ಬೆಂಗಳೂರು: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಅದು ಚಂಡಮಾರುತದ ರೂಪ ತಾಳಿದೆ. ಈ ಚಂಡಮಾರುತಕ್ಕೆ ಬಿಪರ್‌ಜಾಯ್ (Cyclone Biparjoy) ಎಂದು ಕರೆಯಲಾಗಿದ್ದು, ಕರ್ನಾಟಕ, ಕೇರಳ ಸೇರಿ ಹಲವು ರಾಜ್ಯಗಳಲ್ಲಿ ಇದು ಭಾರಿ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಬಿಪರ್‌ಜಾಯ್ ಚಂಡಮಾರುತದಿಂದ ಮುಂಗಾರು ಕೂಡ ವಿಳಂಬವಾಗಲಿದೆ ಎಂದು ಹೇಳಲಾಗುತ್ತಿದೆ. ಅಷ್ಟರಮಟ್ಟಿಗೆ ಪರಿಣಾಮ ಬೀರಿರುವ ಚಂಡಮಾರುತ ‘ಬಿಪರ್‌ಜಾಯ್’ ಪದವನ್ನು ಮೊದಲು ಎಲ್ಲಿ ಬಳಸಲಾಯಿತು? ಈ ಪದದ ಅರ್ಥ ಏನು ಎಂಬುದರ ಮಾಹಿತಿ ಇಲ್ಲಿದೆ.
ಬಿಪರ್‌ಜಾಯ್ ಪದದ ಅರ್ಥವೇನು?
ಚಂಡಮಾರುತಕ್ಕೆ ಬಿಪರ್‌ಜಾಯ್ ಎಂದು ಬಾಂಗ್ಲಾದೇಶ ಹೆಸರಿಟ್ಟಿದೆ. ಬಿಪರ್‌ಜಾಯ್ ಎಂದರೆ ಹವಾಮಾನ ವೈಪರೀತ್ಯ ಅಥವಾ ವಿಪತ್ತು ಎಂಬ ಅರ್ಥವಿದೆ. ಈ ಪದವನ್ನು ವಿಶ್ವ ಹವಾಮಾನ ಸಂಸ್ಥೆ (WMO) 2020ರಲ್ಲಿ ಅಳವಡಿಸಿಕೊಂಡಿದೆ. ಅರಬ್ಬೀ ಸಮುದ್ರ ಸೇರಿ ಆಯಾ ಪ್ರಾದೇಶಿಕ ನಿಯಮಗಳಿಗೆ ಅನ್ವಯವಾಗುವಂತೆ ಚಂಡಮಾರುಗಳಿಗೆ ಹೆಸರಿಡಲಾಗುತ್ತದೆ.
ಯಾವ ಆಧಾರದ ಮೇಲೆ ನಾಮಕರಣ?
ಚಂಡಮಾರುತಗಳಿಗೆ ಡಬ್ಲ್ಯೂಎಂಒ ಮತ್ತು ವಿಶ್ವಸಂಸ್ಥೆ ಆರ್ಥಿಕ ಹಾಗೂ ಸಾಮಾಜಿಕ ಆಯೋಗದ (ESCAP) ಸದಸ್ಯ ರಾಷ್ಟ್ರಗಳು ಹೆಸರಿಡುತ್ತವೆ. ಅಟ್ಲಾಂಟಿಕ್, ಭಾರತೀಯ ಸಾಗರ ಹಾಗೂ ದಕ್ಷಿಣ ಪೆಸಿಫಿಕ್‌ನಲ್ಲಿ ವರ್ಣಮಾಲೆಯ ಪ್ರಕಾರ ಚಂಡಮಾರುತಗಳಿಗೆ ಹೆಸರಿಡಲಾಗುತ್ತದೆ. ಹಾಗೆಯೇ, ಮಹಿಳೆಯರು ಹಾಗೂ ಪುರುಷರ ಹೆಸರುಗಳನ್ನು ಕೂಡ ಕೆಲವೊಮ್ಮೆ ಇಡಲಾಗುತ್ತದೆ. ಉತ್ತರ ಭಾರತ ಸಾಗರ ಪ್ರದೇಶದ ಕಡೆಯೂ ವರ್ಣಮಾಲೆ ಆಧಾರದ ಮೇಲೆ ಹೆಸರಿಡುತ್ತಾರೆ. ಆದರೆ, ಲಿಂಗ ತಟಸ್ಥವಾಗಿ ಚಂಡಮಾರುತಗಳಿಗೆ ನಾಮಕರಣ ಮಾಡಲಾಗುತ್ತದೆ.
ಇದನ್ನೂ ಓದಿ: Cyclone Biporjoy: ಬಿಪರ್‌ಜಾಯ್ ಚಂಡಮಾರುತದಿಂದ ಮಳೆ; ಮುಂಗಾರು ಮತ್ತಷ್ಟು ದೂರ
ಕರ್ನಾಟಕದ ಮೇಲೆ ಬೀರುವ ಪರಿಣಾಮ ಏನು?
ಬಿಪರ್‌ಜಾಯ್ ಚಂಡಮಾರುತದ ಕುರಿತು ಬುಧವಾರ ಬೆಳಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಗಂಟೆಗೆ 135-160 ಕಿ.ಮೀ. ವೇಗದಲ್ಲಿ ಚಂಡಮಾರುತ ಬೀಸಲಿದ್ದು, ಕರ್ನಾಟಕ, ಕೇರಳ ಹಾಗೂ ಗೋವಾ ರಾಜ್ಯಗಳಲ್ಲಿ ಭಾರಿ ಮಳೆಯಾಗಿದೆ. ಈ ರಾಜ್ಯಗಳಲ್ಲಿ ಚಂಡಮಾರುತದ ಪರಿಣಾಮವೂ ತೀವ್ರವಾಗಿರಲಿದೆ ಎಂದು ತಿಳಿಸಿದೆ. ಹಾಗಾಗಿ, ಕರಾವಳಿ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಸೂಚಿಸಿದೆ.