Site icon Vistara News

ಸಿದ್ದರಾಮಯ್ಯ ಮಜಾವಾದಿ, ಆರ್‌ಎಸ್‌ಎಸ್‌ ಎಂದರೆ ಅರ್ಥವಾಗಲ್ಲ: ಸಿ ಟಿ ರವಿ

ಸಿ.ಟಿ.ರವಿ

ಬೆಂಗಳೂರು: ಆರ್‌ಎಸ್‌ಎಸ್‌ ಎಂಬುವುದು ಸ್ವಯಂ ಸೇವಕರ ಒಂದು ಸಂಘಟನೆ. ಸಂಘಕ್ಕೆ ಬರುವವರು ದೇಶ ಸೇವೆಗೆ ಜೀವನ ಸಮರ್ಪಿಸುತ್ತಾರೆ. ಆದರೆ ಸಿದ್ದರಾಮಯ್ಯ ಮಜಾವಾದಿ, ಆರ್‌ಎಸ್‌ಎಸ್‌ ಎಂದರೆ ಅವರಿಗೆ ಅರ್ಥವಾಗಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮೇಲ್ಜಾತಿಯವರ ಅಸೋಸಿಯೇಷನ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಮಂಗಳವಾರ ಪ್ರತಿಕ್ರಿಯಿಸಿರುವ ಅವರು, ಮಜಾವಾದಿಗೆ ಆರ್‌ಎಸ್‌ಎಸ್‌ ಹೇಗೆ ಆರ್ಥ ಆಗಲು ಸಾಧ್ಯ? ಮೇಲ್ವರ್ಗ, ಕೆಳವರ್ಗ ಎಂದು ಬ್ರಿಟಿಷ್‌ರ ಒಡೆದು ಆಳುವ ನೀತಿಯನ್ನು ಸಿದ್ದರಾಮಯ್ಯ ಬಳುವಳಿಯಾಗಿ ಉಳಿಸಿಕೊಳ್ಳಬೇಕು ಎಂದು ಬಯಸಿದ್ದಾರೋ? ಅಥವಾ ಕಾಂಗ್ರೆಸ್ ನೀತಿಯೇ ಒಡೆದಾಳುವುದೋ? ಭಾಷೆ, ಪ್ರಾದೇಶಿಕ ಹೆಸರಿನಲ್ಲಿ ಒಡೆದಾಯಿತು, ಈಗ ಜಾತಿ ಹೆಸರಿನಲ್ಲಿ ಒಡೆಯುವ ಸಂಚು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ | `ಹಳ್ಳಿ ಹಕ್ಕಿʼ ಮನೆಯೊಂದು ಮೂರು ಬಾಗಿಲು: 3ನೇ ಪಕ್ಷದಲ್ಲಿರುವ ವಿಶ್ವನಾಥ್‌ ಮನೆಯಲ್ಲಿ ಮೂರು ಪಾರ್ಟಿ!

ಆರ್‌ಎಸ್ಎಸ್‌ ರಾಷ್ಟ್ರಭಕ್ತಿ ಮೇಲೆ ನಂಬಿಕೆ ಇಟ್ಟಿದೆ. ನಮ್ಮ ಪ್ರಧಾನಿ ಸಣ್ಣ ಸಮುದಾಯಕ್ಕೆ ಸೇರಿದವರು, ಅವರ ಸಾಮರ್ಥ್ಯ ನೋಡಿ ಆರ್‌ಎಸ್‌ಎಸ್‌ ಸೇರಿದ ಕಾರ್ಯಕರ್ತರು ತಮ್ಮ ಸಾಮರ್ಥ್ಯ ಧಾರೆ ಎರೆದರು. ಓಲೈಕೆ ರಾಜಕಾರಣ ಮಾಡುವ, ಭಯೋತ್ಪಾದಕರನ್ನು ಬೆಂಬಲಿಸುವ ಮತೀಯವಾದಿಗಳಿಗೆ ಇದು ಅರ್ಥವಾಗಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿಎಂ ಬದಲಾವಣೆ ಆಗಲಿದ್ದಾರೆ ಎಂಬ ಮಾಜಿ ಶಾಸಕ ಸುರೇಶ್ ಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿಎಂ ಬದಲಾವಣೆ ಇಲ್ಲ, ಇದೊಂದು ಕಲ್ಪಿತ ಸುದ್ದಿ. ಇದು ನಿಜವೇ ಆಗಿದ್ದರೆ ಇಷ್ಟೋತ್ತಿಗೆ ಬೊಮ್ಮಾಯಿ 10 ಸಾರಿ ಸಿಎಂ ಕುರ್ಚಿಯಿಂದ ಇಳಿಯಬೇಕಿತ್ತು. ನೀವು ಸುರೇಶ್‌ ಗೌಡರನ್ನೇ ಕೇಳಿ, ಅವರಿಗೆ ಯಾವ ಮಾಹಿತಿ ಇದೆಯೋ ಗೊತ್ತಿಲ್ಲ. ನಾನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹೇಳುತ್ತಿದ್ದೇನೆ ಬದಲಾಯಿಸುವ ಚಿಂತನೆ ಪಕ್ಷದ ಮುಂದಿಲ್ಲ, ಮುಂದಿನ ಚುನಾವಣೆಯಲ್ಲೂ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ ಎಂದರು.

ಸುಳ್ಳು ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳು, ಮಾಜಿ ಮುಖ್ಯಮಂತ್ರಿ 75ನೇ ವರ್ಷದ ಹುಟ್ಟುಹಬ್ಬ ಆಚರಣೆ‌ ಮಾಡಿಕೊಂಡರು. ಅವರಿಗೆ ನಮ್ಮ ದೇಶದ ಧ್ವಜದಲ್ಲಿ ಯಾವ ಬಣ್ಣಗಳಿವೆ ಎಂಬುವಷ್ಟರ ಮಟ್ಟಿಗೆ ಮರೆವು ಬಂದಿರುವುದು ದುರದೃಷ್ಟಕರ. ಕಾಂಗ್ರೆಸ್ ಮಾಜಿ ಸಿಎಂ ಸಿದ್ದರಾಮಯ್ಯ ನಕ್ಸಲ್ ಬೆಂಬಲಿಗರು, ಅಧಿಕಾರದಲ್ಲಿ ಇದ್ದಾಗ ನಕ್ಸಲರಿಗೆ ಬೆಂಬಲ ಕೊಟ್ಟಿದ್ದರು. ಅಪ್ಪಿ ತಪ್ಪಿ ಸಿದ್ದರಾಮಯ್ಯ ಅವರಿಗೆ ಅಧಿಕಾರ ಸಿಕ್ಕಿ ಪ್ರಜಾಪ್ರಭುತ್ವವಾದಿಯಾಗಿ ಉಳಿದುಕೊಂಡರು, ಅಧಿಕಾರ ಸಿಗದೆ ಹೋಗಿದ್ದರೇ ಅವರು ನಕ್ಸಲರೇ ಆಗುತ್ತಿದ್ದರು ಎಂದು ಹೇಳಿದರು.

ಅಧಿಕಾರ ಸಿಕ್ಕ ಕಾರಣಕ್ಕೆ ಸಿದ್ದರಾಮಯ್ಯ ನಾನು ಪ್ರಜಾಪ್ರಭುತ್ವವಾದಿ ಎಂದು ಹೇಳುತ್ತಾರೆ. ಆದರೆ ಅವರ ವಿಚಾರದಲ್ಲಿ, ಸಿದ್ಧಾಂತದಲ್ಲಿ ಪ್ರಜಾಪ್ರಭುತ್ವ ಇಲ್ಲ, ಧ್ವಜದಲ್ಲಿ ಯಾವ ಬಣ್ಣ ಇದೆ ಎಂದು ತಿಳಿಯಲಾರದಷ್ಟು ಅಮಾಯಕರೇ ಎಂದು ಪ್ರಶ್ನಿಸಿದ ಅವರು, ಅದಕ್ಕಾಗಿ ಕ್ಷಮೆಯಾಚನೆ ಮಾಡಿದ್ದಾರಾ? ಕೂಡಲೇ ಸಿದ್ದರಾಮಯ್ಯ ಅವರು ದೇಶದ ಜನರಿಗೆ ಕ್ಷಮೆಯಾಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯಿಂದ ಪಾಲಿಸ್ಟರ್ ಧ್ವಜ ವಿತರಣೆ ವಿಚಾರಕ್ಕೆ ಸ್ಪಂದಿಸಿ, ಇವತ್ತಿನ ಖಾದಿ ಬಟ್ಟೆಯ ಸಾಮರ್ಥ್ಯ ಎಷ್ಟಿದೆ ಎಂದು ಪರಿಶೀಲಿಸಿದ ನಂತರನೇ ಯಾವುದೇ ಬಟ್ಟೆ ಉಪಯೋಗಿಸಬಹುದು ಎಂದು ಧ್ವಜ ಸಂಹಿತೆಗೆ ತಿದ್ದುಪಡಿ ಮಾಡಲಾಗಿದೆ. ಧ್ವಜಗಳು ಚೀನಾದಿಂದ ಬಂದಿಲ್ಲ, ಸಿದ್ದರಾಮಯ್ಯ ಅವರಿಗೆ ಚೀನಾ ಮೇಲೆ ಬಹಳ ಪ್ರೀತಿ ಇದೆ. ಕಾಂಗ್ರೆಸ್ ಚೀನಾ ಜತೆ ಅಗ್ರಿಮೆಂಟ್‌ ಮಾಡಿಕೊಂಡಿದೆ, ಬಹುಶಃ ಅವರು ತರಿಸಿರಬಹುದು. ಆದರೆ ಭಾರತ ಸರ್ಕಾರ, ರಾಜ್ಯ ಸರ್ಕಾರ ಚೀನಾದಿಂದ ತರಿಸಿಲ್ಲ ಎಂದರು.

ಇದನ್ನೂ ಓದಿ | ಬೊಮ್ಮಾಯಿ ನೇತೃತ್ವದಲ್ಲಿ 50 ಸೀಟೂ ಬರಲ್ಲ ಎಂದು ಯಾರೂ ಹೇಳಿಲ್ಲ ಎಂದ ಕತ್ತಿ

Exit mobile version