Site icon Vistara News

Fire tragedy : ಹೊಸಕೋಟೆಯಲ್ಲಿ ಭೀಕರ ದುರಂತ; ಗ್ಯಾಸ್‌ ಸಿಲಿಂಡರ್‌ ಲೀಕ್‌ ಆಗಿ 7 ಕಾರ್ಮಿಕರ ದಾರುಣ ಸಾವು

Gas tragedy

#image_title

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಕಳೆದ ಭಾನುವಾರ ಸಂಭವಿಸಿದ ಗ್ಯಾಸ್‌ ಸಿಲಿಂಡರ್‌ ಸೋರಿಕೆ (Fire tragedy) ಪ್ರಕರಣವೊಂದು ಏಳು ಮಂದಿಯ ಪ್ರಾಣವನ್ನೇ ಕಸಿದಿದೆ. ಸಾವನ್ನಪ್ಪಿದವರೆಲ್ಲರೂ ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರಾಗಿರುವುದರಿಂದ ಆರು ದಿನಗಳ ಕಳೆದರೂ ಇದರ ಸ್ಪಷ್ಟ ಮಾಹಿತಿ ಹೊರಬಿದ್ದಿರಲಿಲ್ಲ.

ಹೊಸಕೋಟೆ ತಾಲೂಕಿನ ಮೇಡಹಳ್ಳಿಯಲ್ಲಿ ಕಳೆದ ಭಾನುವಾರ ಶೆಡ್‌ ಒಂದರಲ್ಲಿ ರಾತ್ರಿ ಅನಿಲ ಸೋರಿಕೆ ಆಗಿದ್ದು, ರಾತ್ರಿ ಯಾರೋ ಕರೆಂಟ್‌ ಹಾಕಿದಾಗ ಬೆಂಕಿ ಹತ್ತಿಕೊಂಡು ಎಂಟು ಮಂದಿಗೆ ಬೆಂಕಿಯ ಗಾಯಗಳಾಗಿದ್ದವು. ಆರಂಭಿಕ ಹಂತದಲ್ಲಿ ಇದೇನೂ ತುಂಬ ದೊಡ್ಡ ಅವಘಡದಂತೆ ಕಾಣಿಸಿರಲಿಲ್ಲ. ಆದರೆ, ದಿನ ಕಳೆದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ಒಬ್ಬೊಬ್ಬರಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದ ಈಗ ಎಂಟು ಮಂದಿಯಲ್ಲಿ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಉತ್ತರ ಪ್ರದೇಶ ಮತ್ತು ಬಿಹಾರ ಮೂಲದ ಕಾರ್ಮಿಕರನ್ನು ಕರೆದುಕೊಂಡು ಬಂದು ಇಲ್ಲಿ ಕಾಮಗಾರಿಗಳಲ್ಲಿ ದುಡಿಸಿಕೊಳ್ಳಲಾಗುತ್ತಿತ್ತು. ಅವರಿಗೆ ಒಂದು ಶೆಡ್‌ನಲ್ಲಿ ವಾಸವಾಗಿರಲು ವ್ಯವಸ್ಥೆ ಮಾಡಲಾಗಿತ್ತು. ಕಳೆದ ಭಾನುವಾರ ರಾತ್ರಿಯೂ ಈ ಕಾರ್ಮಿಕರು ಮೇಡಹಳ್ಳಿಯ ಅಂತಹುದೇ ಒಂದು ಶೆಡ್‌ನಲ್ಲಿ ಮಲಗಿದ್ದರು. ಹೊರಗಡೆ ಊಟ ಮಾಡಿಕೊಂಡು ಬಂದು ಅವರು ಇಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆಗ ಯಾವುದೋ ಕಾರಣದಿಂದ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿತ್ತು.

ನಡುವೆ ರಾತ್ರಿ ಯಾರೋ ಲೈಟ್‌ ಆನ್‌ ಮಾಡಿದಾಗ ಸೋರಿಕೆಯಾದ ಅನಿಲದಿಂದಾಗಿ ಬೆಂಕಿ ಹತ್ತಿಕೊಂಡಿತ್ತು. ಇದರಿಂದ ಮಲಗಿದ್ದವರಿಗೆಲ್ಲ ಸುಟ್ಟ ಗಾಯಗಳಾಗಿತ್ತು. ಅವರನ್ನು ಕೂಡಲೇ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಲ್ಲಿ ಆರೋಗ್ಯವಾಗಿದ್ದಾರೆ ಎಂಬಂತೆ ಕಂಡುಬಂದ ಇವರ ದೇಹದ ಒಳಗೆ ಬೆಂದ ಗಾಯಗಳು ಘಾಸಿಗೊಳಿಸಿತ್ತು. ಹೀಗಾಗಿ ದಿನ ಕಳೆದಂತೆ ಒಬ್ಬೊಬ್ಬರೇ ಪ್ರಾಣ ಕಳೆದುಕೊಳ್ಳಲಾರಂಭಿಸಿದ್ದಾರೆ. ಶುಕ್ರವಾರ ಏಳನೇ ಸಾವು ಸಂಭವಿಸಿದೆ.

ಅಮಿತ್, ಸನೋಜ್, ನೀರಜ್, ಸೋಮಯ್ ಗುಪ್ತಾ, ತಿಲಕ್ ರಾಮ್, ಲಕ್ಷ್ಮಣ್ ಮತ್ತು ಚಂದ್ರಭಾನ್ ಮೃತ ಕಾರ್ಮಿಕರು. ಈ ಘಟನೆಗೆ ಸಂಬಂಧಿಸಿ ಅರವಿಂದ ಗುಪ್ತಾ, ಮತ್ತು ಬಾಸ್ಕರ್ ಎಂಬುವವರ ವಿರುದ್ದ ಪ್ರಕರಣ ದಾಖಲಾಗಿದೆ. ಉತ್ತರ ಪ್ರದೇಶದಿಂದ, ಬಿಹಾರದಿಂದ ಕಾರ್ಮಿಕರನ್ನು ಕರೆತರುವ ಲೇಬರ್‌ ಕಂಟ್ರಾಕ್ಟರ್‌ಗಳು ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಕೆಲಸಕ್ಕಾಗಿ ಕರೆತಂದು ಸೂಕ್ತ ಮೂಲ ಸೌಕರ್ಯ ನೀಡದ ಕಾರಣ ಅವಘಡ‌‌ ಸಂಭವಿಸಿದೆ. ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road Accident: ನೆಲಮಂಗಲದ ಬಳಿ ಲಾರಿ ಹರಿದು ಯುವತಿ ಸ್ಥಳದಲ್ಲೇ ಸಾವು

Exit mobile version