Site icon Vistara News

CWRC: ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ ಮತ್ತೆ ಶಾಕ್;‌ ತಮಿಳುನಾಡಿಗೆ 19 ಟಿಎಂಸಿ ನೀರು ಬಿಡಲು ಸೂಚನೆ

CWRC

CWRC asks Karnataka to release 19 TMC water to Tamil Nadu

ನವದೆಹಲಿ/ಬೆಂಗಳೂರು: ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಕರ್ನಾಟಕಕ್ಕೆ ಮತ್ತೆ ಶಾಕ್ ನೀಡಿದೆ. ಕರ್ನಾಟಕದ ಜಲಾಶಯಗಳಿಗೆ ಒಳಹರಿವು ಪ್ರಮಾಣ ಕಡಿಮೆ ಇದೆ ಎಂಬುದಾಗಿ ಕರ್ನಾಟಕವು (Karnataka) ಮನವಿ ಮಾಡಿದರೂ ಜುಲೈ 12ರಿಂದ 31ರವರೆಗೆ ತಮಿಳುನಾಡಿಗೆ (Tamil Nadu) ಪ್ರತಿದಿನ 1 ಟಿಎಂಸಿ ಅಡಿ ನೀರು ಹರಿಸಬೇಕು ಎಂದು ಸಮಿತಿ ಸಭೆಯಲ್ಲಿ ಕರ್ನಾಟಕಕ್ಕೆ ಸಿಡಬ್ಲ್ಯೂಆರ್‌ಸಿ ಸೂಚಿಸಿದೆ. ಇದರಿಂದ ಕಾವೇರಿ ನೀರು ಹರಿಸುವ ವಿಚಾರಕ್ಕೆ ಕರ್ನಾಟಕಕ್ಕೆ ಮತ್ತೆ ಹಿನ್ನಡೆಯಾದಂತಾಗಿದೆ.

ಕರ್ನಾಟಕದ ವಾದ ಏನಾಗಿತ್ತು?

ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಜಲಾಶಯಗಳಿಗೆ ನೀರಿನ ಒಳಹರಿವಿನ ಪ್ರಮಾಣ ಕುಂಠಿತವಾಗಿದೆ. ಕರ್ನಾಟಕದ ನಾಲ್ಕು ಜಲಾಶಯಗಳಿಗೆ ಪ್ರಸಕ್ತ ವರ್ಷದ ಜೂನ್‌ 1ರಿಂದ ಜುಲೈ 9ರ ಅವಧಿಯಲ್ಲಿ 41.651 ಟಿಎಂಸಿ ನೀರಿನ ಒಳಹರಿವು ಇತ್ತು. ನಾಲ್ಕು ಜಲಾಶಯಗಳಿಗೆ ಶೇ.28.71ರಷ್ಟು ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ನಾಲ್ಕೂ ಜಲಾಶಯಗಳಲ್ಲಿ 58.66 ಟಿಎಂಸಿ ನೀರಿನ ಕೊರತೆ ಇದೆ. ಹಾಗಾಗಿ, ಸಿಡಬ್ಲ್ಯೂಆರ್‌ಸಿಯು ಜುಲೈ 25ರವರೆಗೆ ಕಾಯಬೇಕು. ಅಲ್ಲಿಯವರೆಗೆ ನೀರು ಹರಿಸುವಂತೆ ಆದೇಶಿಸಬಾರದು ಎಂದು ಕರ್ನಾಟಕ ತಿಳಿಸಿತ್ತು.

ಫೆಬ್ರವರಿಯಿಂದ ಮೇವರೆಗೆ ಕರ್ನಾಟಕವು ಪ್ರತಿ ತಿಂಗಳು 2.50 ಟಿಎಂಸಿಯಂತೆ ಪರಿಸರ ಹರಿವನ್ನು ನಿರಂತರವಾಗಿ ಬಿಡುಗಡೆ ಮಾಡಬೇಕು ಎಂದು ಕಳೆದ ಫೆಬ್ರವರಿಯಲ್ಲಿಯೇ ತಮಿಳುನಾಡು ಸಿಡಬ್ಲ್ಯೂಆರ್‌ಸಿ ಸಭೆಯಲ್ಲಿ ವಾದ ಮಂಡಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಕರ್ನಾಟಕವು ತಮಿಳುನಾಡಿಗೆ ನೀರು ಬಿಟ್ಟಿತ್ತು. ಆದರೆ, ಮೇ ಅಂತ್ಯದವರೆಗೂ ನೀರು ಬಿಡಬೇಕು ಎಂಬುದು ತಮಿಳುನಾಡಿನ ವಾದವಾಗಿತ್ತು. ಇದನ್ನು ಸಿಡಬ್ಲ್ಯೂಆರ್‌ಸಿ ನಿರಾಕರಿಸಿತ್ತು. ಆದರೀಗ ಮತ್ತೆ ನೀರು ಬಿಡಬೇಕು ಎಂದು ಸಮಿತಿಯ ಸಭೆಯಲ್ಲಿ ಶಿಫಾರಸು ಮಾಡಿದೆ.

ಮಳೆಗಾಗಿ ಪ್ರಾರ್ಥಿಸೋಣ ಎಂದ ಡಿಕೆಶಿ

ತಮಿಳುನಾಡಿಗೆ 19 ದಿನಗಳವರೆಗೆ ಪ್ರತಿದಿನ 1 ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್‌ಸಿ ಶಿಫಾರಸು ಕುರಿತಂತೆ ಉಪ ಮುಖ್ಯಮಂತ್ರಿ, ನೀರಾವರಿ ಸಚಿವರೂ ಆದ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿದ್ದು, “ಮಳೆಗಾಗಿ ಪ್ರಾರ್ಥಿಸೋಣ” ಎಂದಿದ್ದಾರೆ. “ಇನ್ನೂ ಯಾವುದೇ ತೀರ್ಮಾನವನ್ನು ನಾವು ಮಾಡಿಲ್ಲ. ನಮಗೆ ನಿರೀಕ್ಷೆಗೆ ತಕ್ಕಂತೆ ಮಳೆ ಆಗಿಲ್ಲ. ಮಳೆ ಬರಲಿ ಎಂಬುದಾಗಿ ನಾವು-ನೀವು ಸೇರಿ ಎಲ್ಲರೂ ಪ್ರಾರ್ಥಿಸೋಣ. ಇದರ ಬಗ್ಗೆ ಮುಂದೆ ಮಾತಾಡ್ತೀನಿ” ಎಂದಷ್ಟೇ ಹೇಳಿದರು.

ಇದನ್ನೂ ಓದಿ: Drowned in water : ಈಜಲು ಕಾವೇರಿ ನದಿಗಿಳಿದ ಬಾಲಕರಿಬ್ಬರು ಜಲ ಸಮಾಧಿ

Exit mobile version