Site icon Vistara News

Cyber Crime: ಯುವ ವೈದ್ಯೆಯ ಬೆನ್ನುಬಿದ್ದ ಕಿರಾತಕ; ಅಶ್ಲೀಲ ಫೋಟೊ ತಂದೆಗೆ ಕಳಿಸಿ ಬ್ಲ್ಯಾಕ್‌ಮೇಲ್‌

Cyber crime

#image_title

ಚಿಕ್ಕಬಳ್ಳಾಪುರ: ವೃತ್ತಿಯಲ್ಲಿ ಡಾಕ್ಟರ್‌ ಆಗಿರುವ ಯುವತಿಯೊಬ್ಬಳ (young woman doctor) ಫೋಟೊವನ್ನು ಅಶ್ಲೀಲವಾಗಿ ಎಡಿಟ್‌ ಮಾಡಿ ಅದನ್ನು ಆಕೆಯ ತಂದೆಗೆ ಕಳುಹಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌ (Blackmail) ಮಾಡುತ್ತಿರುವ ಕಿರಾತಕನ ವಿರುದ್ಧ ಸೈಬರ್‌ ಠಾಣೆಗೆ (Cyber crime) ದೂರು ದಾಖಲಾಗಿದೆ.

ಯುವತಿಯ ಫೋಟೊವನ್ನು ಅಸಭ್ಯವಾಗಿ ಎಡಿಟ್‌ ಮಾಡಿ ಅದನ್ನು ಆಕೆಯ ತಂದೆಗೇ ವಾಟ್ಸಾಪ್‌ ಮಾಡಿರುವ ಈ ದುಷ್ಟ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದೀಗ ಯುವತಿ ತಂದೆ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಇತ್ತೀಚೆಗಷ್ಟೇ ಎಂಬಿಬಿಎಸ್ ಮುಗಿಸಿ ಚಿಂತಾಮಣಿಗೆ ಬಂದಿದ್ದ ವೈದ್ಯೆ ಇವರು. ಇವರಿಗೆ ಇತ್ತೀಚೆಗೆ ಕರೆಯೊಂದು ಬಂದಿದ್ದು, ನೀವು ಆನ್ಲೈನ್ ನಲ್ಲಿ 5 ಸಾವಿರ ಸಾಲ ಪಡೆದಿದ್ದೀರಿ. ಅದನ್ನು ವಾಪಸ್‌ ಕಟ್ಟಬೇಕು ಎಂದು ಬೆದರಿಕೆ ಹಾಕಲಾಗಿದೆ. ಆದರೆ, ಯುವತಿ, ನಾನು ಯಾವುದೇ ಸಾಲ ಪಡೆದಿಲ್ಲ. ಹಾಗಾಗಿ ಯಾವುದೇ ಹಣ ಕಟ್ಟುವುದಿಲ್ಲ ಎಂದು ವೈದ್ಯೆ ಹೇಳಿದ್ದರು.

ಚಿಂತಾಮಣಿ ನಗರದ ಕನಂಪಲ್ಲಿ ನಿವಾಸಿಯಾಗಿರುವ ಈ ಯುವ ವೈದ್ಯೆ ಹಲವು ದಿನಗಳ ಹಿಂದೆ ನಕಲಿ ಅಪ್ಲಿಕೇಶನ್‌ ಮೇಲೆ ಕ್ಲಿಕ್‌ ಮಾಡಿದ್ದು ನಿಜವಾದರೂ ಯಾವುದೇ ಹಣ ಪಡೆದಿರಲಿಲ್ಲ. ಆರಂಭದಲ್ಲಿ ಹಣ ಪಡೆಯುವಂತೆ ಒತ್ತಡ ಹೇರಿದ ಕಿರಾತಕರು ಬಳಿಕ, ಹಣ ಪಡೆದಿದ್ದೀರಿ ವಾಪಸ್‌ ಕೊಡಿ ಎಂದು ಒತ್ತಡ ಹೇರಲು ಆರಂಭಿಸಿದ್ದಾರೆ ಎನ್ನಲಾಗಿದೆ.

ಆದರೆ ಆಕೆ ಹಣ ಮರಳಿ ಪಾವತಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಇದಾದ ಬಳಿಕ ʻನಿಮ್ಮ ಅಶ್ಲೀಲ ಫೋಟೊ ನಮ್ಮ ಬಳಿ ಇದೆ. ಅದನ್ನು ನಿಮ್ಮ ಮನೆಯವರು, ಸ್ನೇಹಿತರಿಗೆಲ್ಲ ಕಳುಹಿಸುತ್ತೇನೆʼʼ ಎಂದು ಆಕೆಗೆ ತಿಳಿಸಲಾಗಿದೆ. ಆದರೆ, ತಮ್ಮ ಫೋಟೊ ಅವರಿಗೆ ಹೇಗೆ ಸಿಗುತ್ತದೆ, ತಾನು ಆ ರೀತಿ ನಡೆದುಕೊಂಡಿದ್ದೇ ಇಲ್ಲ ಎಂದು ಧೈರ್ಯವಾಗಿದ್ದರು ಈ ವೈದ್ಯೆ.

ಈ ನಡುವೆ, ಈ ವೈದ್ಯೆಯ ಅಸಭ್ಯ ಫೋಟೊ ಒಂದನ್ನು ಯುವತಿಯ ತಂದೆಯ ವಾಟ್ಸಾಪ್‌ಗೆ ಈ ಕಿರಾತಕ ಶೇರ್‌ ಮಾಡಿದ್ದಾನೆ. ಇದು ಅಶ್ಲೀಲವಾಗಿ ಎಡಿಟ್‌ ಮಾಡಿರುವ ಫೋಟೊ ಆಗಿದ್ದು, ಗೊತ್ತೇ ಆಗದಂತೆ ಎಡಿಟ್‌ ಮಾಡಲಾಗಿದೆ ಎನ್ನಲಾಗಿದೆ. ಜತೆಗೆ ಮನೆಯವರು, ಸಂಬಂಧಿಕರಿಗೂ ಈ ಫೋಟೊಗಳನ್ನು ಸೈಬರ್‌ ಕಳ್ಳ ಕಳುಹಿಸಿದ್ದಾನೆ. ಇದೀಗ ಯುವತಿಯ ತಂದೆ ಚಿಕ್ಕಬಳ್ಳಾಪುರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಿಜಕ್ಕೂ ಸೈಬರ್‌ ಕಳ್ಳನಾ? ಪರಿಚಿತರ ಕೃತ್ಯವಾ?

ಈ ನಡುವೆ, ಈ ರೀತಿಯ ಬ್ಲ್ಯಾಕ್‌ ಮೇಲ್‌ ಮಾಡುತ್ತಿರುವುದು ಸೈಬರ್‌ ಕಳ್ಳರಾ ಅಥವಾ ಬೇರೆ ಯಾರೋ ಪರಿಚಿತರು ಈ ಕೃತ್ಯ ನಡೆಸುತ್ತಿದ್ದಾರೋ ಎಂಬ ಬಗ್ಗೆಯೂ ಸಂಶಯವಿದೆ. ಈ ಕಿರಾತಕ ಕೇವಲ ಸೋಷಿಯಲ್‌ ಮೀಡಿಯಾದಲ್ಲಿ ಆಪರೇಟ್‌ ಮಾಡುತ್ತಿಲ್ಲ. ಆತ ಯುವತಿಯ ಸಂಬಂಧಿಕರಿಗೆಲ್ಲ ಫೋಟೊ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ : Cyber Crime: 7 ಸಾವಿರ ರೂ. ಆಸೆಗೆ 2.27 ಕೋಟಿ ರೂ. ಕಳೆದುಕೊಂಡ ಮುಂಬೈ ವ್ಯಕ್ತಿ

Exit mobile version