ಮೈಸೂರು: ಆಗಾಗ ಒಕ್ಕಲಿಗ ಸಮುದಾಯದ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿಯಾಗುವ ಅಭಿಲಾಷೆಯನ್ನು ವ್ಯಕ್ತಪಡಿಸುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D K Shivakumar) ಅವರು, ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲೂ ಮುಂದಿನ ಮುಖ್ಯಮಂತ್ರಿಯಾಗಲು ತಮ್ಮ ಆಶೀರ್ವಾದ ಬೇಕು ಎಂದು ಜನರಿಗೆ ಪರೋಕ್ಷವಾಗಿ ಮನವಿ ಮಾಡಿಕೊಂಡರು.
ಜಿ.ಟಿ. ದೇವೇಗೌಡ ನೇತೃತ್ವದಲ್ಲಿ ಆಯೋಜಿಸಲಾದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಡಿಕೆಶಿ ತಮ್ಮ ಮನದಾಳದ ಮಾತನ್ನು ಜನರ ಮುಂದಿಟ್ಟರು. ಆದಿ ಚುಂಚನಗಿರಿ ಮಹಾ ಸಂಸ್ಥಾನ ಪೀಠಾಧಿಪತಿ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಹಾಗೂ ಜೆಡಿಎಸ್ ನಾಯಕ ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕೂಡ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಡಿ.ಕೆ.ಶಿವಕುಮಾರ್, ”ಪಕ್ಷಾತೀತವಾಗಿ ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೀರ. ನನಗೆ ಹುಣಸೂರಿನ ಮಹಾಜನತೆ ಬಗ್ಗೆ ವಿಶ್ವಾಸ ಇದೆ. ಪವಿತ್ರವಾದ ಸಮಾರಂಭದಲ್ಲಿ ನಿಮ್ಮನ್ನು ಭೇಟಿ ಮಾಡಿದ್ದು ದೊಡ್ಡ ಭಾಗ್ಯ. ನಿಮ್ಮ ಜತೆ ನಾನೀದ್ದೇನೆ ಎಂದು ಹೇಳುವುದು ಒಂದು ಭಾಗ್ಯ. ನಿಮ್ಮ ಆಶೀರ್ವಾದ ನನಗೆ ಅವಶ್ಯಕತೆ ಇದೆ. ನಾನು ಕಷ್ಟ ಕಾಲದಲ್ಲಿದ್ದಾಗ, ಜೈಲಿನಲ್ಲಿದ್ದಾಗ ಮೈಸೂರಿನ ಜನತೆ ನನ್ನ ಪರವಾಗಿ ನಿಂತದ್ದನ್ನು ಮರೆಯಲು ಸಾಧ್ಯವಿಲ್ಲ. ಅದೇ ರೀತಿ, ಕಾಂಗ್ರೆಸ್ ಪಕ್ಷ ನನಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ. ನನ್ನ ಅಭಿಲಾಷೆ ಈಡೇರಿಸಲು ನೀವು ನನ್ನ ಜತೆ ನಿಲ್ಲಬೇಕು. ನಿಮ್ಮ ಸೇವೆ ಮಾಡುತ್ತೇನೆ, ಎಲ್ಲಾ ಧರ್ಮ ಜಾತಿಯನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತೇನೆ. ನಿಮ್ಮ ಆಶೀರ್ವಾದ ನನಗೆ ಬೇಕಾಗಿದೆ,” ಎಂದು ಮಾತಿನುದ್ದಕ್ಕೂ ಒಕ್ಕಲಿಗರ ಆಶೀರ್ವಾದ ಬೇಡಿದರು
ಡಿಕೆಶಿ ಮತ್ತೇನು ಹೇಳಿದರು?
ನಾವು ನೀವೆಲ್ಲ 513 ವರ್ಷದ ಹಿಂದಿನ ನಾಡಪ್ರಭುವನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಹುಟ್ಟು ಸಾವಿನ ಮಧ್ಯೆ ನಾವೇನು ಮಾಡುತ್ತೇವೆ ಎಂಬುವುದು ಮುಖ್ಯ. ಕೆಂಪೇಗೌಡರ ಅಧಿಕಾರಾವಧಿಯಲ್ಲಿ ಎಲ್ಲ ವರ್ಗದ ಜನರಿಗೆ ಕೆಲಸ ಮಾಡಿದ್ದಾರೆ. ನಮ್ಮ ಕೆಲಸದ ಮೇಲೆ ನಮಗೆ ನಂಬಿಕೆ ಇರಬೇಕು. ನೀವು ಮೂರು K ಗಳನ್ನು ನೆನಪಿಸಿಕೊಳ್ಳಬೇಕು. ಬೆಂಗಳೂರು ಕಟ್ಟಿದ ಕೆಂಪೇಗೌಡ, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ, ಬೆಂಗಳೂರು ಬೆಳೆಸಿದ ಎಸ್.ಎಂ.ಕೃಷ್ಣ. ಒಕ್ಕಲಿಗರಿಗೆ ಭೂಮಿ ಕಾಪಾಡುವಂಥ ಭಾಗ್ಯ ನಮಗೆ ಸಿಕ್ಕಿದೆ. ಒಕ್ಕಲಿಗರ ಜಾತಿ ಇಡೀ ಸಮಾಜಕ್ಕೆ ಒಗ್ಗೂಡಿಸುವಂತ ಜಾತಿ. ಸಮಾಜದ ನಾಲ್ಕು ಕಂಬಗಳು ಒಂದಾಗಿರಬೇಕು. ಕೆಂಪೇಗೌಡ ಜಯಂತಿ ಒಕ್ಕಲಿಗರಿಗೆ ಮಾತ್ರ ಸೀಮಿತಬಾಗಬಾರದು. ಕೆಂಪೇಗೌಡ ಜಯಂತಿಯನ್ನು ಎಲ್ಲ ಜಾತಿ ಮತ್ತು ಧರ್ಮದವರು ಒಟ್ಟಾಗಿ ಆಚರಿಸುವಂತೆ ನೋಡಿಕೊಳ್ಳಬೇಕು. ಈ ವಿಚಾರ ನಿಮ್ಮ ಗಮನದಲ್ಲಿ ಇರಲಿ.
ಈ ಹಿಂದೆಯೂ ಮನವಿ
ಜುಲೈನಲ್ಲಿ ಬೆಂಗಳೂರಲ್ಲಿ ಚುಂಚಶ್ರೀ ಬಳಗದವರು ಏರ್ಪಡಿಸಿದ್ದ ಸತ್ಸಂಗ ಮತ್ತು ಅಭಿನಂದನಾ ಸಮಾರಂಭದಲ್ಲಿ ಡಿ ಕೆ ಶಿವಕುಮಾರ್ (D K Shivakumar) ಮಾತನಾಡಿ, ಮುಖ್ಯಮಂತ್ರಿಯಾಗುವ ಆಸೆಯನ್ನು ವ್ಯಕ್ತಪಡಿಸಿ, ತಮಗೂ ಒಂದು ಬಾರಿ ಅವಕಾಶವನ್ನು ಒಕ್ಕಲಿಗ ಸಮುದಾಯ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಅಂದು ಅವರು ಮಾತನಾಡತ್ತಾ, ಕಾಂಗ್ರೆಸ್‌ನಲ್ಲಿ ಒಕ್ಕಲಿಗೆ ಸಮುದಾಯದ ಎಸ್ ಎಂ ಕೃಷ್ಣ ಅವರು ಐದು ವರ್ಷ ಸಿಎ ಆಗಿದ್ದರು. ಈಗ ಮತ್ತೆ ಒಕ್ಕಲಿಗ ಸಮುದಾಯದವರೇ ಸಿಎಂ ಆಗುವ ಅವಕಾಶ ಒದಗಿದೆ. ಇದನ್ನು ಸಮುದಾಯದ ಜನರು ಹಾಳು ಮಾಡಿಕೊಳ್ಳದೇ ನನಗೆ ಬೆಂಬಲಿಸಬೇಕು ಎಂದು ಕೇಳಿಕೊಂಡಿದ್ದರು.
ಇದನ್ನೂ ಓದಿ | ಡಿ.ಕೆ. ಶಿವಕುಮಾರ್‌ರನ್ನು ಬಿಟ್ಟುಕೊಡದ ರಾಹುಲ್ ಗಾಂಧಿ: ಒಟ್ಟಾಗಿ ಹೋಗಿ ಎಂಬ ಸಂದೇಶ