ಬೆಂಗಳೂರು: ನರೇಂದ್ರ ಮೋದಿಯವರು ದೇಶದ್ರೋಹಿಗಳಿಗೆ ಭಸ್ಮಾಸುರ. ಅದೇ ಉಳಿದವರ ಪಾಲಿಗೆ ಕಲ್ಪವೃಕ್ಷ, ಕಾಮಧೇನು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ (CT Ravi) ಅವರು ತಿಳಿಸಿದರು
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವನ್ನು ರಕ್ಷಿಸುವ ಹಾಗೂ ಜನರನ್ನು ಬದುಕಿಸಿದ ವಿಚಾರದಲ್ಲಿ ಮೋದಿ ಅವರು ಶ್ರೀಮನ್ನಾರಾಯಣ ಎಂದರು.
ಈ ಬಾರಿ ಸಂತೃಪ್ತಿಯ ದತ್ತ ಜಯಂತಿ
ʻʻದತ್ತಪೀಠದ ವಿಚಾರದಲ್ಲಿ ನಮ್ಮ ಸರಕಾರ- ನಮ್ಮ ಪಕ್ಷ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. 10 ದಿನಗಳ ಹಿಂದೆ ನ್ಯಾಯಾಲಯದ ಆದೇಶ, ಅದರ ಅನುಗುಣವಾಗಿ ಸಂಪುಟ ಉಪ ಸಮಿತಿ ತೆಗೆದುಕೊಂಡ ನಿರ್ಣಯದ ಶಿಫಾರಸುಗಳನ್ನು ಅಂಗೀಕರಿಸಿ ಸರಕಾರವು ಆಡಳಿತ ಮಂಡಳಿ ರಚಿಸಿದೆ. ಹಿಂದೂ ಅರ್ಚಕರ ನೇಮಕಕ್ಕಿದ್ದ ಅಡೆತಡೆ ಈಗ ನಿವಾರಣೆಯಾಗಿದೆ; ಹಿಂದೂ ಅರ್ಚಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯ ದತ್ತ ಜಯಂತಿ 4-5 ದಶಕಗಳ ಹೋರಾಟ ಈಡೇರಿದ ಸಂತೃಪ್ತಿಯ ಜಯಂತಿ ಆಗಲಿದೆʼʼ ಎಂದು ಸಿ.ಟಿ. ರವಿ ಹೇಳಿದರು.
ಅಕ್ರಮ ಜಮೀನು ಮಂಜೂರು ಆರೋಪ
ʻʻಸರಕಾರಿ ದಾಖಲೆಗಳ ಪ್ರಕಾರ ಉಳುವವನೇ ಹೊಲದೊಡೆಯ ಮಸೂದೆಗೆ ಮುಂಚೆ ದತ್ತಾತ್ರೇಯ ದೇವರ ಹೆಸರಿನಲ್ಲಿ 1,861 ಎಕರೆ ಜಾಗ ಇತ್ತು. ಕಾಂಗ್ರೆಸ್ ಆಡಳಿತವಿದ್ದಾಗ ದತ್ತಾತ್ರೇಯ ದೇವರ ಹೆಸರಿನ ಜಮೀನನ್ನು ಗೇಣಿದಾರರೂ ಅಲ್ಲದವರಿಗೆ ಕಾಂಗ್ರೆಸ್ ಮುಖಂಡರು ಅಕ್ರಮವಾಗಿ ಮಂಜೂರು ಮಾಡಿದ್ದರೆಂದು ಮಾಹಿತಿ ಮೇಲ್ನೋಟಕ್ಕೆ ಲಭಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಮಂಜೂರಾತಿ ರದ್ದು ಮಾಡಲು ಆಗ್ರಹಿಸುತ್ತೇನೆ ಎಂದರು ಸಿ.ಟಿ. ರವಿ. ಕಾಂಗ್ರೆಸ್ ವಿರೋಧದ ಹಿಂದೆ ಮತೀಯ ಓಲೈಕೆ ಜೊತೆಗೇ ದತ್ತಾತ್ರೇಯ ದೇವರ ಹೆಸರಿನಲ್ಲಿದ್ದ ಆಸ್ತಿ ಹೊಡೆಯುವ ಸಂಚು ಇತ್ತು ಎಂದು ಆರೋಪಿಸಿದರು.
ಸಿದ್ದರಾಮಯ್ಯ ಕ್ಷಮೆ ಕೇಳಬೇಕು
ʻʻಹಿಂದೆ ಸುಪ್ರೀಂ ಕೋರ್ಟ್ ದತ್ತ ಪೀಠದ ವಿಚಾರದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸರಕಾರಕ್ಕೆ ವಹಿಸಿತ್ತು. ಆದರೆ, ಸಿದ್ದರಾಮಯ್ಯ ಸರಕಾರವು ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿ ಇದು ಸೂಕ್ಷ್ಮ ವಿಚಾರ ಎಂದಿದ್ದರು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸಿದ್ದರು. ಸತ್ಯಾಸತ್ಯತೆ ಪರಿಶೀಲಿಸದೆ ಕ್ರಮ ಕೈಗೊಂಡಿದ್ದರು. ಹಿಂದೂ ಅರ್ಚಕರ ನೇಮಕಾತಿ ತಿರಸ್ಕರಿಸಿದ ಸಿದ್ದರಾಮಯ್ಯ ಅವರದು ಯಾವ ಸೀಮೆ ಜಸ್ಟಿಸ್, ಇನ್ಸಾನಿಯತ್ʼʼ ಎಂದು ಪ್ರಶ್ನಿಸಿದರು. ಇದಕ್ಕಾಗಿ ಅವರು ಹಿಂದುಗಳ ಕ್ಷಮೆ ಕೇಳಬೇಕು ಎಂದರು.
ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು
ʻʻಗುಜರಾತ್ನಲ್ಲಿ ಒಂದೂವರೆ ತಿಂಗಳ ಕಾಲ ಚುನಾವಣೆ ಕೆಲಸ ಮಾಡಿದ್ದು, ಅಲ್ಲಿ ಬಿಜೆಪಿ ಪರವಾದ ಅಲೆ ಇದೆ. ಮೋದಿಯವರು ಜನರ ಹೃದಯ ಗೆದ್ದಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ. ಹಿಮಾಚಲ ಪ್ರದೇಶದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಸರಕಾರಾತ್ಮಕ ಬದಲಾವಣೆ, ಅಭಿವೃದ್ಧಿಯ ವೇಗದ ವಿಚಾರದಲ್ಲಿ ಕಾಂಗ್ರೆಸ್- ಕಮ್ಯೂನಿಸ್ಟ್ ಪಕ್ಷದ ಸರಕಾರಗಳು ಬಿಜೆಪಿ ಸರಕಾರಗಳಿಗೆ ಸರಿಸಾಟಿಯಲ್ಲʼʼ ಎಂದು ಸಿ.ಟಿ. ರವಿ ವಿಶ್ಲೇಷಿಸಿದರು.
ಕಾಂಗ್ರೆಸ್ನವರು ರಾವಣನ ಬೆಂಬಲಿಗರು!
ʻʻಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸುವ ಯಾವುದೇ ಸರಕಿಲ್ಲದೆ ಜನರ ಹೃದಯ ಸಾಮ್ರಾಟರಾದ ಪ್ರಧಾನಿ ನರೇಂದ್ರ ಮೋದಿಯವರನ್ನು ರಾವಣ ಎಂದಿದ್ದಾರೆ. ರಾಮಮಂದಿರ ನಿರ್ಮಿಸುವವರು ರಾವಣ ಆಗುವುದು ಹೇಗೆ? ದಿನಕ್ಕೊಂದು ಬಣ್ಣ ಬದಲಿಸುವವರು, ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಅಫಿದವಿಟ್ ಕೊಟ್ಟ ಕಾಂಗ್ರೆಸ್ ಪಕ್ಷ ರಾವಣ ಮನಸ್ಥಿತಿ ಹೊಂದಿದೆ. ಕರಸೇವಕರ ಮೇಲೆ ಗೋಲಿಬಾರ್ ಮಾಡಿ ಹತ್ಯೆ ಮಾಡಿದವರು, ಗೋದ್ರಾ ಹತ್ಯಾಕಾಂಡ ಮಾಡಿದವರು, ಅದನ್ನು ಬೆಂಬಲಿಸಿದವರು ರಾವಣನ ಬೆಂಬಲಿಗರುʼʼ ಎಂದು ಆಕ್ಷೇಪಿಸಿದರು.
ರಾಹುಲ್ ಕೇಸರಿ ಧರಿಸಿದ್ದಾರಲ್ಲಾ.. ಏನಂತೀರಿ ಸಿದ್ದರಾಮಯ್ಯ?
ʻʻ2022ರ ಗುಜರಾತ್ ಫಲಿತಾಂಶ 2024ರ ಲೋಕಸಭಾ ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದು ವಿಶ್ಲೇಷಿಸಿದ ಅವರು, ರಾಜಕೀಯ ನಿಮಿತ್ತಂ ಬಹುಕೃತ ವೇಷಂ ಎಂಬುದು ರಾಹುಲ್ ಗಾಂಧಿ ಅವರಿಗೆ ಸರಿಹೊಂದುತ್ತದೆ. ರಾಹುಲ್ ಅವರು ಕೇಸರಿ ಶಾಲು ಧರಿಸಿದ ವೇಷದ ಬಗ್ಗೆ ಸಿದ್ದರಾಮಯ್ಯರಿಗೆ ಏನೆನಿಸುತ್ತದೆʼʼ ಎಂದು ಸಿದ್ದರಾಮಯ್ಯ ಅವರನ್ನು ಸಿ.ಟಿ. ರವಿ ಪ್ರಶ್ನಿಸಿದರು. ರಾಹುಲ್ ಕೇಸರಿ ಶಾಲು ಧರಿಸಿದ್ದನ್ನು ಗಮನಿಸಿ ಸಿದ್ದರಾಮಯ್ಯರು ಊಸರವಳ್ಳಿ ಎನ್ನುತ್ತೀರಾ? ರಾಜಕೀಯ ನಿಮಿತ್ತಂ ಬಹುಕೃತ ವೇಷಂ ಎನ್ನುತ್ತಾರಾ ಎಂದು ಕೇಳಿದರು.
ʻʻಕಮ್ಯುನಲ್ ಯಾರು? ಸೆಕ್ಯುಲರ್ ಯಾರೆಂದು ಗೊತ್ತಾಗಲಿದೆ. ಆರೆಸ್ಸೆಸ್ ನಿಮಗೆ ಕಮ್ಯುನಲ್. ಬಾಂಬ್ ಹಾಕುವವರು ಸೆಕ್ಯುಲರ್ಗಳು. ಸಮಾಜವಾದಿ ಮಜಾವಾದಿ ಆದುದನ್ನು ಇಲ್ಲಿನ ಜನತೆ ನೋಡಿದ್ದಾರೆ. ಇವರ ಜಾತ್ಯತೀತತೆ ಜನರಿಗೆ ತಿಳಿದಿದೆ. ಮಜಾವಾದಿ ಕುಟುಂಬ ವ್ಯಾಮೋಹಿ ಎಂದು ಕರೆಸಿಕೊಳ್ಳುವಷ್ಟೇ ಅರ್ಹತೆ ಇವರದುʼʼ ಎಂದು ರವಿ ಕುಟುಕಿದರು.
ರೌಡಿ ಲಿಸ್ಟಲ್ಲಿ ಇದ್ದ ಮಾತ್ರಕ್ಕೆ ರೌಡಿಗಳಲ್ಲ
ʻʻರೌಡಿ ಲಿಸ್ಟಿನಲ್ಲಿ ಇದ್ದವರೆಲ್ಲ ರೌಡಿ ಎಂದು ಹೇಳಲಾಗದು. ರಾಜಕೀಯ ಕಾರಣಕ್ಕೆ ನನ್ನ ಹೆಸರೂ ರೌಡಿ ಲಿಸ್ಟಿನಲ್ಲಿತ್ತು. ನಮ್ಮ ಪಕ್ಷದ ಕಾರ್ಯಕರ್ತರೂ ರೌಡಿ ಲಿಸ್ಟಿನಲ್ಲಿದ್ದರು. ಹೋರಾಟ ಮಾಡುವುದೇ ರೌಡಿಸಂ ಎಂಬ ಭಾವನೆ ಕಾಂಗ್ರೆಸ್ಸಿನವರದಾಗಿತ್ತು. ರೌಡಿಗಳ ಸೇರ್ಪಡೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ತಮ್ಮ ಸ್ಪಷ್ಟನೆ ನೀಡಿದ್ದಾರೆʼʼ ಎಂದು ಈ ಕುರಿತ ಪ್ರಶ್ನೆಗೆ ಸಿ.ಟಿ.ರವಿ ಅವರು ಉತ್ತರ ಕೊಟ್ಟರು.
ದೇವರಾಜ ಅರಸರೇ ರೌಡಿಗಳ ಜತೆ ಸಭೆ ನಡೆಸಿದ್ದರು!
ʻʻದೇವರಾಜ ಅರಸು ಅವರು ತಾವು ಸಿಎಂ ಆಗಿದ್ದಾಗ ತಮ್ಮ ಚೇಂಬರ್ನಲ್ಲಿ ನಟೋರಿಯಸ್ ರೌಡಿಗಳ ಜೊತೆ ಸಭೆ ನಡೆಸಿದ್ದರು. ಅಂಥ ಕೆಲಸ ನಾವು ಮಾಡುವುದಿಲ್ಲ. ಸಂಜಯ್ ಬ್ರಿಗೇಡ್ ಸೇರಲು ಗೂಂಡಾಗಿರಿ ಅರ್ಹತೆಯಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಲಪಾಡ್ಗೆ ಇದೇ ಕಾರಣಕ್ಕೇ ನೀಡಿದ್ದಾರೆʼʼ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ʻʻನಮ್ಮದು ಮಾಸ್ ಪಾರ್ಟಿ. ನಮ್ಮ ಪಕ್ಷದ ನೀತಿ- ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಬದಲಾಗಿದೆ; ಪ್ರವಾಹದಲ್ಲಿ ಕಸಕಡ್ಡಿಯೂ ಬರುತ್ತದೆʼʼ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ʻʻನಾನು ಡಿ.ಕೆ. ಶಿವಕುಮಾರ್ ಅವರನ್ನು ರೌಡಿ, ಮಾಜಿ ರೌಡಿ ಎನ್ನುವುದಿಲ್ಲ. ‘ಆ ದಿನಗಳು’ ಅದನ್ನು ಹೇಳಿವೆʼʼ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್ ರವಿಕುಮಾರ್, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮ, ಕಲ್ಬುರ್ಗಿ ಗ್ರಾಮಾಂತರ ಶಾಸಕ ಬಸವರಾಜ ಮತ್ತಿಮೋಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ | ಮಂಗಳೂರು ಸ್ಫೋಟ | ಹಿಂದುಗಳ ತಲೆಗೆ ಕಟ್ಟುವ ಪ್ಲ್ಯಾನ್ ವಿಫಲ, ಆದರೂ ಎಚ್ಚರ ಅಗತ್ಯ ಎಂದ ಸಿ.ಟಿ ರವಿ