿಡುವುದಿಲ್ಲʼʼ ಎಂದು ಘೋಷಿಸಿದ್ದಾರೆ ಜಾಕಿರ್‌.

ಎಸ್‌ಡಿಪಿಐ ವಿರುದ್ಧ ಸಿಡಿದೆದ್ದ ಸಿ.ಟಿ. ರವಿ

ನಮ್ಮ ಹಕ್ಕನ್ನು ವಾಪಸ್‌ ಕೊಡದೆ ಇದ್ದರೆ ಸಿಎಂ ಬೊಮ್ಮಾಯಿಯವರ ಚಡ್ಡಿ ಬಿಚ್ಚಿಸುತ್ತೇವೆ ಎಂಬ ಎಸ್‌ಡಿಪಿಐ ಚಿತ್ರದುರ್ಗ ಜಿಲ್ಲಾಧ್ಯಕ್ಷರ ಹೇಳಿಕೆ ವಿರುದ್ಧ ತೀವ್ರವಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ನಿನ್ನ ತಾಕತ್ತು ತೋರ್ಸು, ಆಮೇಲೆ ನಮ್ಮ ತಾಕತ್ತು ತೋರಿಸ್ತೀವಿ ಎಂದು ಸವಾಲು ಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ ಶಾಸಕ ಸಿ.ಟಿ. ರವಿ, ʻʻಅದೇನು ಹೋಗುತ್ತೋ… ತಲೆ ತಗೀತಿಯೋ… ನಿನ್ನ ತಾಕತ್ತು ತೋರ್ಸು. ನಿಮ್ಮ ತಾಕತ್ತು ತೋರಿಸಿ ಆಮೇಲೆ ನಾವು ಅದಕ್ಕೆ ಏನ್ ಉತ್ತರ ಕೊಡ್ಬೇಕೋ ಕೊಡುತ್ತೇವೆʼʼ ಎಂದರು.

ʻʻಅವರಿಗೆ ನಾನು ಒಂದು ವಿಷಯ ಹೇಳಲು ಬಯಸುತ್ತೇನೆ. ಇದು 1947ರ ಭಾರತವಲ್ಲ. ನೀವು ಮಾಡಿದ್ದೆಲ್ಲ ಸಹಿಸಿಕೊಂಡು ಬಿರಿಯಾನಿ ಹಾಕುವ ಭಾರತ ಅಲ್ಲ ಇದು. ನಿಮ್ಮ ಮೇಲಿನ ಕೇಸ್‌ಗಳನ್ನು ಹಿಂಪಡೆದು ಮೆರೆಯಲು ಅವಕಾಶ ನೀಡುವ ಸರ್ಕಾರವೂ ಈಗಿಲ್ಲ. ಈಗ ಇರುವ ಸರ್ಕಾರ ಬಾಲ‌ ಉದ್ದ ಮಾಡಿದ್ರೆ ಕಟ್ ಮಾಡುವುದು ಹೇಗೆಂದು ಗೊತ್ತಿರುವ ಸರ್ಕಾರ. ಬಾಂಬ್ ಹಾಕುವವರ ತಲೆ ಮೇಲೆಯೇ ಬಾಂಬ್ ಹಾಕುವ ತಾಕತ್ತಿರುವ ಸರ್ಕಾರ. ಭಯೋತ್ಪಾದನೆ ಮಾಡುವವರಿಗೆ ಸರ್ಜಿಕಲ್ ಸ್ಟೈಕ್ ಮಾಡಿ ತಲೆ ಎತ್ತದಂತೆ ಮಾಡುವ ತಾಕತ್ತಿನ‌ ಸರ್ಕಾರʼʼ ಎಂದು ಹೇಳಿದರು ಸಿ.ಟಿ ರವಿ.

ʻʻನಿಮ್ಮ ಎಸ್.ಡಿಪಿಐ ಹುಟ್ಟಿದೆ ಕೇರಳದಲ್ಲಿಯೇ ಮೀಸಲಾತಿ‌ ಇಲ್ಲ. ಕೋಮು ಆಧಾರಿತ, ಮತ ಆಧಾರಿತ ಮೀಸಲಾತಿ ಕೇರಳದಲ್ಲೇ ಇಲ್ಲ. ಆಂಧ್ರ ಪ್ರದೇಶದಲ್ಲಿ ಕೊಟ್ಟಿದ್ದನ್ನು ಸಂವಿಧಾನ ಬಾಹಿರ ಎಂದು ಏಳು ಮಂದಿ ನ್ಯಾಯಮೂರ್ತಿಗಳ ಪೀಠ ರದ್ದು ಮಾಡಿದೆ. ಕರ್ನಾಟಕದಲ್ಲಿ ಸಂವಿಧಾನಬಾಹಿರ ಮೀಸಲಾತಿ ಯಾರಿಗೂ ಕೊಡುವುದಿಲ್ಲ‌. ಸಂವಿಧಾನ ಬಾಹಿರವಾಗಿರುವರ ಸಮರ್ಥನೆಗೆ ಯಾರು ನಿಲ್ಲುತ್ತಾರೋ ಅವರು ನಿಲ್ಲಲಿ. ಧಮ್ಕಿ ಹಾಕುವ ತಾಲಿಬಾನ್ ಮಾದರಿ ಇಲ್ಲಿ ನಡೆಯಲ್ಲ,ʼʼ ಎಂದು ಎಚ್ಚರಿಸಿದರು ಸಿ.ಟಿ. ರವಿ.

ಇದನ್ನೂ ಓದಿ : SC ST Reservation: 2B ಪ್ರವರ್ಗ ಹಿಂತೆಗೆತಕ್ಕೆ ಸಿಡಿದ ಮುಸ್ಲಿಮರು; ರಾಜ್ಯದ ಹಲವು ಕಡೆ ಬೃಹತ್‌ ಪ್ರತಿಭಟನೆ

Exit mobile version