Site icon Vistara News

Customs fraud | ಬ್ಯಾಂಕಾಕ್‌ನಿಂದ 16 iPhone ತಂದು ಸುಂಕ ತಪ್ಪಿಸಲೆತ್ನಿಸಿದವ ಏರ್‌ಪೋರ್ಟಲ್ಲಿ ಸಿಕ್ಕಿಬಿದ್ದ

iphone

ಬೆಂಗಳೂರು: ಭಾರತದಲ್ಲಿ ಅಂದಾಜು ಎರಡು ಲಕ್ಷ ರೂ. ಬೆಲೆ ಬಾಳುವ ಐಪೋನ್ 14 ಪ್ರೋ ಮಾಕ್ಸ್ ಮೊಬೈಲನ್ನು ಕಳ್ಳಸಾಗಣೆ ಮೂಲಕ ದೇಶದೊಳಗೆ ತರಲು ಯತ್ನಿಸಿದ ವ್ಯಕ್ತಿಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಆತನಿಂದ ೧೬ ಐಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳನ್ನು ಬ್ಯಾಂಕಾಕ್‌ನಿಂದ ತರಲಾಗಿತ್ತು.

ಭಾರತದಲ್ಲಿ 1 ಲಕ್ಷ 90 ಸಾವಿರ ಬೆಲೆ ಬಾಳುವ ಐಪೋನ್ 14 pro ಮಾಕ್ಸ್ ಬ್ಯಾಂಕಾಕ್‌ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ೯೬ ಸಾವಿರ ರೂ.ಗಳಿಗೆ ಸಿಗುತ್ತದೆ. ಅಲ್ಲಿಂದ ನೇರವಾಗಿ ತಂದರೆ ಹೆಚ್ಚು ಕಡಿಮೆ ೧ ಲಕ್ಷ ರೂ. ಲಾಭವಾಗುತ್ತದೆ. ಹಾಗಂತ ಅದನ್ನು ನೇರವಾಗಿ ತರುವಂತಿಲ್ಲ. ಭಾರತದ ಸುಂಕ ಕಟ್ಟಿಯೇ ತರಬೇಕು.

ಹೀಗಾಗಿ ಕಸ್ಟಮ್ಸ್‌ನವರ ಕಣ್ಣು ತಪ್ಪಿಸಿ ತಂದರೆ ಒಂದೊಂದು ಮೊಬೈಲ್‌ನಲ್ಲಿ ಒಂದು ಲಕ್ಷ ರೂ. ಲಾಭ ಮಾಡಬಹುದು ಎಂದು ಪ್ಲ್ಯಾನ್‌ ಮಾಡಿದ ವ್ಯಕ್ತಿಯೊಬ್ಬ ೧೬ ಮೊಬೈಲ್‌ಗಳನ್ನು ಹಿಡಿದುಕೊಂಡುಬಂದಿದ್ದ. ಇದು ಮೊಬೈಲ್‌ ಎನ್ನುವುದು ಗೊತ್ತೇ ಆಗದ ಹಾಗೆ ಅದನ್ನು ಪ್ಯಾಕ್‌ ಮಾಡಿ ತರಲಾಗಿತ್ತು. ಆದರೆ, ಕಸ್ಟಮ್ಸ್‌ ಅಧಿಕಾರಿಗಳ ಸೂಕ್ಷ್ಮ ಕಣ್ಣುಗಳಿಂದ, ಡಿಜಿಟಲ್‌ ಸಿಸ್ಟಮ್‌ಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬಂದ ಈ ಪ್ರಯಾಣಿಕನ ಪರಿಶೀಲನೆ ವೇಳೆ ಈ ಮೊಬೈಲ್‌ಗಳು ಪತ್ತೆಯಾಗಿವೆ. ಕಸ್ಟಮ್ಸ್‌ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಗುದದ್ವಾರದಲ್ಲಿ ಇತ್ತು ೩೭ ಲಕ್ಷ ಮೌಲ್ಯದ ಚಿನ್ನ
ದುಬೈನಿಂದ ಬಂದ ವ್ಯಕ್ತಿಯೊಬ್ಬನ ತಪಾಸಣೆ ವೇಳೆ ಆತನ ಗುದದ್ವಾರದಲ್ಲಿ ಭಾರಿ ಪ್ರಮಾಣದ ಚಿನ್ನ ಪತ್ತೆಯಾಗಿದೆ!
ಕಸ್ಟಮ್ಸ್‌ ಕೈಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಚಿನ್ನವನ್ನು ಗುದದ್ವಾರದಲ್ಲಿ ಇಟ್ಟುಕೊಂಡು ಬಂದಿದ್ದ ಪ್ರಯಾಣಿಕನನ್ನು ಅಧಿಕಾರಿಗಳು ಸಂಶಯದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ.

ದುಬೈನಿಂದ ಬೆಂಗಳೂರಿಗೆ ಬಂದಿದ್ದ EK 568 ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನ ಬಗ್ಗೆ ಅಧಿಕಾರಿಗಳಿಗೆ ಮೊದಲೇ ಸಣ್ಣ ಗುಮಾನಿ ಇತ್ತು. ಹೀಗಾಗಿ ಬಂದ ಕೂಡಲೇ ವಿಚಾರಣೆಗೆ ಒಳಪಡಿಸಿದರು. ಕಪ್ಪು ಬಣ್ಣದ ಒಂದು ಗುಳಿಗೆಯ ರೂಪದಲ್ಲಿ ಚಿನ್ನವನ್ನು ಪ್ಯಾಕ್‌ ಮಾಡಲಾಗಿತ್ತು. ಅದನ್ನು ಗುದದ್ವಾರದಲ್ಲಿ ಅಡಗಿಸಿ ಇಡಲಾಗಿತ್ತು. ಬಂಧಿತ ಪ್ರಯಾಣಿಕನಿಂದ ವಶವಾದ ಒಟ್ಟು ಚಿನ್ನ ೭೨೯ ಗ್ರಾಂ, ಅದರ ಮೌಲ್ಯ ೩೬.೯೭ ಲಕ್ಷ ರೂ.!

ಇದನ್ನೂ ಓದಿ | Madinah Gold | ಮದೀನಾದಲ್ಲಿ ಚಿನ್ನದ ಉತ್ಖನನಕ್ಕೆ ಸೌದಿ ಆದೇಶ, ಪೆಟ್ರೋಲ್‌ ನಾಡಲ್ಲಿ ಎಷ್ಟಿದೆ ಬಂಗಾರ?

Exit mobile version