ಬೆಂಗಳೂರು: ಜುವೆಲ್ಲರಿ ಅಂಗಡಿಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು (Cylinder Blast) ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ನಗರತ್ ಪೇಟೆ ಬೀದಿಯಲ್ಲಿ ಜೂ.29ರಂದು ಘಟನೆ ನಡೆದಿದ್ದು, ಮೃತಪಟ್ಟವರನ್ನು ವಿಷ್ಣು ಸಾವಂತ್ (36) ಎಂದು ಗುರುತಿಸಲಾಗಿದೆ.
ಸಿದ್ದಪ್ಪನ ಗಲ್ಲಿಯಲ್ಲಿ ವಿಷ್ಣು ಮತ್ತು ಅವರ ಪತ್ನಿ ಇಲ್ಲಿನ ಕಟ್ಟಡವೊಂದರ ನೆಲಮಹಡಿಯಲ್ಲಿದ್ದ ಜುವೆಲ್ಲರಿ ಒಂದರಲ್ಲಿ ಕೆಲಸ ಮಾಡುತ್ತಾ ಜೀವನೋಪಾಯ ಕಂಡುಕೊಂಡಿದ್ದರು. ಅಕ್ಕಸಾಲಿಗರ ಅಂಗಡಿಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಕರಗಿಸಲು ಆಕ್ಸಿಜನ್ ಮತ್ತು ಎಲ್‌ಪಿಜಿ ಬಳಸಲಾಗುತ್ತದೆ. ಇಲ್ಲೂ ಆಕ್ಸಿಜನ್ ಬಳಕೆಯಾಗಿತ್ತು.
ಗುರುವಾರ (ಜೂ.30) ಮಧ್ಯಾಹ್ನ ವಿಷ್ಣುಗೆ ಅವರ ಪತ್ನಿ ಊಟ ತಂದುಕೊಟ್ಟಿದ್ದರು. ಹೆಂಡತಿ ತಂದ ಊಟ ಉಣ್ಣಲು ಅವರು ಕೆಲಸ ಮಾಡುತ್ತಿದ್ದಲ್ಲಿಂದ ಎದ್ದು ಬಂದಿದ್ದರು. ಆದರೆ, ಹಾಗೆ ಏಳುವಾಗ ಆಕ್ಸಿಜನ್ ಆಫ್ ಮಾಡಿರಲಿಲ್ಲ ಎನ್ನಲಾಗಿದೆ. ಆ ಸಮಯದಲ್ಲಿ ಒತ್ತಡ ಒಮ್ಮಿಂದೊಮ್ಮೆಗೇ ಹೆಚ್ಚಾಗಿ ಅದು ಸ್ಫೋಟಗೊಂಡಿದೆ ಎನ್ನಲಾಗಿದೆ.
ಸ್ಫೋಟದಿಂದಾಗಿ ವಿಷ್ಣು ತೀವ್ರವಾಗಿ ಗಾಯಗೊಂಡಿದ್ದರು. ಅವರ ತಲೆಗೆ ತೀವ್ರಗಾಯವಾದ ಹಿನ್ನೆಲೆ ರಕ್ತಸ್ರಾವವಾಗಿ ಸಾವು ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಸ್ಥಳೀಯರೆಲ್ಲರೂ ಸೇರಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ವಿಷ್ಣು ಜೀವ (ಶುಕ್ರವಾರ) ಬಿಟ್ಟಿದ್ದಾರೆ. ಹಲಸೂರುಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಅಂಗಡಿ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದೆ. ಆದರೆ, ಇದಕ್ಕೆ ಅನುಮತಿ ಇದೆಯಾ, ಗ್ಯಾಸ್ ಬಳಕೆಗೆ ಅವಕಾಶವಿದೆಯಾ ಎನ್ನುವ ಅಂಶಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇದನ್ನೂ ಓದಿ: Love Case: ಟೀಚರ್ ಮಗನ ಲವ್ ಟಾರ್ಚರ್‌ಗೆ ನೇಣಿಗೆ ಕೊರಳೊಡ್ಡಿದ ವಿದ್ಯಾರ್ಥಿನಿ!
ಘಟನೆಯ ವೇಳೆ ಮಾಲೀಕರು ಅಲ್ಲಿರಲಿಲ್ಲ. ಕೆಲಸದವರು ಮಾತ್ರ ಇದ್ದರು ಎನ್ನಲಾಗಿದೆ. ಅಂಗಡಿ ಮಾಲೀಕನಿಗಾಗಿಯೂ ಶೋಧ ನಡೆಯುತ್ತಿದೆ. ಇತ್ತ ವಿಷ್ಣು ಇನ್ನಿಲ್ಲ ಎಂಬ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
6 ಮಂದಿ ಎಫ್‌ಐಆರ್ ದಾಖಲು
ಆಕ್ಸಿಜನ್ ಸಿಲಿಂಡರ್ ಸ್ಫೋಟದಲ್ಲಿ ಕಾರ್ಮಿಕ ಸಾವು ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕಟ್ಟಡ ಮಾಲೀಕ ಹಾಗೂ ಶಾಪ್ ಬಾಡಿಗೆಗೆ ಪಡೆದಿದ್ದ ಮಾಲೀಕ ಸೇರಿದಂತೆ 6 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ರೆಸಿಡೆನ್ಸಿ ಏರಿಯಾದಲ್ಲಿ ಕರ್ಮಷಿಯಲ್ ಆಕ್ಟಿವಿಟಿ ನಡೆಸಲಾಗುತ್ತಿದ್ದ ಕಾರಣಕ್ಕೆ ಮೃತ ವಿಷ್ಣು ಸಾವಂತ್ ಕೆಲಸ ಮಾಡುತ್ತಿದ್ದ ಶಾಪ್‌ನ ಮಾಲೀಕರಾದ ರಮೇಶ್ ಕೊಠಾರಿ ಹಾಗೂ ಮಹೇಂದ್ರ ಕೊಠಾರಿ ಹಾಗೂ ಕಟ್ಟಡದ ಮಾಲೀಕರಾದ ಕವಿತಾ, ಸಂಗೀತಾ, ಅಕ್ಷಯ್ ಕೊಠಾರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡ ಮುಂಜಾಗ್ರತಾ ಕ್ರಮ ತೆಗೆದುಕೊಂಡಿಲ್ಲ. ಬೆಂಕಿ ಅವಘಡಗಳನ್ನು ತಪ್ಪಿಸಲು ಯಾವುದೇ ಸಲಕರಣೆಗಳು ಇಲ್ಲದೆ ಇರುವುದು, ನಿರ್ಲಕ್ಷ್ಯ ವಹಿಸಿದ ಕಾರಣಕ್ಕೆ ದೂರು ದಾಖಲಿಸಲಾಗಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಿಂದ ಮೃತದೇಹವನ್ನು ಕುಟುಂಬಸ್ಥರು ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ