ಚಿಕ್ಕಮಗಳೂರು: ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಯವರಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ನಾನು ಬಕೆಟ್ ಹಿಡಿದಿಲ್ಲ, ನಾನು ಬಕೆಟ್ ಹಿಡಿದು ರಾಜಕಾರಣಿ ಆದವನಲ್ಲ ಎಂದು ಶಾಸಕ ಜಮೀರ್ ಅಹ್ಮದ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ಸಿ.ಟಿ.ರವಿಗೆ ಹಿಂದು-ಮುಸ್ಲಿಂ ಯಾರ ಮೇಲೂ ಪ್ರೀತಿ ಇಲ್ಲ ಎಂಬ ಜಮೀರ್ ಹೇಳಿಕೆಗೆ ನಗರದ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಬಿ.ಎಸ್. ಯಡಿಯೂರಪ್ಪ ಅವರ ಮನೆಯಲ್ಲಿ ವಾಚ್‍ಮನ್ ಆಗುತ್ತೇನೆ ಎಂದು ಹೇಳಿದ್ದ ಜಮೀರ್, ಮೊದಲು ಆ ಮಾತನ್ನು ಉಳಿಸಿಕೊಳ್ಳಲಿ. ನನ್ನ ನಿಯತ್ತನ್ನು ಕ್ಷೇತ್ರದ ಜನ ನೋಡಿ, 4 ಬಾರಿ ಗೆಲ್ಲಿಸಿದ್ದಾರೆ. ಮಂತ್ರಿ ಆಗಿದ್ದ ನಾನು ಪಕ್ಷಕ್ಕಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.
ಇದನ್ನೂ ಓದಿ | ಒಂದರ ಜತೆಗೆ ಮೂರನ್ನೂ ಆಚರಿಸಿ ಎಂದ ಬಿಜೆಪಿ ವರಿಷ್ಠರು: ಸಿದ್ದರಾಮೋತ್ಸವ ರೀತಿ ಆಗದಂತೆ ಎಚ್ಚರ
ಸಿಎಂ ಎಂದು ಬೋರ್ಡ್, ಫ್ಲೆಕ್ಸ್ ಹಾಕಿಕೊಂಡರೆ, ಜನರ ಕೈನಲ್ಲಿ ಕೂಗಿಸಿಕೊಂಡರೆ ಸಿಎಂ ಆಗಲ್ಲ, ಸಿದ್ದರಾಮಯ್ಯ ಅವರ ಸ್ಟೈಲಲ್ಲಿ ಹೇಳುವುದಾದರೆ ಅವರಪ್ಪನ ಆಣೆ ಸಿಎಂ ಆಗಲ್ಲ ಎಂದು ಹೇಳಬಹುದು. ಜನ ಪಕ್ಷಕ್ಕೆ ಮತ ಹಾಕಿದ ಮೇಲೆ ಆ ಪಕ್ಷ ತೀರ್ಮಾನ ಮಾಡಬೇಕು. 8-10 ವರ್ಷದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದಕ್ಕಿಂತ ಕಳೆದುಕೊಂಡಿದ್ದೇ ಹೆಚ್ಚು. ನೂರಕ್ಕೆ ನೂರು ರಾಜಸ್ಥಾನ, ಛತ್ತಿಸ್‍ಗಡದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದಕೊಳ್ಳುತ್ತದೆ. ಅದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್ ಹಗಲುಗನಸು ಕಾಣುತ್ತಿದೆ ಎಂದರು.
ನಮಗೆ ನೀತಿ, ನಿಯತ್ತು ಇದೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಆದರೆ ಕಾಂಗ್ರೆಸ್‌ನವರು ಖಾಲಿ ಇಲ್ಲದಿರುವ ಸಿಎಂ ಕುರ್ಚಿಗೆ ಈಗಲೇ ಕಿತ್ತಾಡುತ್ತಿದ್ದಾರೆ. ಇದ್ದಾಗ ಉಳಿಸಿಕೊಳ್ಳಲು ಆಗಲಿಲ್ಲ, ಈಗ ಟವೆಲ್ ಹಾಕಲು ಕುರ್ಚಿಯೇ ಖಾಲಿ ಇಲ್ಲ ಎಂದ ಅವರು, ನಾವು ನಮ್ಮ ಸಾಧನೆ, ಸಿದ್ಧಾಂತ ಮುಂದಿಟ್ಟು ಮತ ಕೇಳುತ್ತೇವೆ. ಕೆ.ಎಸ್.ಈಶ್ವರಪ್ಪ ತನ್ನ ಮೇಲೆ ಆಪಾದನೆ ಬಂದಾಗ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಪಕ್ಷ ಕಟ್ಟಿದ ಹಲವು ಪ್ರಮುಖರಲ್ಲಿ ಅವರೂ ಒಬ್ಬರು. ಅವರಿಗೆ ಮತ್ತೆ ಸಚಿವ ಸ್ಥಾನ ಕೊಡುವ ಬಗ್ಗೆ ಮುಖ್ಯಮಂತ್ರಿಗಳು ಚಿಂತನೆ ಮಾಡಬೇಕು ಎಂದರು.
ಇದನ್ನೂ ಓದಿ | ಭ್ರಷ್ಟಾಚಾರದ ಪಿತಾಮಹ ಕಾಂಗ್ರೆಸ್; ಡಿಕೆಶಿ ಜತೆಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದ ಸಿ.ಟಿ. ರವಿ