ಕಲಬುರಗಿ: ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಜೋರಾಗುತ್ತಲೇ, ಪರಸ್ಪರ ಆರೋಪ, ಪ್ರತ್ಯಾರೋಪ, ಟೀಕೆಗಳು ಕೂಡ ಜಾಸ್ತಿಯಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ, “ಕೋಲಾರದಿಂದ ಸಿದ್ದರಾಮಯ್ಯ ಅವರನ್ನು ಕಳುಹಿಸಲು ಡಿ.ಕೆ.ಶಿವಕುಮಾರ್ ಅವರು ಬೋಗಸ್ ಸಮೀಕ್ಷೆ ಮಾಡಿಸಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಲಬುರಗಿ ಗ್ರಾಮೀಣ ಕ್ಷೇತ್ರದ ಮಹಾಗಾಂವ್‌ನಲ್ಲಿ ನಡೆದ ಬಿಜೆಪಿ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಮಧ್ಯೆ ಸಂಘರ್ಷ ನಡೆಯುತ್ತಿದೆ. ಎದುರಿಗಷ್ಟೇ ಅವರು ಹೆಗಲ ಮೈ ಕೈ ಹಾಕಿಕೊಂಡು ಫೋಟೊ ಶೂಟ್ ಮಾಡುತ್ತಾರೆ. ಆದರೆ, ಆಂತರಿಕವಾಗಿ ಇಬ್ಬರ ಮಧ್ಯೆ ಫೈಟ್ ನಡೆಯುತ್ತಿದೆ” ಎಂದು ದೂರಿದರು.
ಬೆಳಮಗಿ ವಿರುದ್ಧ ವಾಗ್ದಾಳಿ
ಕಲಬುರಗಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೇವುನಾಯಕ್ ಬೆಳಮಗಿ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದರು. “ಯಡಿಯೂರಪ್ಪನವರ ಹೆಸರು ಹೇಳಿ ಯಾವ ಪುಣ್ಯಾತ್ಮ ಗೆದ್ದು ಸಚಿವರಾದರೋ, ಅದೇ ವ್ಯಕ್ತಿ ಯಡಿಯೂರಪ್ಪ ವಿರುದ್ಧ ಕೀಳಾಗಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಬಗ್ಗೆ ತುಚ್ಚವಾಗಿ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಮನೆಗೆ ಕಳುಹಿಸಿ. ಬಿಜೆಪಿಯ ಬಸವರಾಜ ಮತ್ತಿಮಡು ಅವರ ಗೆಲುವು, ಯಡಿಯೂರಪ್ಪನವರ ಗೆಲುವು. ಹಾಗಾಗಿ, ಮತ್ತಿಮಡು ಅವರನ್ನು ಗೆಲ್ಲಿಸಿ” ಎಂದು ಮನವಿ ಮಾಡಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ. ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲೂ ಅಭ್ಯರ್ಥಿ ಇಂತಹದ್ದೇ ಕನಸು ಕಾಣುತ್ತಿದ್ದಾರೆ. ಕ್ಷೇತ್ರದಲ್ಲಿಯೇ ಅವರ ಮಾತಿಗೆ ಬೆಲೆ ಇಲ್ಲ. ಯಡಿಯೂರಪ್ಪ ಆಶೀರ್ವಾದ ಇಲ್ಲದೆ ಇವರು ಮಂತ್ರಿಯಾದರಾ? ಶಾಸಕರಾದರಾ? ಇಂತಹ ಮನಸ್ಥಿತಿಯಿಂದಾಗಿಯೇ ಕಾಂಗ್ರೆಸ್ ಇಂದು ದೇಶದಲ್ಲಿ ಮೂಲೆ ಗುಂಪಾಗಿದೆ” ಎಂದು ಹೇಳಿದರು.
Also Read this: http://vistaranews.com/karnataka/karnataka-election-2023-517-candidates-withdraw-their-nominations-2613-candidates-in-final-fray/301021.html