ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ಚಂಡಮಾರುತ (Cyclone Mocha) ರೂಪುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಐದು ದಿನ ರಾಜ್ಯದಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ.
ಮೇ 6ರ ಆಸುಪಾಸಿನಲ್ಲಿ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆಯಿದ್ದು, ಇದರ ಪ್ರಭಾವದಿಂದ ರಾಜ್ಯಡೆಲ್ಲೆಡೆ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಇಂದಿನಿಂದ ಐದು ದಿನ ರಾಜ್ಯಾದ್ಯಂತ ಮಳೆಯಾಗಲಿದ್ದು, ಮೇ 7ರಿಂದ 9ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ (Weather alert) ನೀಡಿದೆ.
ಆಗಮಿಸುತ್ತಿರುವ ಚಂಡಮಾರುತಕ್ಕೆ ‘ಮೋಚಾ’ ಎಂದು ಹೆಸರಿಸಲಾಗಿದೆ. ಮೇ 6ರಂದು ಆಗ್ನೇಯ ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆ ರೂಪುಗೊಳ್ಳಲಿದೆ. ನಂತರ 48 ಗಂಟೆಗಳಲ್ಲಿ (ಮೇ 7, 8) ಅದೇ ಸ್ಥಳದಲ್ಲಿ ವಾಯುಭಾರ ಕುಸಿತವಾಗುತ್ತದೆ. ಒಡಿಶಾ ತೀರಕ್ಕೆ ಸೈಕ್ಲೋನ್ ಅಪ್ಪಳಿಸುವ ಸಾಧ್ಯತೆಯಿದ್ದು, ದಕ್ಷಿಣ ಭಾರತ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಳೆಯಾಗಬಹುದು.
ಮೇ 8 ಮತ್ತು 9ರಂದು ದಕ್ಷಿಣ ಒಳನಾಡಿನ ಚಾಮರಾಜನಗರ, ಕೊಡಗು, ಮೈಸೂರು ಮತ್ತು ರಾಮನಗರ ಜಿಲ್ಲೆಗಳಿಗೆ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಬೆಳಗಾವಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಹಾಗೂ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವ ಇದೆ.
ನಿನ್ನೆ ಬೆಂಗಳೂರು ನಗರ ಜಿಲ್ಲೆಯ ಕೆಎಸ್‌ಎನ್‌ಡಿಎಂಸಿ ಕ್ಯಾಂಪಸ್‌ನಲ್ಲಿ 5 ಸೆಂ.ಮೀ., ಕೋಲಾರ ಜಿಲ್ಲೆಯ ಮಾಲೂರು, ಬೆಂಗಳೂರು ನಗರ ಜಿಲ್ಲೆಯ ಜಿಕೆವಿಕೆಯಲ್ಲಿ ತಲಾ 4 ಸೆಂ.ಮೀ., ಯಾದಗಿರಿ ಜಿಲ್ಲೆಯ ಸೈದಾಪುರ, ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ.
ರಾಜಧಾನಿಯಲ್ಲಿ ಮುಂದಿನ ಕೆಲವು ದಿನಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದ್ದು, ಸಾಧಾರಣ ಅಥವಾ ಗುಡುಗು ಸಹಿತ ಮಳೆಯಾಗಬಹುದು. ನಗರದಲ್ಲಿ ಗರಿಷ್ಠ ತಾಪಮಾನವು 32 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Weather Alert: ರಾಜಧಾನಿಯಲ್ಲಿ ಮುಂದುವರಿದ ಜಿನುಗು ಮಳೆ, ಇನ್ನೆರಡು ದಿನ ರಾಜ್ಯಾದ್ಯಂತ ಮಳೆ