Site icon Vistara News

Cyber Crime: ಸಚಿವ ಜಾರ್ಜ್‌ ವಿರುದ್ಧ ಪೋಸ್ಟ್‌ ಮಾಡಿದ್ದ ತೆಲಂಗಾಣ ಬಿಆರ್‌ಎಸ್‌ ಮುಖಂಡನ ಬಂಧನ

kj george ravikanth

ಬೆಂಗಳೂರು: ರಾಜ್ಯದ ಇಂಧನ ಸಚಿವ ಕೆ.ಜೆ ಜಾರ್ಜ್ (Energy Minister KJ George) ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ (Social media) ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಸೈಬರ್ ಕ್ರೈಂ (Cyber crime) ಪೊಲೀಸರು ಬಂಧಿಸಿದ್ದಾರೆ. ಈತ ತೆಲಂಗಾಣದ (Telangana) ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ನಾಯಕತ್ವದ ಭಾರತ ರಾಷ್ಟ್ರ ಸಮಿತಿಯ (Bharat Rastra Samiti – ಬಿಆರ್‌ಎಸ್‌) ಐಟಿ ಸೆಲ್ ಉದ್ಯೋಗಿ ಎಂದು ತಿಳಿದುಬಂದಿದೆ.

ತೆಲಂಗಾಣದ ಕರೀಂನಗರ ನಿವಾಸಿ ರವಿಕಾಂತ ಶರ್ಮಾ (33) ಬಂಧಿತ ಆರೋಪಿ. ಬಿಆರ್‌ಎಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಈ ಆರೋಪಿಯ ತಂದೆ ತಾಯಿ ಕೂಡ ಮಾಜಿ ಕಾರ್ಪೋರೇಟರ್‌ಗಳು ಎಂದು ತಿಳಿದುಬಂದಿದೆ.

ಆರೋಪಿ ರವಿಕಾಂತ ತೆಲಂಗಾಣ ವಿಧಾನಸಭೆ ಚುನಾವಣೆ ವೇಳೆ ಈ ಪೋಸ್ಟ್ ಹಾಕಿದ್ದ. ಕರ್ನಾಟಕದ ವಿದ್ಯುತ್ ಪರಿಸ್ಥಿತಿ ಮತ್ತು ಗೃಹಜ್ಯೋತಿ ಯೋಜನೆ ಬಗ್ಗೆ ಪೋಸ್ಟ್ ಹಾಕಿದ್ದು, ನಕಲಿ ಆಡಿಯೋ ಕ್ಲಿಪ್ ಒಂದನ್ನು ಶೇರ್ ಮಾಡಿ ಪೋಸ್ಟ್ ಮಾಡಿದ್ದ. ಈ ಸಂಬಂಧ ಪೂರ್ವ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ಸಂಬಂಧ ಆರೋಪಿಯನ್ನು ಸೈಬರ್ ಕ್ರೈಮ್ ಪೊಲೀಸರು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಪ್ರವೀಣ್‌ ನೆಟ್ಟಾರು ಹತ್ಯೆ ಆರೋಪಿಗಳು ಇನ್ನೂ ನಾಪತ್ತೆ, ಎನ್‌ಐಎ ವಾಂಟೆಡ್‌ ಲಿಸ್ಟ್‌

ಬೆಂಗಳೂರು: ದಕ್ಷಿಣ ಕನ್ನಡದ ಬೆಳ್ಳಾರೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ (Praveen Nettaru Murder) ಪ್ರಕರಣದಲ್ಲಿ ಇನ್ನೂ ಐವರು ಆರೋಪಿಗಳು ನಾಪತ್ತೆಯಾಗಿದ್ದು, ಇವರಿಗಾಗಿ ಎನ್‌ಐಎ ವಾಂಟೆಡ್‌ ಲಿಸ್ಟ್‌ (NIA Wanted List) ಹೊರಡಿಸಿದೆ.

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ವಾಂಟೆಡ್‌ ಲಿಸ್ಟ್‌ಗಳನ್ನು ಪ್ರಕಟಿಸಲಾಗಿದೆ. ಇದರಲ್ಲಿ ನಿಷೇಧಿತ ಪಿಎಫ್ಐ ಪ್ರಕರಣಗಳಲ್ಲಿ ನಾಪತ್ತೆಯಾಗಿರುವ ಆರೋಪಿಗಳಿದ್ದು, ಕರ್ನಾಟಕದ ಐವರು ಸೇರಿ 24 ಮಂದಿ ಆರೋಪಿಗಳ ಪಟ್ಟಿಯನ್ನು ಎನ್‌ಐಎ ಪ್ರಕಟಿಸಿದೆ. ಆರೋಪಿಗಳ ಪೋಟೊ ಸಹಿತ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಆಂಧ್ರ ಹಾಗೂ ತೆಲಂಗಾಣದ ಮೂವರು, ಕೇರಳದ 11, ಕರ್ನಾಟಕದ ಐವರು ಹಾಗೂ ತಮಿಳುನಾಡಿನ ಐವರು ಎನ್‌ಐಎಗೆ ಬೇಕಾಗಿದ್ದಾರೆ. ಪಿಎಫ್ಐ ಪ್ರಕರಣಗಳಲ್ಲದೆ ಕೊಲೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಇವರು ಭಾಗಿಯಾಗಿದ್ದರು. ಪಿಎಫ್ಐ ಬ್ಯಾನ್ ಆದ ಬಳಿಕ ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಲ್ಲಿ ಎನ್ಐಎಗೆ ಮಾಹಿತಿ ನೀಡುವಂತೆ ಮನವಿ‌ ಮಾಡಲಾಗಿದೆ. ಮಾಹಿತಿ ಹೊಂದಿದ್ದವರು ವಾಟ್ಸ್ಯಾಪ್ ಸಂದೇಶ ಅಥವಾ ಕರೆ ಮಾಡಿ ಹೇಳಬಹುದು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಇನ್ನೂ ಹಲವು ಪಿಎಫ್ಐ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪವಿದೆ. ಬೆಳ್ಳಾರೆ ಮುಸ್ತಫಾ, ಮಸೂಧ್ ಅಗ್ನಾಡಿ, ಮೊಹಮ್ಮದ್ ಷರೀಫ್ ಕೊಡಾಜೆ, ಉಮ್ಮರ್ ಅಲಿಯಾಸ್ ಉಮರ್ ಫಾರೂಕ್ ಮತ್ತು ಅಬೂಬ್ಬಕ್ಕರ್ ಸಿದ್ದಿಕ್ ಇನ್ನೂ ನಾಪತ್ತೆಯಾದವರು.

ಕುಂಭಕೋಣಂ ರಾಮಲಿಂಗಂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ತಮಿಳುನಾಡಿನ ಐವರು, ಪಾಲಕ್ಕಾಡ್ ಶ್ರೀನಿವಾಸ್ ಎಂಬಾತನ ಪ್ರಕರಣದಲ್ಲಿ ಭಾಗಿಯಾಗಿದ್ದ ಕೇರಳದ ನಾಲ್ವರು ಆರೋಪಿಗಳು ಕೂಡ ಪಟ್ಟಿಯಲ್ಲಿದ್ದಾರೆ. ಪಿಎಫ್ಐಗೆ ನೇಮಕ, ಒಳಸಂಚು, ಸರ್ಕಾರದ ವಿರುದ್ಧ ಪಿತೂರಿ, ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರಲು ಯತ್ನಿಸಿದ ಆರೋಪಗಳನ್ನು ಮಾಡಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಮಾಹಿತಿಯನ್ನು ಎನ್ಐಎ ಕಲೆ ಹಾಕುತ್ತಿದೆ.

Exit mobile version