Site icon Vistara News

Cyber Crime: ಮಹಾ ಸೈಬರ್ ವಂಚಕ ಸಿಐಡಿ ಪೊಲೀಸರ ಬಲೆಗೆ, ಐಟಿ ಇಲಾಖೆಗೇ ನಾಮ

cid karnataka

ಬೆಂಗಳೂರು: ಕರ್ನಾಟಕದ ಅತಿ ದೊಡ್ಡ ಸೈಬರ್‌ ವಂಚಕನೊಬ್ಬನನ್ನು ಸಿಐಡಿ ಪೊಲೀಸರು (cid police karnataka) ಬಲೆಗೆ ಕೆಡವಿದ್ದಾರೆ. ಇನ್‌ಕಮ್‌ ಟ್ಯಾಕ್ಸ್‌ ಇಲಾಖೆಗೆ ಹಾಗೂ ಆದಾಯ ತೆರಿಗೆ ಪಾವತಿದಾರರಿಗೆ ವಂಚಿಸುತ್ತಿದ್ದ (cyber crime) ದಿಲೀಪ್ ರಾಜೇಗೌಡ ಎಂಬ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಸಿಐಡಿ ಎಸ್‌ಪಿ ಎಂ.ಡಿ ಶರತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ಈತ ಇನ್‌ಕಮ್‌ ಟ್ಯಾಕ್ಸ್‌ ವೆಬ್‌ಸೈಟ್‌ನಲ್ಲಿನ ಲೋಪವನ್ನು ಪತ್ತೆ ಮಾಡಿಕೊಂಡಿದ್ದ. ಆ ಲೋಪದ ಮೂಲಕ ಐಟಿ ಕಟ್ಟಿದವರಿಗೆ ಸಲ್ಲಬೇಕಿದ್ದ ಐಟಿ ರಿಫಂಡ್ಸ್ ತನ್ನ ಖಾತೆಗೆ ಬರುವಂತೆ ಮಾಡುತ್ತಿದ್ದ. ಹೀಗೆ ಐಟಿ ಇಲಾಖೆಯಿಂದ ಬರೋಬ್ಬರಿ 1,41,84,360 ರೂ. ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.

ಐಟಿ ಇಲಾಖೆಗೆ ರಿಫಂಡ್ ಮಾಡಿದವರ ಖಾತೆಗಳನ್ನೇ ಈತ ಬದಲಾಯಿಸುತ್ತಿದ್ದ. ಐಟಿ ಕಟ್ಟಿದವರ ಹೆಸರಲ್ಲಿ ಬೇರೆ ಬ್ಯಾಂಕ್ ಖಾತೆ ತೆರೆದು ನಕಲಿ ದಾಖಲೆಗಳ ಸಹಿತ ಕೆವೈಸಿ ಮಾಡುತ್ತಿದ್ದ. ನಂತರ ಐಟಿ ಇಲಾಖೆ ನೀಡುವ ರಿಫಂಡ್ ಆರೋಪಿಯ ಖಾತೆಗೆ ಬರುತ್ತಿತ್ತು. ಹೀಗೆ ಕೋಟಿ ಕೋಟಿ ವಂಚಿಸಿದ್ದಾನೆ.

ವಿಚಾರಣೆ ವೇಳೆ ಮತ್ತಷ್ಟು ಸೈಬರ್ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿಂದೆ ಇದೇ ರೀತಿ ಮಾಡಿ ಮೂರು ಕೋಟಿ ಅರುವತ್ತು ಲಕ್ಷ ರೂ. ಹಣ ಕಬಳಿಸಿದ್ದ. ವಿಚಾರಣೆ ವೇಳೆ ಬಜಾಜ್ ಕಂಪನಿಗೆ ನಕಲಿ ದಾಖಲೆ ಸಲ್ಲಿಸಿ ಲೋನ್ ಪಡೆದು ವಂಚಿಸಿರುವುದು ಪತ್ತೆಯಾಗಿದೆ.

ಕರ್ನಾಟಕ ಸರ್ಕಾರದ ಕಾವೇರಿ ಆನ್‌ಲೈನ್ ಪೋರ್ಟಲ್‌ನಲ್ಲಿ ಈತ ಎಂಟ್ರಿಯಾಗಿದ್ದು ಪತ್ತೆಯಾಗಿದೆ. ಆಸ್ತಿಗಳನ್ನು ರಿಜಿಸ್ಟರ್ ಮಾಡಲು ಬಳಸುವ ಕಾವೇರಿ ವೆಬ್ ಪೋರ್ಟಲ್‌ನಲ್ಲಿ ನಡೆದ ವಂಚನೆಯಲ್ಲಿ ಈ ಹಿಂದೆ ದಾಖಲಾಗಿದ್ದ ಕೇಸ್‌ನಲ್ಲಿ ಶ್ರೀಕೃಷ್ಣ ಅಲಿಯಾಸ್ ಹ್ಯಾಕರ್ ಶ್ರೀಕಿಯನ್ನು ವಿಚಾರಣೆ ಮಾಡಲಾಗಿತ್ತು. ಕಾವೇರಿ ವೆಬ್ ಪೋರ್ಟಲ್‌ನಿಂದ ಕೋಟ್ಯಂತರ ರೂ. ಸರ್ಕಾರದ ಹಣ ದುರ್ಬಳಕೆಯಾಗಿತ್ತು.

ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಆರೋಪಿ ದಿಲೀಪ್ ರಾಜೇಗೌಡ ಹಾಸನ ಹಿರಿಸಾವೆ ಮೂಲದವನು. ಬಳಿಕ ಧಾರವಾಡದಲ್ಲಿ ನೆಲೆಸಿ ಕೃತ್ಯ ಎಸಗುತ್ತಿದ್ದ. ಸದ್ಯ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸೈಬರ್‌ ಸೇಫ್ಟಿ ಅಂಕಣ: ಹ್ಯಾಕರ್‌ಗಳು ಬ್ಯಾಂಕ್‌ಗಳಿಂದ 100 ಕೋಟಿ ಡಾಲರ್‌ ಕದ್ದದ್ದು ಹೀಗೆ! ಭಾಗ- 2

Exit mobile version