Site icon Vistara News

ಸ್ಥಳೀಯತೆ, ವೇಗ ಮತ್ತು ವೈಯಕ್ತಿಕತೆ ಡಿಜಿಟಲ್‌ ಮೀಡಿಯಾದ ಭವಿಷ್ಯ: ಅಪ್ರಮೇಯ ರಾಧಾಕೃಷ್ಣ

vistara discussion

ಸ್ಥಳೀಯ ಭಾಷೆಯ ವಸ್ತುವೇ ಡಿಜಿಟಲ್‌ ಮಾಧ್ಯಮದ ಭವಿಷ್ಯ. ಇದರ ಜತೆಗೆ ಸುದ್ದಿ ನೀಡುವ ವೇಗ ಹಾಗೂ ಕಸ್ಟಮೈಸೇಷನ್‌ (ವೈಯಕ್ತಿಕತೆ) ಕೂಡ ಪ್ರಮುಖವೆನಿಸಿಕೊಳ್ಳುತ್ತದೆ ಎಂದು ಕೂ ಸಾಮಾಜಿಕ ಜಾಲತಾಣದ ಸಹ ಸ್ಥಾಪಕ ಹಾಗೂ ಸಿಇಒ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.

ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಹಾಗೂ ಚಾನೆಲ್‌ ಲೋಗೋ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ʻಭಾರತದಲ್ಲಿ ಡಿಜಿಟಲ್‌ ಮಾಧ್ಯಮದ ಭವಿಷ್ಯʼ ಸಂವಾದದಲ್ಲಿ ಅವರು ವಿಚಾರ ಮಂಡಿಸಿದರು.

ಸ್ಥಳೀಯ ಭಾಷೆಯ ಬೇಡಿಕೆ

ನಾನು ಮೊದಲ ಆಪ್‌ ಟ್ಯಾಕ್ಸಿ ಫಾರ್‌ ಶ್ಯೂರ್‌ ಮಾರಾಟ ಮಾಡಿದ ಬಳಿಕ ಮುಂದೆ ಭಾರತದಲ್ಲಿ ಯಾವ ಅಲೆ ಮೂಡಿಬರಬಹುದು ಎಂಬ ಆಲೋಚನೆ ಬಂತು. ಆಗ ಜಿಯೋ ಇನ್ನೂ ಬಂದಿರಲಿಲ್ಲ. ಆಗಿನ ಒಂದು ಪರಿಕಲ್ಪನೆ ಏನೆಂದರೆ ಮುಂದೆ ಎಲ್ಲರ ಬಳಿ ಸ್ಮಾರ್ಟ್‌ ಫೋನ್‌ ಮತ್ತು ಇಂಟರ್ನೆಟ್‌ ಇರುತ್ತದೆ, ಎಂಬುದು. ಆದರೆ ಆಗ ಇಂಗ್ಲಿಷ್‌ ಮಾತಾಡಬಲ್ಲವರು ಮಾತ್ರ ಇಂಟರ್‌ನೆಟ್‌ ಬಳಕೆ ಮಾಡುತ್ತಿದ್ದರು. ಆದರೆ ತುಂಬ ಬೇಗನೆ ಎಲ್ಲರೂ ನೆಟ್‌ ಬಳಕೆ ಶುರುಮಾಡಿದರು. ಆಗ ಇಂಗ್ಲಿಷ್‌ ಬರದಿರುವವರು ಅಂಥ ಕಡೆ ಹೋಗಲು ಸಾಧ್ಯವಾಗಲಿಲ್ಲ. ಆಪ್‌ಗಳ ಬಳಕೆಗೆ ಭಾಷೆ ಒಂದು ತಡೆಯಾಗಬಾರದು ಎಂದು ಅನಿಸಿತು. ಹೀಗೆ ಬಂದದ್ದು ಸ್ಥಳೀಯ ಭಾಷೆಯಲ್ಲಿ ಸೋಶಿಯಲ್‌ ಸೈಟ್‌ ನಿರ್ಮಿಸುವ ಯೋಚನೆ. ಉದಾಹರಣೆಗೆ ಟ್ವಿಟರ್‌ನಲ್ಲಿ ದೇಶದ ಶೇ.1 ಜನತೆ ಮಾತ್ರ ಇದ್ದಾರೆ. ಆದರೆ ಅಲ್ಲಿ ಇಂಗ್ಲಿಷ್‌ ಬಲ್ಲವರು ಮಾತ್ರ ವ್ಯವಹರಿಸಬಹುದು. ಅವರು ಇತರರನ್ನು ಸೇರಿಸಿಕೊಳ್ಳುವುದಿಲ್ಲ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರಗಳನ್ನು ಮಾತಾಡುತ್ತಾರೆ. ನಾನು ವೋಕಲ್‌ ಆಪ್‌ ನಡೆಸುತ್ತಿರುವಾಗ ಸ್ಥಳೀಯರೊಬ್ಬರು ಕೇಳಿದರು- ನಾವೇಕೆ ಬರೀ ಪ್ರಶ್ನೆ ಕೇಳಬೇಕು, ಯಾಕೆ ನಾವೂ ಮಾತಾಡಬಾರದು ಅಂತ. ಸ್ಥಳೀಯ ಭಾಷೆಯಲ್ಲಿ ಹೆಚ್ಚಿನ ವ್ಯವಹಾರ ನಡೆಸುವ ಆಪ್‌ ನಿರ್ಮಿಸುವ ಚಿಂತನೆ ಹಾಗೆ ಬಂತು. ಕೂ ಸೃಷ್ಟಿಯಾದದ್ದು ಹಾಗೆ, ಈಗಲೂ ಸ್ಥಳೀಯ ಭಾಷೆಯಲ್ಲಿ ಒಳ್ಳೆಯ ಕಂಟೆಂಟ್‌ ಸಿಕ್ಕರೆ ಅದು ಸಕ್ಸಸ್‌ ಆಗುತ್ತದೆ ಎಂದರು.

ವೇಗ ಮತ್ತು ವೈಯಕ್ತಿಕತೆ

ಡಿಜಿಟಲ್‌ ಮೀಡಿಯಾದ ಭವಿಷ್ಯ ಎರಡು ಅಂಶಗಳಲ್ಲಿದೆ- ಒಂದು ಅದರ ವೇಗ, ಇನ್ನೊಂದು ಕಸ್ಟಮೈಸೇಷನ್.‌ ಸುದ್ದಿ ಎಂಬುದು ಭೂತಕಾಲಕ್ಕೆ ಸೇರಿದ್ದು. ಈ ಕ್ಷಣದಲ್ಲಿ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಮಾಡುತ್ತಿರಬಹುದು, ಯಾವುದೋ ಬಾಲಿವುಡ್‌ ಸಾಂಗ್‌ ಹಿಟ್‌ ಆಗುತ್ತಿರಬಹುದು, ಅದೆಲ್ಲವನ್ನೂ ತಕ್ಷಣವೇ ಹಿಡಿದು ಕೊಡಲು ಸಾಧ್ಯವಾಗಬೇಕು. ಡಿಜಿಟಲ್‌ ನ್ಯೂಸ್‌ ಮಾಧ್ಯಮಕ್ಕೆ ವೇಗ ಅತಿ ಮುಖ್ಯ. ಎಷ್ಟು ಬೇಗ ಓದುಗರನ್ನು ಮುಟ್ಟಿದೆ ಎಂಬುದು ಮುಖ್ಯವಾಗುತ್ತದೆ. ಅದರಲ್ಲೂ ಎಲ್ಲವೂ ರೆಕಾರ್ಡ್‌ ಆಗಿ, ಲೈವ್‌ ಆಗಿ ಸಿಗುತ್ತಿರುವಾಗ ಇದನ್ನು ಕಡೆಗಣಿಸುವಂತೆಯೇ ಇಲ್ಲ. ಹಾಗೇ ಕಸ್ಟಮೈಸೇಷನ್.‌ ಒಂದು ಕ್ಯಾಮೆರಾ ಇದ್ದರೆ ಅದು ಎಲ್ಲವನ್ನೂ ರೆಕಾರ್ಡ್‌ ಮಾಡುತ್ತದೆ. ಆದರೆ ಆಯ್ದದ್ದನ್ನು ಮಾತ್ರ ನಾವು ನೋಡುತ್ತೇವೆ. ನನಗೆ ಅಗತ್ಯವಿಲ್ಲದ್ದನ್ನು, ಕಿರಿಕಿರಿ ಆಗುವುದನ್ನು ತೋರಿಸಬೇಡಿ ಎಂದು ಜನ ಕೇಳುತ್ತಾರೆ. ಅವರಿಗೆ ಅಗತ್ಯವಾದುದನ್ನು ಕೊಡುವ ಕಲೆಯನ್ನು ಕಲಿತರೆ ಡಿಜಿಟಲ್‌ ಮೀಡಿಯಾ ಗೆಲ್ಲುತ್ತದೆ ಎಂದರು.

ವಿಶ್ವಾಸ ಮತ್ತು ರಂಜನೆ

ಡಿಜಿಟಲ್‌ ಮಾಧ್ಯಮದಲ್ಲಿ ಎಷ್ಟು ಸಮಯ ಕಳೆಯುತ್ತೇವೆ ಎಂಬುದರ ಮೇಲೆ ಇಂದು ನಿಗಾ ಇಡುವುದು ಕಷ್ಟವಾಗಿದೆ ಎಂಬುದು ನಿಜ. ನಾವು ಸಾಮಾಜಿಕ ಜಾಲತಾಣಗಳಲ್ಲಿ ನಮಗೇ ಗೊತ್ತಿಲ್ಲದೆ, ಉದ್ದೇಶರಹಿತವಾಗಿ ಸಮಯ ಕಳೆಯುತ್ತೇವೆ. ಮಜಾ ಸಿಗುತ್ತಿದೆ ಅಂದುಕೊಳ್ಳುತ್ತೇವೆ. ಆದರೆ ಸಮಯ ವ್ಯರ್ಥವಾಗುತ್ತದೆ ಎಂಬುದು ತಿಳಿಯುವುದೇ ಇಲ್ಲ. ಪ್ರಜ್ಞಾಪೂರ್ವಕವಾಗಿ ಲಾಗಿನ್‌ ಆಗುವುದು, ಲಾಗೌಟ್‌ ಆಗುವುದರಿಂದ ಇದನ್ನು ಮೀರಬಹುದು. ಇಂದು ಜಾಹೀರಾತು ಕೂಡ ಮೈಕ್ರೋ ಅಡ್ವರ್‌ಟೈಸಿಂಗ್‌ ಹಂತಕ್ಕೆ ಬಂದಿದೆ. ಆದ್ದರಿಂದ ನಾವು ಬಳಕೆಯಾಗುತ್ತಿದ್ದೇವೆ ಎಂಬುದು ನಮಗೆ ತಿಳಿದಿರಬೇಕು.

ಇದನ್ನೂ ಓದಿ: ವಿಸ್ತಾರ ನ್ಯೂಸ್‌ ತಂಡದ ಸಾಮಾಜಿಕ ಬದ್ಧತೆ ಬಗ್ಗೆ ಪೂರ್ಣ ವಿಶ್ವಾಸ: ಆರೋಗ್ಯ ಸಚಿವ ಕೆ.ಸುಧಾಕರ್‌

ಎಲಾನ್‌ ಮಸ್ಕ್‌ ಟ್ವಿಟರ್‌ ಡೀಲ್‌ನಿಂದ ಹಿಂದೆ ಸರಿಯೋಕೆ ಒಂದು ಕಾರಣ, ಅದರಲ್ಲಿ ಬಳಸಲಾಗುತ್ತಿರುವ ಹೆಚ್ಚಿನ ಸಂಖ್ಯೆಯ ಬಾಟ್‌ಗಳು. ಉದ್ಯೋಗಿಗಳಿಲ್ಲ, ಬಾಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಇದು ವಿಶ್ವಾಸಾರ್ಹ ಅಲ್ಲ ಎಂದರು. ಹೀಗೆ ವಿಶ್ವಾಸಾರ್ಹತೆಯ ಪ್ರಶ್ನೆ ದೊಡ್ಡ ಮಟ್ಟದಲ್ಲಿ ಮುಂದೆ ಬರುತ್ತದೆ. ಹಾಗೇ ಬಳಕೆ ಮಾಡುವ ಜನ ಕೂಡ ಪ್ರಶ್ನಿಸುತ್ತಾರೆ. ನಾನು ದುಡ್ಡು ಕೊಟ್ಟು ಡೇಟಾ ಹಾಕಿಕೊಂಡಿದ್ದು, ಅದರಿಂದ ನನಗಾಗುವ ಉಪಯುಕ್ತತೆ ಏನು, ನೀವು ನನ್ನ ಡೇಟಾ ಮತ್ತು ಹಣವನ್ನು ಗೌರವಿಸುತ್ತಿದ್ದೀರಾ ಎಂದು ಗ್ರಾಹಕ ಕೇಳುತ್ತಾನೆ. ಇದು ಬಳಕೆದಾರರ ಸಮಯ, ಹಣವನ್ನು ಗೌರವಿಸುವ ಪ್ರಶ್ನೆ ಎಂದರು.

ನಮ್ಮದೇ ಆದ ಸೋಶಿಯಲ್‌ ಜಾಲತಾಣ ಬೇಕು

ಸಾಮಾಜಿಕ ಜಾಲತಾಣದಲ್ಲಿ ಡೊನಾಲ್ಡ್‌ ಟ್ರಂಪ್‌ ಅವರನ್ನೇ ಬ್ಯಾನ್‌ ಮಾಡಿದರೆ ಇನ್ಯಾರನ್ನೇ ಆದರೂ ಬ್ಯಾನ್‌ ಮಾಡಬಹುದು. ಇದು ಜಗತ್ತು ಸಾಮಾಜಿಕ ಜಾಲತಾಣದಲ್ಲಿ ಇಟ್ಟ ವಿಶ್ವಾಸ ಮುರಿದ ಸಮಯ. ಎಲ್ಲ ದೇಶಗಳಿಗೂ ತಮ್ಮದೇ ಆದ ಸೋಶಿಯಲ್‌ ಮೀಡಿಯಾ ಬೇಕು ಎಂದು ಇದೆ. ಆದರೆ ಕೆಲವೇ ದೇಶಗಳಿಗೆ ಆ ಶಕ್ತಿ ಇದೆ. ಭಾರತಕ್ಕೆ ಆ ಶಕ್ತಿ ಇದೆ. ನಾವು ನಮ್ಮ ವಾಸ್ತವ, ಸನ್ನಿವೇಶಗಳಿಗೆ ತಕ್ಕಂತೆ ಜಾಲತಾಣವನ್ನು ಕಟ್ಟಿಕೊಳ್ಳಬೇಕು. ಇದು ನಮಗೆ ಒಂದು ಕಲಿಯುವ ಅವಕಾಶವಾಗುತ್ತದೆ. ನಾವು ಜನತೆಯಾಗಿ ಅದಕ್ಕೆ ಸಿದ್ಧರಾಗಿದ್ದೇವೆ.

ಸಂವಾದದಲ್ಲಿ ಓಪನ್‌ ಡಾಟ್‌ ಮನಿ ಸಹ ಸ್ಥಾಪಕ ಅನೀಶ್‌ ಅಚ್ಯುತನ್‌, ಫ್ರೀಡಂ ಆಪ್‌ ಸಂಸ್ಥಾಪಕ ಹಾಗೂ ಸಿಇಒ ಸಿ.ಎಸ್.ಸುಧೀರ್‌, ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಜತೆಗಿದ್ದರು. ಏಮ್‌ ಹೈ ಕನ್ಸಲ್ಟಿಂಗ್‌ ಸಿಇಒ ಎನ್.‌ ರವಿಶಂಕರ್‌ ಸಂವಾದ ನಡೆಸಿಕೊಟ್ಟರು.

ಇದನ್ನೂ ಓದಿ: ವಿಸ್ತಾರ ಮೀಡಿಯಾ ಆರಂಭದ ಹಿಂದಿದೆ ಸುದೀರ್ಘ ಚಿಂತನೆ: ಹರಿಪ್ರಕಾಶ ಕೋಣೆಮನೆ

Exit mobile version