ರಾಮನಗರ: ತಾವು ಮುಖ್ಯಮಂತ್ರಿ ಆಗಿದ್ದಾಗ ಒಳ್ಳೆಯ ಕೆಲಸ ಮಾಡಿದ್ದೆ, ಮುಂದೆ ನನಗೆ ಮುಖ್ಯಮಂತ್ರಿಯಾಗುವ ಅವಕಾಶ ನೀಡಿ ಎಂದು ಇಬ್ಬರು ಒಕ್ಕಲಿಗ ನಾಯಕರು ಪೈಪೋಟಿ ನಡೆಸುತ್ತಿರುವ ನಡುವೆ ಬಿಜೆಪಿ ನಾಯಕ ಸಿ.ಟಿ. ರವಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರ ಬಿಜೆಪಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಚಾಂಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಸಿ.ಟಿ. ರವಿ, ಮುಖ್ಯಮಂತ್ರಿ ಗಾದಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದರು.
ನಾನು ಒಕ್ಕಲಿಗ, ಆದರೆ ಜಾತಿ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ. ರಾಜ್ಯದಲ್ಲಿ ಸಿಎಂ ಸೀಟು ಖಾಲಿ ಇಲ್ಲ, ಆದರೆ ಈಗಲೇ ಟವೆಲ್ ಹಾಕಲು ನಾ ಮುಂದು ಎಂದು ಕೆಲವರು ಹೊರಟಿದ್ದಾರೆ. ನಾನು ರಾಮನಗರಕ್ಕೆ ಸಿಎಂ ಕುರ್ಚಿ ಮೇಲೆ ಆಸೆ ಇದೆ ಎಂದು ಹೇಳಲು ಬಂದಿಲ್ಲ. ಒಂದು ಸಮುದಾಯ ಅಥವಾ ಜಾತಿ ಇಟ್ಟುಕೊಂಡು ನಾನು ರಾಜಕಾರಣ ಮಾಡಿದವನಲ್ಲ ಎಂದರು.
ಸಮುದಾಯದ ಹೆಸರು ಹೇಳಿಕೊಂಡು ತನ್ನ ಕುಟುಂಬ ಉದ್ಧಾರ ಮಾಡಿಕೊಂಡರು ಎಂದು ಟೀಕಿಸಿದ ಸಿ.ಟಿ. ರವಿ, ನಾನು ಒಕ್ಕಲಿಗ. ಒಕ್ಕಲಿಗರು ನೀತಿವಂತರು. ಜಾತಿಗೆ ಸೀಮಿತವಾದ ರಾಜಕಾರಣ ಮಾಡುವುದಿಲ್ಲ. ದೇಶದ ಹಿತಕ್ಕಾಗಿ, ಹಿಂದುತ್ವಕ್ಕಾಗಿ ನಾನು ರಾಮನಗರ ಬಂದಿದ್ದೇನೆ ಎಂದು ಹೇಳಿದರು.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಇ.ಡಿ. ನೋಟಿಸ್ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ಇ.ಡಿ. ಸುಖಾಸುಮ್ಮನೆ ಯಾರಿಗೂ ನೋಟಿಸ್ ನೀಡುವುದಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಪಾತ್ರವಿದೆ.
ಸುಖಾಸುಮ್ಮನೆ ಇಪ್ಪತ್ತು ಸಾವಿರ ಕೋಟಿ ವಹಿವಾಟು ನಡೆಸಲು ಸಾಧ್ಯವೇ? ಕಾಂಗ್ರೆಸ್ ನಾಯಕರು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ತಪ್ಪು ಮಾಡಿಲ್ಲ ಎಂದಾದರೆ ಭಯ ಏಕೆ? ಸಾಂವಿಧಾನಿಕ ಹುದ್ದೆಯ ಮೇಲೆ ಗೌರವ, ನಂಬಿಕೆ ಕಾಂಗ್ರೆಸ್‌ಗೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ | ಸೈನ್ಯಕ್ಕೆ ಸೇರುವವರು ಬೆಂಕಿ ಹಚ್ಚುವುದಿಲ್ಲ: ಅಗ್ನಿಪಥ ಪ್ರತಿಭಟನೆ ಬಗ್ಗೆ ಸಿ.ಟಿ. ರವಿ ವಾಗ್ದಾಳಿ