Site icon Vistara News

D ಕೋಡ್‌ ಅಂಕಣ: ರಾಜಕೀಯ ಹವಾಮಾನ ವರದಿ: ಕಾಂಗ್ರೆಸ್ ಕಡೆಗೆ ಬೀಸುವಂತಿದೆ ತಂಗಾಳಿ; ಪಕ್ಷಾಂತರಿಗಳಿಗೆ ತಿಳಿದಿದೆಯೇ ಒಳಸುಳಿ?

d k shivakumar nomination approved by election commission

#image_title

“ಎನ್‌ಡಿಎ 40 ಸ್ಥಾನವನ್ನೂ ಗೆಲ್ಲುತ್ತೆ ಅಂತ ಮೊದಲಿಂದಲೂ ಹೇಳುತ್ತಲೇ ಇದ್ದೆ. ಆದರೆ ನನ್ನ ಮಾತನ್ನು ನೀವು ಕೇಳಲೇ ಇಲ್ಲ.”
2019ರಲ್ಲಿ ಅಂದಿನ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ ಮಾತಿದು. ಬಿಹಾರದ 40ರಲ್ಲಿ ಅಷ್ಟೂ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲುತ್ತದೆ ಎಂದು ಪಾಸ್ವಾನ್ ಆಗಾಗ ಹೇಳುತ್ತಲೇ ಇದ್ದರು. ಆದರೆ ವಿವಿಧ ಸಮೀಕ್ಷೆಗಳು ಅಷ್ಟು ಲೀಡ್ ಕೊಡಲು ಸಿದ್ಧವಿರಲಿಲ್ಲ. ಪಾಸ್ವಾನ್ ಬಹುಶಃ ಓವರ್ ಆ್ಯಕ್ಟಿಂಗ್ ಮಾಡುತ್ತಾ ಇರಬೇಕು ಎಂದೇ ಭಾವಿಸಿದ್ದವು. ಆದರೆ ಫಲಿತಾಂಶ ಬಂದಾಗ, 40ರಲ್ಲಿ 39ನ್ನು ಎನ್‌ಡಿಎ ಗೆದ್ದಿತ್ತು!

ಡೆಪ್ಯುಟಿ ಸೂಪರಿಂಟೆಂಡೆಂಟ್ ಹುದ್ದೆಗೆ ಪ್ರಮೋಷನ್ ಕೊಡಲಿಲ್ಲ ಎಂದು ರಾಜೀನಾಮೆ ನೀಡಿ ರಾಜಕೀಯ ಕಣಕ್ಕಿಳಿದ ರಾಮ್ ವಿಲಾಸ್ ಪಾಸ್ವಾನ್‌ರನ್ನು ಭಾರತೀಯ ರಾಜಕಾರಣದ ಹವಾಮಾನ ತಜ್ಞ ಎಂದು ಕರೆಯಲಾಗುತ್ತದೆ! ಏಕೆಂದರೆ ಅವರಷ್ಟು ನಿಖರವಾದ ಮುನ್ಸೂಚನೆಯನ್ನು ಬಹುಶಃ ಹವಾಮಾನ ಇಲಾಖೆಯೂ ನೀಡುವುದಿಲ್ಲವೇನೊ!

ಬಿಹಾರದ ಮತಪ್ರಮಾಣದಲ್ಲಿ ಪಾಸ್ವಾನ್‌ರ ಲೋಕ ಜನಶಕ್ತಿ ಪಾರ್ಟಿ(ಎಲ್‌ಜೆಪಿ) ಹೊಂದಿದ್ದು ಕೇವಲ ಶೇ.6-8 ಮತ. ಆದರೆ ಅಚ್ಚರಿಯ ವಿಚಾರ ಏನು ಅಂದರೆ 1989ರಿಂದ 2020ರ ಅಕ್ಟೋಬರ್ 8ರಂದು ನಿಧನರಾಗುವವರೆಗೆ ಪಾಸ್ವಾನ್ ಎಂಟು ಕೇಂದ್ರ ಸರ್ಕಾರಗಳಲ್ಲಿ ಸಚಿವರಾಗಿದ್ದರು. ಆರು ಪ್ರಧಾನಮಂತ್ರಿಗಳ ಕೆಳಗೆ ಕೆಲಸ ಮಾಡಿದ್ದರು. 1989-90ರಲ್ಲಿ ವಿ.ಪಿ. ಸಿಂಗ್ ಸರ್ಕಾರ, 1996-98ರರಲ್ಲಿ ಎಚ್.ಡಿ. ದೇವೇಗೌಡ ಹಾಗೂ ಐ.ಕೆ. ಗುಜ್ರಾಲ್ ಸರ್ಕಾರ, 1999-2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ, 2004-2009ರವರೆಗೆ ಮನಮೋಹನ್ ಸಿಂಗ್ ಸರ್ಕಾರ (ಯುಪಿಎ-1), 2014-2020ರವರೆಗೆ ನರೇಂದ್ರ ಮೋದಿ ಸರ್ಕಾರದಲ್ಲಿ ಪಾಸ್ವಾನ್ ಸಚಿವರಾಗಿದ್ದರು.
ಮುಂದಿನ ಚುನಾವಣೆಯಲ್ಲಿ ಗಾಳಿ ಯಾವ ಕಡೆಗೆ ಬೀಸುತ್ತಿದೆ, ಯಾರು ಗೆಲ್ಲಬಹುದು, ಯಾರು ಸೋಲಬಹುದು ಎನ್ನುವುದನ್ನು ಪಾಸ್ವಾನ್ ಗ್ರಹಿಸುತ್ತಿದ್ದರು. ಅದಕ್ಕೆ ತಕ್ಕಂತೆ ಚುನಾವಣೆಗೆ ಮುನ್ನ ಅವರೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರದಲ್ಲಿ ಸೇರಿಕೊಂಡುಬಿಡುತ್ತಿದ್ದರು. ಇದಕ್ಕಾಗಿಯೇ ಅವರನ್ನು ಭಾರತೀಯ ಚುನಾವಣಾ ಹವಾಮಾನ ತಜ್ಞ ಎಂದು ಗುರುತಿಸಲಾಗುತ್ತದೆ.

ಇದೀಗ ಕರ್ನಾಟಕದಲ್ಲಿ ಚುನಾವಣೆ ಹೊಸ್ತಿಲಲ್ಲಿದ್ದೇವೆ. ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವ ಕಾರ್ಯ ಜೋರಾಗಿಯೇ ನಡೆದಿದೆ. ಕಾಂಗ್ರೆಸ್ ಕಡೆಗೆ ಹೆಚ್ಚು ಜನರು ಹಾರುತ್ತಿದ್ದಾರೆ. ಇದನ್ನೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹವಾಮಾನ ಮುನ್ಸೂಚನೆ ಎಂಬಂತೆ ಹೇಳುತ್ತಿದ್ದಾರೆ. “ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಸ್ವಯಂಪ್ರೇರಿತರಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಈ ಸಂದರ್ಭದಲ್ಲಿ ದಲಿತ ಕವಿ ಸಿದ್ದಲಿಂಗಯ್ಯ ಅವರ ಮಾತು ನೆನಪಾಗುತ್ತಿದೆ. ಹೋರಾಟದ ಸಾಗಾರಕ್ಕೆ ಸಾವಿರಾರು ನದಿಗಳು ಸೇರಿದಂತೆ ಎಂದು ಅವರು ಹೇಳಿದ್ದಾರೆ. ಅದೇ ರೀತಿ ಕಾಂಗ್ರೆಸ್ ಎಂದರೆ ಹೋರಾಟದ ಸಾಗರ, ಈ ಪಕ್ಷಕ್ಕೆ ಸೇರುತ್ತಿರುವ ಶಾಸಕರು, ನಾಯಕರು ನದಿಯಾಗಿದ್ದಾರೆ” ಎಂದು ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಬಣ್ಣಿಸಿಬಿಟ್ಟರು.

ರಾಜಕಾರಣಿಗಳು ಅನೇಕ ಕಾರಣಕ್ಕೆ ಪಕ್ಷಗಳನ್ನು ಬದಲಿಸುತ್ತಾರೆ. ಸೈದ್ಧಾಂತಿಕ ಭಿನ್ನಮತ, ಅವಮಾನ, ನಾಯಕತ್ವದ ತೊಂದರೆಗಳೂ ಅವುಗಳಲ್ಲಿರುತ್ತವೆ. ಇತ್ತೀಚೆಗಂತೂ ಇವೆಲ್ಲಕ್ಕಿಂತ ಮುಖ್ಯವಾಗಿ ತಮಗೆ ಅಧಿಕಾರ ಸಿಗುತ್ತದೆಯೇ ಎಂದು ಖಾತ್ರಿಪಡಿಸಿಕೊಂಡು ಪಕ್ಷ ಬದಲಾವಣೆ ಮಾಡುತ್ತಾರೆ. ಇದರ ತಾತ್ವಿಕ, ಸೈದ್ಧಾಂತಿಕ, ನೈತಿಕ ಇತ್ಯಾದಿ ವಿಶ್ಲೇಷಣೆ ಬೇರೆ ವಿಚಾರ. ಇಲ್ಲಿ ಚರ್ಚಿಸಲು ಹೊರಟಿರುವುದು ಕೇವಲ ಪಕ್ಷಾಂತರದ ಹಿಂದಿನ ಲೆಕ್ಕಾಚಾರದ ಬಗ್ಗೆ. ಹೆಚ್ಚಿನ ರಾಜಕಾರಣಿಗಳು ಒಂದಲ್ಲಾ ಒಂದು ಪಕ್ಷವನ್ನೇ ಸೇರಲು ಏಕೆ ಬಯಸುತ್ತಾರೆ? ಸ್ವತಂತ್ರ ಅಭ್ಯರ್ಥಿ ಆದರೆ ನೆಮ್ಮದಿಯಾಗಿ ಗೆದ್ದು, ಯಾರ ಹಂಗೂ ಇಲ್ಲದೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಯೋ ಆ ಪಕ್ಷವನ್ನು ಬೆಂಬಲಿಸಿಕೊಂಡು ಸಚಿವ ಆಗಬಹುದಲ್ಲವೇ ಎನ್ನಿಸಬಹುದು. ಅದು ಅಷ್ಟು ಸುಲಭದ ಲೆಕ್ಕವಲ್ಲ. ಉದಾಹರಣೆಗೆ ಕರ್ನಾಟಕವನ್ನೇ ನೋಡೋಣ. ಕರ್ನಾಟಕದ ಮಟ್ಟಿಗೆ ಪಕ್ಷೇತರ ಶಾಸಕರಾಗುವುದು ಅತ್ಯಂತ ಸವಾಲಿನ ಕೆಲಸ. ಈ ಮಾತಿಗೆ ಪೂರಕವಾಗಿ ಕೆಳಗಿನ ಟೇಬಲ್ ನೋಡಬಹುದು.

#image_title

1957ರಲ್ಲಿ 35 ಪಕ್ಷೇತರರನ್ನು ಹೊಂದಿದ್ದ ಕರ್ನಾಟಕದಲ್ಲಿ ಈ ಸಂಖ್ಯೆ ನಿರಂತರ ಇಳಿಯುತ್ತಲೇ ಸಾಗಿ 2018ರಲ್ಲಿ ಕೇವಲ 1ಕ್ಕೆ ಬಂದು ನಿಂತಿದೆ. ಪಕ್ಷೇತರರಿಗೆ ಲಭಿಸುವ ಮತ ಪ್ರಮಾಣವೂ ಅಷ್ಟೆ. ಶೇ.28.74ರಿಂದ ಶೇ.3.93ಕ್ಕೆ ಇಳಿದಿದೆ.
ಪಕ್ಷೇತರರಾಗಿ ಗೆದ್ದು ಬರುವುದು ಈಗ ಕಷ್ಟದ ಕೆಲಸ. ಹಣ, ಪ್ರಚಾರ, ಕಾರ್ಯಕರ್ತರ ಪಡೆ, ಅಧಿಕಾರದಂತಹ ಅನೇಕ ಅನುಕೂಲಗಳು ಪಕ್ಷೇತರರಿಗೆ ಇರುವುದಿಲ್ಲ. ಚುನಾವಣೆಯು ಬರಬರುತ್ತಾ ಸಾಂಸ್ಥೀಕರಣ ಆಗುತ್ತಿರುವುದರ ಸೂಚನೆ ಇದು. ʼಸ್ವತಂತ್ರ ಅಭ್ಯರ್ಥಿಗಳು ಕಣ್ಮರೆ ಆಗುತ್ತಿರುವುದು ಪ್ರಜಾಪ್ರಭುತ್ವಕ್ಕೆ ಪೂರಕವೋ? ಮಾರಕವೋ?ʼ ಎನ್ನುವುದು ಒಂದು ರಾಷ್ಟ್ರೀಯ ವಿಚಾರ ಸಂಕಿರಣ ನಡೆಸುವಂತಹ ವಿಷಯ. ಾದರ ಚರ್ಚೆಯೂ ಇಲ್ಲಿ ಬೇಡ, ಮುಂದಕ್ಕೆ ಹೋಗೋಣ.

ಒಂದು ಅಂದಾಜಿನ ಪ್ರಕಾರ 1967ರಿಂದ 1971ರವರೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಆಯ್ಕೆ ಆದ ಸುಮಾರು 4 ಸಾವಿರ ಶಾಸಕರ ಪೈಕಿ ಅರ್ಧದಷ್ಟು ಶಾಸಕರು ಪಕ್ಷಾಂತರ ಮಾಡಿದ್ದಾರೆ. ಎಡಿಆರ್ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ 2016ರಿಂದ 2020ರ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಗೆದ್ದ 405 ಶಾಸಕರು ಪಕ್ಷಾಂತರ ಮಾಡಿದ್ದಾರೆ. ಇವರಲ್ಲಿ ಶೇ.45 ಶಾಸಕರು ಬಿಜೆಪಿ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ.

405ರಲ್ಲಿ ಶೇ.42 ಶಾಸಕರು ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಬಿಜೆಪಿಯನ್ನು ತೊರೆದು ಶೇ.4.4(18) ಶಾಸಕರು ಅನ್ಯಪಕ್ಷ ಸೇರಿದ್ದಾರೆ. ಅಂದರೆ ಈ ಅವಧಿಯಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ (ಬಿಜೆಪಿ) ಕಡೆಗೇ ಚುನಾವಣಾ ಗಾಳಿ ಬೀಸುತ್ತಿದೆ ಎನ್ನುವುದನ್ನು ಇವರೆಲ್ಲ ಗ್ರಹಿಸಿದ್ದಾರೆ ಎನ್ನಬಹುದು. ಇವರನ್ನು ಹೆದರಿಸಿ, ಬೆದರಿಸಿ, ಐಟಿ, ಇಡಿ ದಾಳಿ ಭೂತ ತೋರಿಸಿ ಕರೆದುಕೊಂಡಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತವೆ, ಅದು ಮತ್ತೊಂದು ರಾಷ್ಟ್ರೀಯ ವಿಚಾರ ಸಂಕಿರಣದ ವಿಚಾರ.

ಸ್ವತಂತ್ರ ಅಭ್ಯರ್ಥಿಗಿಂತಲೂ ನೋಂದಾಯಿತ ಪಕ್ಷಗಳಿಂದ ಸ್ಪರ್ಧೆ ಮಾಡಿದರೆ ಮಾತ್ರವೇ ಗೆಲ್ಲುವ ಸಾಧ್ಯತೆ ಇರುತ್ತದೆ ಎಂದು ಅನೇಕರು ಸ್ಪರ್ಧೆ ಮಾಡುತ್ತಿದ್ದಾರೆ. ಪಕ್ಷಾಂತರ ನಿಷೇಧ ಕಾನೂನು ಜಾರಿಗೆ ಬಂದ ನಂತರ ಭಾರತದಲ್ಲಿ ರಾಜಕೀಯ ಪಕ್ಷಗಳು ಅಣಬೆಗಳಂತೆ ಹೆಚ್ಚಾಗುತ್ತಿವೆ.

1952ರಲ್ಲಿ ಕೇವಲ 14 ನೋಂದಾಯಿತ ರಾಜಕೀಯ ಪಕ್ಷಗಳಿದ್ದವು. 1960ರ ವೇಳೆಗೆ ಈ ಸಂಖ್ಯೆ 40ಕ್ಕೆ ಏರಿತು. 1970ರ ಸುಮಾರಿಗೆ ಈ ಸಂಖ್ಯೆ 150ಕ್ಕೆ ಏರಿತು. ಇದೇ ವೇಳೆ 1985ರಲ್ಲಿ ಪಕ್ಷಾಂತರ ನಿಷೇದ ಕಾನೂನು ಜಾರಿಯಾಯಿತು. ಒಂದು ಪಕ್ಷದ ಮೂರನೇ ಎರಡರಷ್ಟು ಶಾಸಕರು ಪಕ್ಷಾಂತರ ಮಾಡಿದರೆ ಮಾತ್ರವೇ ಊರ್ಜಿತ ಎಂಬ ಕಾನೂನು ಜಾರಿಯಾಗಿದ್ದೇ ತಡ, ಭಾರತದಲ್ಲಿ ಪಕ್ಷಗಳ ನೋಂದಣಿ ವೇಗ ಪಡೆಯಿತು. ಇದಕ್ಕೆ ಪ್ರಾದೇಶಿಕ ಕಾರಣಗಳೂ ಜತೆಯಾದವು. ತಮ್ಮದೇ ಪಕ್ಷ ಮಾಡಿಕೊಂಡು ಒಂದಷ್ಟು ಶಾಸಕರನ್ನು ಗೆಲ್ಲಿಸಿಕೊಂಡುಬಿಟ್ಟರೆ ಪಕ್ಷಾಂತರ ನಿಷೇಧ ಕಾನೂನಿನ ಭಯ ಇಲ್ಲದೆ, ಯಾವ ಪಕ್ಷಕ್ಕೆ ಸರಳ ಬಹುಮತದ ಅವಶ್ಯಕತೆ ಇರುತ್ತದೆಯೋ ಅತ್ತ ವಾಲಬಹುದು ಎಂಬ ಲೆಕ್ಕಾಚಾರ ಇದರ ಹಿಂದಿದೆ. 1980-1990ರ ಅವಧಿಯಲ್ಲಿ ದೇಶದಲ್ಲಿ 500 ರಾಜಕೀಯ ಪಕ್ಷಗಳಾದವು. 2000ನೇ ಇಸವಿ ವೇಳೆಗೆ ಇದು 1,200ಕ್ಕೆ ಏರಿತು. 2010ರ ವೇಳೆಗೆ 2,300ಕ್ಕೆ ಏರಿಕೆ ಆಗಿತ್ತು. 2021ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ 2,858 ನೋಂದಾಯಿತ ರಾಜಕೀಯ ಪಕ್ಷಗಳಿವೆ. ಇದರಲ್ಲಿ 8 ರಾಷ್ಟ್ರೀಯ, 54 ರಾಜ್ಯ ಪಕ್ಷಗಳಿವೆ.

ಇಷ್ಟಾದರೂ ಕರ್ನಾಟಕದಲ್ಲಿ 2019ರಲ್ಲಿ ನಡೆದಂತಹ ಪಕ್ಷಾಂತರಗಳು ನಡೆಯುತ್ತಲೇ ಇವೆ. ವಿಪಕ್ಷಗಳು ಇದನ್ನು ಆಪರೇಷನ್ ಕಮಲ ಎಂದು ಕರೆಯುತ್ತವೆ. ಆದರೆ ಚುನಾವಣೆಗೂ ಮೊದಲೇ ನಡೆಯುವ ಪಕ್ಷಾಂತರವನ್ನು ಆಪರೇಷನ್ ಎನ್ನಲಾಗದು. ಈ ಬಾರಿ ಚುನಾವಣೆಗೂ ಮುನ್ನ ವಿವಿಧ ಪಕ್ಷಗಳಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿಕೊಂಡಿರುವವರ ಪ್ರಮುಖರ ಪಟ್ಟಿ ಈ ರೀತಿ ಇದೆ.

ಮೇಲಿನ ಪಟ್ಟಿ ನೋಡಿದರೆ, ನಾಲ್ವರು ಹಾಲಿ ಶಾಸಕರು ಹಾಗೂ ಮೂವರು ವಿಧಾನ ಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಸೇರಿದ್ದಾರೆ. ಬಿಜೆಪಿ ಸೇರಿರುವವರಲ್ಲಿ ಒಬ್ಬರು ಹಾಲಿ ಶಾಸಕರು, ಇನ್ನಿಬ್ಬರು ಮಾಜಿ ಶಾಸಕರು. ಜೆಡಿಎಸ್ ಸೇರಿರುವವರೂ ಮಾಜಿ ಶಾಸಕರು. ಹೀಗೆ ಮೇಲ್ನೋಟಕ್ಕೆ ರಾಜ್ಯ ರಾಜಕೀಯ ಹವಾ ಕಾಂಗ್ರೆಸ್ ಕಡೆ ವಾಲುತ್ತಿದೆ ಎಂದು ತೋರುತ್ತದೆ.

ಇದೀಗ ಕಾಂಗ್ರೆಸ್ ಸೇರಿರುವ ನಾಲ್ವರು ಶಾಸಕರು, ಮುಂದಿನ ಸರ್ಕಾರ ರಚನೆ ಸಲುವಾಗಿ ಕಾಂಗ್ರೆಸ್‌ಗೆ ಹೋಗಿದ್ದಾರೆಯೇ? ಬಾಬುರಾವ್ ಚಿಂಚನಸೂರು ಕಾಂಗ್ರೆಸ್ ಸೇರಿದ್ದು ಬಿಜೆಪಿಯಲ್ಲಿ ಟಿಕೆಟ್ ಲಭಿಸಲಿಲ್ಲ ಎಂಬ ಕಾರಣಕ್ಕೆ. ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ತೆರಳಿದ್ದು ಎಚ್.ಡಿ. ಕುಮಾರಸ್ವಾಮಿಯವರೊಂದಿಗಿನ ಮುನಿಸಿನ ಕಾರಣಕ್ಕೆ. ಕೋಲಾರ ಶ್ರೀನಿವಾಸ ಗೌಡ ಕಾಂಗ್ರೆಸ್ ಕೈ ಹಿಡಿದಿದ್ದು ಸಿದ್ದರಾಮಯ್ಯ ಅವರ ಆತ್ಮೀಯತೆ ಕಾರಣಕ್ಕೆ. ಅರಸೀಕೆರೆ ಶಾಸಕ ಶಿವಲಿಂಗೇಗೌಡ ಕಾಂಗ್ರೆಸ್ ಸೇರುತ್ತಿರುವುದೂ ಜೆಡಿಎಸ್ ನಾಯಕರ ಜತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ. ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್ ಸೇರಿದ್ದು ರಾಜಾಜಿನಗರ ಶಾಸಕರಾಗಬೇಕು ಎಂಬ ಕಾರಣಕ್ಕೆ. ಆಯನೂರು ಮಂಜುನಾಥ ಕಾಂಗ್ರೆಸ್ ಸೇರಲಿದ್ದಾರೆ ಎನ್ನಲಾಗಿದ್ದು, ಅದಕ್ಕೆ ಕಾರಣ ಶಿವಮೊಗ್ಗದಲ್ಲಿ ಕೆ.ಎಸ್‌. ಈಶ್ವರಪ್‌ ಅವರಿಗೆ ಬದಲಾಗಿ ಟಿಕೆಟ್ ಸಿಗುವುದಿಲ್ಲ ಎನ್ನುವ ಕಾರಣಕ್ಕೆ. ಬಿಜೆಪಿಯಿಂದ ಟಿಕೆಟ್ ನೀಡಿದ್ದರೆ ಆಯನೂರು ಬಹುಶಃ ಅಲ್ಲೇ ಇರುತ್ತಾರೆ.

ಕಾಂಗ್ರೆಸ್‌ಗೆ ಆಗಮಿಸಿದರೆ ತಮಗೊಂದು ಟಿಕೆಟ್‌ ಸಿಗಬಹುದು, ಶಾಸಕರಾಗಬಹುದು ಎನ್ನುವಂಥವರು ಹೆಚ್ಚಿದ್ದಾರೆಯೇ ವಿನಃ ತಾವು ಇದ್ದ ಪಕ್ಷದಲ್ಲೇ ಅತ್ಯಂತ ಸಬಲರಾಗಿರುವವರು, ಮುಂದೆ ಸೇರಲಿರುವ ಪಕ್ಷ ಅಧಿಕಾರಕ್ಕೆ ಬಂದರೆ ಖಡಾಖಂಡಿತವಾಗಿ ಸಚಿವರಾಗಿಯೇ ತೀರುತ್ತಾರೆ ಎನ್ನುವವರು ಇನ್ನೂ ಕಾಂಗ್ರೆಸ್ ಸೇರಿಲ್ಲ. ಉದಾಹರಣೆಗೆ, ಈಗ ಬಿಜೆಪಿಯಲ್ಲಿರುವ ಸಚಿವರುಗಳಾದ ಎಸ್.ಟಿ. ಸೋಮಶೇಖರ್, ಕೆ. ಗೋಪಾಲಯ್ಯ, ನಾರಾಯಣ ಗೌಡ ಆಗಮಿಸುತ್ತಾರೆ ಎಂದು ಕಾಂಗ್ರೆಸ್ ಕಾಯುತ್ತಾ ಇತ್ತು. ಇದೇ ಕಾರಣಕ್ಕೆ ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಕೆ.ಆರ್. ಪೇಟೆ ಕ್ಷೇತ್ರಗಳಿಗೆ 124 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹೆಸರು ಘೋಷಣೆ ಮಾಡಿರಲಿಲ್ಲ. ಆದರೆ ಅವರ್ಯಾರೂ ಬಿಜೆಪಿ ಬಿಟ್ಟು ಕದಲುವುದಿಲ್ಲ ಎಂದು ಗೊತ್ತಾದಾಗ 42 ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಘೋಷಣೆ ಮಾಡಿದೆ. ಈ ಮೂವರು ಕಾಂಗ್ರೆಸ್ ಸೇರಿದ್ದರೆ ನಿಶ್ಚಿತವಾಗಿ ಕಾಂಗ್ರೆಸ್ ಕಡೆಗೆ ಅತ್ಯಂತ ಸ್ಪಷ್ಟವಾದ ಗಾಳಿ ಬೀಸುತ್ತಿದೆ ಎಂದು ಹೇಳಬಹುದಾಗಿತ್ತು.

ಬಿಜೆಪಿ ಇನ್ನೂ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಲಿಲ್ಲ. ಪಟ್ಟಿ ಘೋಷಣೆ ನಂತರ ನಡೆಯುವ ಹಾರಾಟಗಳನ್ನು ತಡೆಯಲು ಘೋಷಣೆಯನ್ನು ತಡ ಮಾಡುತ್ತಿದೆ ಎನ್ನುತ್ತವೆ ರಾಜಕೀಯ ಮೂಲಗಳು. ಆಗ ಟಿಕೆಟ್ ಸಿಗದವರು ಕಾಂಗ್ರೆಸ್ ಕಡೆಗೆ ಹಾರಬಹುದು. ಕಾಂಗ್ರೆಸ್ ಪಕ್ಷವು ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಡುತ್ತಿದೆ. ಕಾಂಗ್ರೆಸ್‌ಗೆ ತೆರಳಿದರೆ ಗೆಲ್ಲಬಹುದು ಎಂಬ ವಿಶ್ವಾಸ ಈ ಪಕ್ಷಾಂತರಿಗಳಿಗೆ ಇದೆ. ಇದನ್ನು ಮಾನದಂಡ ಎಂದು ಪರಿಗಣಿಸಿದರೆ ಒಂದಷ್ಟು ಪ್ರಮಾಣದಲ್ಲಿ ಕಾಂಗ್ರೆಸ್‌ ಕಡೆಗೆ ತಂಗಾಳಿ ಬೀಸುತ್ತಿದೆ ಎನ್ನುವುದು ನಿಶ್ಚಿತ. ಆದರೆ ಕಾಂಗ್ರೆಸ್‌ ನಾಯಕರು ಹೇಳಿಕೊಳ್ಳುತ್ತಿರುವಂತೆ ಭಾರೀ ಅಲೆಯಂತೂ ಇಲ್ಲ.

ಇನ್ನು, ಪ್ರಬಲ ನಾಯಕರುಗಳು ಬಿಜೆಪಿಯಿಂದ ಕಾಂಗ್ರೆಸ್‌ಗಾಗಲಿ, ಕಾಂಗ್ರೆಸ್‌ನಿಂದ ಬಿಜೆಪಿಗಾಗಲಿ ತೆರಳದೇ ಇರುವುದನ್ನು ನೋಡಿದರೆ, ಈ ಬಾರಿಯ ಫಲಿತಾಂಶಗಳ ಕುರಿತು ಅವರಲ್ಲೂ ಗೊಂದಲ ಇದೆ ಎಂದು ತೋರುತ್ತದೆ. ಇಲ್ಲಿಯವರೆಗಿನ ಬಹುತೇಕ ಸಮೀಕ್ಷೆಗಳು ತಿಳಿಸಿರುವಂತೆ ಇದು ಅತಂತ್ರ ವಿಧಾನಸಭೆಯ ಮುನ್ಸೂಚನೆ ಎನ್ನುವಂತೆಯೇ ಇದೆ. ಹಾಗೇನಾದರೂ ಅತಂತ್ರ ಫಲಿತಾಂಶವೇ ನಿಜವಾದರೆ, ಅವರನ್ನು ಬಿಟ್ಟು ಇವರನ್ನು ಬಿಟ್ಟು ಮೂರನೇ ಪಕ್ಷವೇ ಖುಷಿ ಪಡುವ ಸರದಿ.

ಇದನ್ನೂ ಓದಿ: D ಕೋಡ್‌ ಅಂಕಣ: ಮೋದಿ ನೇತೃತ್ವದಲ್ಲಿ 50 ವಿಧಾನಸಭೆ ಚುನಾವಣೆ: ಎಷ್ಟು ಸೋಲು? ಎಷ್ಟು ಗೆಲುವು? ಕರ್ನಾಟಕಕ್ಕೆ ಪಾಠವೇನು?“>ಕೋಡ್‌ ಅಂಕಣ: ಮೋದಿ ನೇತೃತ್ವದಲ್ಲಿ 50 ವಿಧಾನಸಭೆ ಚುನಾವಣೆ: ಎಷ್ಟು ಸೋಲು? ಎಷ್ಟು ಗೆಲುವು? ಕರ್ನಾಟಕಕ್ಕೆ ಪಾಠವೇನು?

Exit mobile version