ಬೆಂಗಳೂರು: ಬಿಜೆಪಿ ಸರ್ಕಾರ ಈ ರಾಜ್ಯವನ್ನು ಕೊಲ್ಲುತ್ತಿದೆ. ಬಿಜೆಪಿಯವರು ತಮ್ಮ ನಂಬಿಕೆ, ಸ್ವಂತ ವಿಚಾರದಲ್ಲಿ ಏನಾದರೂ ಮಾಡಿಕೊಳ್ಳಲಿ. ಅವರ ವೈಯಕ್ತಿಕ ನಂಬಿಕೆ, ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ. ಇದರಿಂದ ರಾಜ್ಯಕ್ಕೆ ಎಷ್ಟು ಹಾನಿಯಾಗುತ್ತದೆ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇದೇ ವೇಳೆ, ಸರ್ಕಾರದ ವಿಚಾರಗಳಲ್ಲಿ ಭವಿಷ್ಯ ಹೇಳುವವರನ್ನು ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ಮಂಗಳೂರಿನ ಮಳಲಿ ಮಸೀದಿ ವಿಚಾರವಾಗಿ ತಾಂಬೂಲ ಪ್ರಶ್ನೆ ಕೇಳಿರುವುದರ ಬಗ್ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರು ಭಾವನಾತ್ಮಕ ವಿಚಾರಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು. ಸರ್ಕಾರದಲ್ಲಿ ಅಲ್ಪಸಂಖ್ಯಾತರ ಸಚಿವಾಲಯ, ಹಿಂದೂಗಳಿಗಾಗಿ ಮುಜರಾಯಿ ಇಲಾಖೆ ಇದೆ. ಸರ್ಕಾರಿ ಅಧಿಕಾರಿಗಳು ಇದ್ದಾರೆ. ಹೀಗಾಗಿ ಸರ್ಕಾರದ ವಿಚಾರದಲ್ಲಿ ಸಂಘಟನೆಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಸರ್ಕಾರ ಕೂಡಲೇ ಇವರ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಈ ರೀತಿಯ ಸರ್ಕಾರಿ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ನಂಬಿಕೊಂಡು ಹೋಗಬಾರದು. ಇದರಿಂದ ಸಮಾಜದ ಸುವ್ಯವಸ್ಥೆ ಕೆಡುತ್ತದೆ. ಈ ವಿಚಾರವಾಗಿ ಪೊಲೀಸ್ ಅಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಬೇಕು. ಇಂತಹ ವಿಚಾರದಲ್ಲಿ ಭವಿಷ್ಯ ಹೇಳುವವರನ್ನು ಕೂಡ ಬಂಧಿಸಬೇಕು ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರವಾಗಿ ಹೈಕೋರ್ಟ್ ನೀಡಿರುವ ಸೂಚನೆ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ನಾವು ಚುನಾವಣೆಯನ್ನು ಎಂದೂ ಬೇಡ ಎನ್ನುವುದಿಲ್ಲ. ಆದರೆ ಮೊದಲು ಸಾಮಾಜಿಕ ನ್ಯಾಯ ಸಿಗಬೇಕು. ಸಂವಿಧಾನದ ಆಶಯದಂತೆ ಜನರಿಗೆ ಅಧಿಕಾರ ಕೊಡಬೇಕು. ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯಕ್ಕೆ ತೊಂದರೆ ಆಗಬಾರದು. ಇದು ಸರ್ಕಾರದ ಜವಾಬ್ದಾರಿ. ನ್ಯಾಯಾಲಯ ಚುನಾವಣೆ ನಡೆಸಿ ಎಂದು ಹೇಳಿದೆ. ಆದರೆ ಸಾಮಾಜಿಕ ನ್ಯಾಯ ಕಡೆಗಣಿಸಲು ಹೇಳಿಲ್ಲ ಎಂದರು.
ಮೇಕೆದಾಟು ಹೋರಾಟದಲ್ಲಿ ನಿಯಮ ಉಲ್ಲಂಘನೆ ಕುರಿತು ನೋಟಿಸ್ ಜಾರಿ ಬಗ್ಗೆ ಮಾತನಾಡಿ, ‘ನಾವು ನ್ಯಾಯಾಲಯಕ್ಕೆ ಗೌರವ ನೀಡಬೇಕು. ಖಂಡಿತ ನೀಡುತ್ತೇವೆ. ಆದರೆ ಕೇವಲ ಕಾಂಗ್ರೆಸ್ ನಾಯಕರ ವಿರುದ್ಧ ಪ್ರಕರಣ ದಾಖಲಿಸಿ, ಬಿಜೆಪಿಯವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಸಚಿವರ ಕಾರ್ಯಕ್ರಮಗಳು ಸರ್ಕಾರದ ಕಾರ್ಯಕ್ರಮ ಹಾಗೂ ಬಿಜೆಪಿ ನಾಯಕರ ಹುಟ್ಟುಹಬ್ಬ ವಿರುದ್ಧ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಉಂಟಾದ ಪಠ್ಯಕ್ರಮ ಪರಿಷ್ಕರಣೆ ಗೊಂದಲದ ಬಗ್ಗೆ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಸರ್ಕಾರ ರಾಜಕೀಯ ಅಜೆಂಡಾವನ್ನು ಪಠ್ಯಕ್ರಮದಲ್ಲಿ ತರಲು ಪ್ರಯತ್ನಿಸುತ್ತಿದೆ. ಇತಿಹಾಸ ತಿರುಚಿ, ಮುಂದಿನ ಪೀಳಿಗೆಗೆ ಹೊಸ ಇತಿಹಾಸ ಸೃಷ್ಟಿಸುತ್ತಿದೆ. ಇತಿಹಾಸವನ್ನು ಯಾರೂ ಬದಲಿಸಲು ಸಾಧ್ಯವಿಲ್ಲ. ಎಲ್ಲ ಪ್ರಯತ್ನಗಳೂ ಕೆಲಕಾಲ ಮಾತ್ರ. ದೇಶದ ಯಾವುದೇ ರಾಜ್ಯಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲು ಸಾಧ್ಯವಾಗಿಲ್ಲ. ಆದರೆ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ತನ್ನ ಪಕ್ಷ ಹಾಗೂ ಸಂಘಟನೆಯ ನಾಯಕರ ವಿಚಾರಗಳನ್ನು ಮಕ್ಕಳ ತಲೆಗೆ ತುಂಬಲು ಪ್ರಯತ್ನ ಮಾಡುತ್ತಿದೆ. ಕೆಲವರನ್ನು ದೇಶಕ್ಕಾಗಿ ಸ್ವಾತಂತ್ರ ತಂದುಕೊಟ್ಟವರು ಎಂದು ತಪ್ಪಾಗಿ ಬಿಂಬಿಸುತ್ತಿರುವುದು ಅಪರಾಧವಾಗಿದೆ. ಸರ್ಕಾರದ ಈ ತಪ್ಪಿಗೆ ಜನರೇ ಮುಂದಿನ ದಿನಗಳಲ್ಲಿ ಶಿಕ್ಷೆ ನೀಡುತ್ತಾರೆ’ ಎಂದು ಉತ್ತರಿಸಿದರು.
ಇದನ್ನೂ ಓದಿ:ಬಿಜೆಪಿ ಬೆಂಬಲಿತ ಸಂಘಟನೆಗಳು ಗೊಂದಲ ಸೃಷ್ಟಿಸುತ್ತಿವೆ: ಡಿಕೆಶಿ ಆರೋಪ