Site icon Vistara News

Cyclone Biparjoy: ದಕ್ಷಿಣ ಕನ್ನಡ ಬೀಚ್‌ಗಳಿಗೆ NO Entry; ಪ್ರವಾಸಿಗರು ವಾಪಸ್‌!

No entry for Dakshina kannada beach

ಉಳ್ಳಾಲ: ಅರಬ್ಬೀ ಸಮುದ್ರದಲ್ಲಿ ಬಿಪರ್ ಜಾಯ್ ಚಂಡಮಾರುತ (Cyclone Biparjoy) ಹಿನ್ನೆಲೆಯಲ್ಲಿ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರತೀರದಲ್ಲಿ ಸಮುದ್ರದ ಅಲೆಗಳ ಅಬ್ಬರ ಬುಧವಾರ (ಜೂ. 7) ನಸುಕಿನಿಂದ ಹೆಚ್ಚಾಗಿದೆ. ಜಿಲ್ಲಾಡಳಿತದ ಆದೇಶದಂತೆ ಉಳ್ಳಾಲ, ಸೋಮೇಶ್ವರ ಸಮುದ್ರ ತೀರದಲ್ಲಿ ಬರುವ ಪ್ರವಾಸಿಗರನ್ನು ಹೋಂಗಾರ್ಡ್‌ಗಳು ವಾಪಸ್‌ ಕಳುಹಿಸುತ್ತಿದ್ದಾರೆ‌.

ಬುಧವಾರ ನಸುಕಿನಿಂದ ಚಂಡಮಾರುತದ ಪ್ರಭಾವ ಉಳ್ಳಾಲದ ಸಮುದ್ರ ತೀರದ ಪ್ರದೇಶಗಳಿಗೆ ಗೋಚರಿಸಲು ಆರಂಭವಾಗಿದೆ. ಬೃಹತ್ ಗಾತ್ರದ ಅಲೆಗಳು ಸಮುದ್ರದ ಅಂಚಿಗೆ, ಬಂಡೆ ಕಲ್ಲುಗಳಿಗೆ ಬಹುವೇಗವಾಗಿ ಅಪ್ಪಳಿಸುತ್ತಿದೆ. ಉಳ್ಳಾಲದ ಕೋಟೆಪುರ, ಕೋಡಿ, ಮೊಗವೀರಪಟ್ನ, ಕೈಕೋ, ಹಿಲೆರಿಯಾನಗರ, ಸುಭಾಷನಗರ, ಕೈಕೊ, ಸಮ್ಮರ್ ಸ್ಯಾಂಡ್, ಸೋಮೇಶ್ವರ, ಉಚ್ಚಿಲ, ಬಟ್ಟಂಪಾಡಿ ಸಮುದ್ರ ತೀರದ ಜನರಿಗೆ ಸ್ಥಳೀಯಾಡಳಿತ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ.

ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ಠಾಣಾ ಪೊಲೀಸರು, ಹೋಂಗಾರ್ಡ್‌ಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸಮುದ್ರ ತೀರಕ್ಕೆ ಬರುವ ಪ್ರವಾಸಿಗರನ್ನು ವಾಪಸ್‌ ಕಳುಹಿಸಲಾಗುತ್ತಿದೆ. ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ಳುತ್ತಿರುವ ಬಿಪರ್‌ಜಾಯ್ ಚಂಡಮಾರುತ, ಉತ್ತರ ದಿಕ್ಕಿನತ್ತ ಚಲಿಸಿದರೆ ಗೋವಾ, ಮುಂಬೈ ಕರಾವಳಿಗೆ ಅಪ್ಪಳಿಸಲಿದೆ. ಜತೆಯಲ್ಲೇ ಕೇರಳದಿಂದ ಮಹಾರಾಷ್ಟ್ರದ ಸಾಗರ ತೀರದ ಉದ್ದಕ್ಕೂ ಭಾರಿ ಮಳೆ ಆಗಲಿದೆ. ಕರ್ನಾಟಕದ ಕರಾವಳಿಯಲ್ಲಿ ಜೂನ್ 8ರಿಂದ ಜೂನ್ 10ರವರೆಗೆ ಪ್ರಕ್ಷುಬ್ಧ ವಾತಾವರಣ ಇರಲಿದೆ.

ಉಳ್ಳಾಳ ಬೀಚ್‌ನ ಒಂದು ನೋಟ

ಬಿಪರ್‌ಜಾಯ್‌ ಪದದ ಅರ್ಥ ಏನು? ಮೊದಲು ಎಲ್ಲಿ ಬಳಕೆ?

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಚಂಡಮಾರುತದ ರೂಪ ತಾಳಿದೆ. ಈ ಚಂಡಮಾರುತಕ್ಕೆ ಬಿಪರ್‌ಜಾಯ್‌ (Cyclone Biparjoy) ಎಂದು ಕರೆಯಲಾಗಿದ್ದು, ಕರ್ನಾಟಕ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಇದು ಭಾರಿ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಬಿಪರ್‌ಜಾಯ್‌ ಚಂಡಮಾರುತದಿಂದ ಮುಂಗಾರು ಕೂಡ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟರಮಟ್ಟಿಗೆ ಪರಿಣಾಮ ಬೀರಿರುವ ಚಂಡಮಾರುತ ‘ಬಿಪರ್‌ಜಾಯ್’‌ ಪದವನ್ನು ಮೊದಲು ಎಲ್ಲಿ ಬಳಸಲಾಯಿತು? ಈ ಪದದ ಅರ್ಥ ಏನು ಎಂಬುದರ ಮಾಹಿತಿ ಇಲ್ಲಿದೆ.

ಬಿಪರ್‌ಜಾಯ್‌ ಪದದ ಅರ್ಥವೇನು?

ಚಂಡಮಾರುತಕ್ಕೆ ಬಿಪರ್‌ಜಾಯ್‌ ಎಂದು ಬಾಂಗ್ಲಾದೇಶ ಹೆಸರಿಟ್ಟಿದೆ. ಬಿಪರ್‌ಜಾಯ್‌ ಎಂದರೆ ಹವಾಮಾನ ವೈಪರೀತ್ಯ ಅಥವಾ ವಿಪತ್ತು ಎಂಬ ಅರ್ಥವಿದೆ. ಈ ಪದವನ್ನು ವಿಶ್ವ ಹವಾಮಾನ ಸಂಸ್ಥೆ (WMO) 2020ರಲ್ಲಿ ಅಳವಡಿಸಿಕೊಂಡಿದೆ. ಅರಬ್ಬೀ ಸಮುದ್ರ ಸೇರಿ ಆಯಾ ಪ್ರಾದೇಶಿಕ ನಿಯಮಗಳಿಗೆ ಅನ್ವಯವಾಗುವಂತೆ ಚಂಡಮಾರುತಗಳಿಗೆ ಹೆಸರಿಡಲಾಗುತ್ತದೆ.

ಯಾವ ಆಧಾರದ ಮೇಲೆ ನಾಮಕರಣ?

ಚಂಡಮಾರುತಗಳಿಗೆ ಡಬ್ಲ್ಯೂಎಂಒ ಮತ್ತು ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಆಯೋಗದ (ESCAP) ಸದಸ್ಯ ರಾಷ್ಟ್ರಗಳು ಹೆಸರಿಡುತ್ತವೆ. ಅಟ್ಲಾಂಟಿಕ್‌, ಭಾರತೀಯ ಸಾಗರ ಹಾಗೂ ದಕ್ಷಿಣ ಪೆಸಿಫಿಕ್‌ನಲ್ಲಿ ವರ್ಣಮಾಲೆಯ ಪ್ರಕಾರ ಚಂಡಮಾರುತಗಳಿಗೆ ಹೆಸರಿಡಲಾಗುತ್ತದೆ. ಹಾಗೆಯೇ, ಮಹಿಳೆಯರು ಹಾಗೂ ಪುರುಷರ ಹೆಸರುಗಳನ್ನು ಕೂಡ ಕೆಲವೊಮ್ಮೆ ಇಡಲಾಗುತ್ತದೆ. ಉತ್ತರ ಭಾರತ ಸಾಗರ ಪ್ರದೇಶದ ಕಡೆಯೂ ವರ್ಣಮಾಲೆ ಆಧಾರದ ಮೇಲೆ ಹೆಸರಿಡುತ್ತಾರೆ. ಆದರೆ, ಲಿಂಗ ತಟಸ್ಥವಾಗಿ ಚಂಡಮಾರುತಗಳಿಗೆ ನಾಮಕರಣ ಮಾಡಲಾಗುತ್ತದೆ.

ಇದನ್ನೂ ಓದಿ: Cyclone Biporjoy: ಬಿಪರ್‌ಜಾಯ್‌ ಚಂಡಮಾರುತದಿಂದ ಮಳೆ; ಮುಂಗಾರು ಮತ್ತಷ್ಟು ದೂರ

ಕರ್ನಾಟಕದ ಮೇಲೆ ಬೀರುವ ಪರಿಣಾಮ ಏನು?

ಬಿಪರ್‌ಜಾಯ್‌ ಚಂಡಮಾರುತದ ಕುರಿತು ಬುಧವಾರ ಬೆಳಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಗಂಟೆಗೆ 135-160 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಲಿದ್ದು, ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ. ಈ ರಾಜ್ಯಗಳಲ್ಲಿ ಚಂಡಮಾರುತದ ಪರಿಣಾಮವೂ ತೀವ್ರವಾಗಿರಲಿದೆ ಎಂದು ತಿಳಿಸಿದೆ. ಹಾಗಾಗಿ, ಕರಾವಳಿ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version