ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಾಕಷ್ಟು ಸಂಸ್ಕೃತ ಶ್ಲೋಕಗಳನ್ನು ಬಲ್ಲವರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲೂ ಸಂಸ್ಕೃತ ಶ್ಲೋಕವನ್ನು ಹೇಳಿ ಚಪ್ಪಾಳೆ ಗಿಟ್ಟಿಸಿದ್ದರು. ಆದರೆ ಈ ಬಾರಿ ಅವರು ಸಂಸ್ಕೃತ ಶ್ಲೋಕವೊಂದನ್ನು ತಪ್ಪಾಗಿ ಅರ್ಥ ಮಾಡಿಕೊಂಡು, ಸ್ವಾಮೀಜಿಗಳ ಎದುರೇ ಪ್ರಾರ್ಥನೆ ಮಾಡಿದವರಿಗೆ ಬುದ್ಧಿವಾದ ಹೇಳಿದ್ದಾರೆ.
2022ರಲ್ಲಿ ನಾಗರಿಕ ಸೇವೆಗಳಿಗೆ ಆಯ್ಕೆಯಾದವರಿಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಮತ್ತಿತರರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯೊಬ್ಬರು ಪ್ರಾರ್ಥನಾ ಗೀತೆ ಹಾಡಿದರು. “ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ। ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ ನಮೋಸ್ತುತೆ ।। ದೀಪಜ್ಯೋತಿಃ ಪರಬ್ರಹ್ಮ ದೀಪಜ್ಯೋತಿರ್ಜನಾರ್ಧನಃ । ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೇ ॥” ಎನ್ನುವುದು ಸಾಮಾನ್ಯವಾಗಿ ಯಾವುದೇ ಕಾರ್ಯಕ್ರಮಗಳಲ್ಲಿ ದೀಪ ಬೆಳಗುವಾಗ ಹೇಳುವ ಶ್ಲೋಕ.
ಈ ಶ್ಲೋಕದಲ್ಲಿ ಬರುವ “ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ ನಮೋಸ್ತುತೆ” ಎನ್ನುವುದನ್ನು ವಿದ್ಯಾರ್ಥಿನಿ ಮೂರ್ನಾಲ್ಕು ಬಾರಿ ಪುನರಾವರ್ತಿಸಿದರು. ಇದನ್ನು ಡಿ.ಕೆ. ಶಿವಕುಮಾರ್ ʼಶತ್ರು ವಿನಾಶಾಯʼ ಎಂದು ತಪ್ಪಾಗಿ ಅರ್ಥ ಮಾಡಿಕೊಂಡರು. ತಮ್ಮ ಭಾಷಣದ ಪ್ರಾರಂಭದಲ್ಲೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಪ್ರಾರ್ಥನೆ ಹೇಳಿದ ವಿದ್ಯಾರ್ಥಿನಿಗೆ ಮೇಷ್ಟ್ರು ಯಾರಿದ್ದಾರೆ ಗೊತ್ತಿಲ್ಲ. ಏನು ಪ್ರಾರ್ಥನೆ ಮಾಡುತ್ತಿದ್ದೇವೆ ಎನ್ನುವುದರ ಅರ್ಥ ಅವರಿಗೆ ಗೊತ್ತಿರಬೇಕು. ದೀಪ ಹಚ್ಚುವಾಗ ಏನು ಹೇಳಬೇಕು ಗೊತ್ತಿರಬೇಕು. ಶತ್ರು ವಿನಾಶಾಯ ಅನ್ನೋ ಪದ ಬರಬಾರದಿತ್ತು ಎಂದರು. ಶ್ಲೋಕದ ಪ್ರಾರಂಭದ ಸಾಲುಗಳನ್ನು ಪೂರ್ತಿ ಹೇಳಿದ ಡಿಸಿಎಂ, ಎಲ್ಲರಿಗೂ ಮಂಗಳವಾಗಲಿ, ವಿದ್ಯಾವಂತರಾಗಲಿ, ನಿಮ್ಮನ್ನೆಲ್ಲ ಜ್ಯೋತಿ ಕತ್ತಲಿನಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗಲಿ ಎಂದು ಪ್ರಾರ್ಥಿಸುತ್ತೇನೆ.
ಮೂರು ಸಾರಿ ಶತ್ರು ವಿನಾಶಾಯ ಎಂದು ಕೇಳಿಸಿಕೊಂಡೆ. ನಮಗೆ ಯಾರೂ ಶತ್ರು ಇಲ್ಲ. ಇದನ್ನೇ ಗಾಂಧೀಜಿ ಹೇಳಿದ್ದಾರೆ. ಅವರವರು ಮಾಡಿದ್ದು ಅವರವರಿಗೆ. ಶತ್ರುವನ್ನೂ ಮಿತ್ರರನ್ನು ಮಾಡಿಕೊಳ್ಳುವ ಬದುಕಿನಲ್ಲಿ ಬದುಕುತ್ತಿದ್ದೇವೆ. ಇಲ್ಲಿ ಯಾರೂ ಶಾಶ್ವತ ಶತ್ರುಗಳಿಲ್ಲ, ಶಾಶ್ವತ ಮಿತ್ರರಿಲ್ಲ ಎಂದರು. ಯಾರನ್ನೂ ಶತ್ರುಗಳನ್ನಾಗಿ ಪರಿಗಣಿಸಬಾರದು ಎಂಬ ಮಾತಿಗೆ ಸಭಿಕರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಅಸಲಿಗೆ ಶ್ಲೋಕದ ಅರ್ಥ ಹೀಗಿದೆ. “ದೀಪದ ಬೆಳಕಿಗೆ ನಮಸ್ಕಾರಗಳು, ಇದು ದ್ವೇಷ ಭಾವನೆಗಳನ್ನು ನಾಶಪಡಿಸುತ್ತದೆ ಮತ್ತು ಮಂಗಳಕರತೆ, ಆರೋಗ್ಯ ಮತ್ತು ಸಮೃದ್ಧಿಯನ್ನು ತರುತ್ತದೆ”. ಶತ್ರು ಬುದ್ಧಿ, ಅಂದರೆ ಧ್ವೇಷ ಭಾವನೆಯನ್ನು ವಿನಾಶ ಮಾಡಬೇಕು ಎನ್ನುವುದು ಶ್ಲೋಕದ ಅರ್ಥ. ಆದರೆ ಶತ್ರು ವಿನಾಶಾಯ ಎಂದು ಕೇಳಿಸಿಕೊಂಡ ಡಿ.ಕೆ. ಶಿವಕುಮಾರ್ ಅವರು ಶ್ಲೋಕವನ್ನು ತಪ್ಪಾಗಿ ಅರ್ಥ ಮಾಡಿಕೊಂಡರು. ಆದರೆ ಶ್ಲೋಕದಲ್ಲಿ ಇದ್ದ ಸರಿಯಾದ ಸಂದೇಶವನ್ನೇ ಸಭಿಕರಿಗೆ ನೀಡಿದರು.
ಭಾಷಣದ ನಡುವೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ʼಗುರುವಾಣಿʼ ಪುಸ್ತಕವನ್ನು ಓದಿದ ಡಿಸಿಎಂ ಡಿ.ಕೆ. ಶಿವಕುಮಾರ್, ಸಮಾಜದಿಂದ ಏನೆಲ್ಲ ಪಡೆಯುತ್ತೇವೆ. ಆದರೆ ಸಮಾಜಕ್ಕೆ ಕೊಡುಗೆಯನ್ನು ಕೊಡಬೇಕು. ಸಮಾಜದ ಋಣವನ್ನು ತೀರಿಸದಿದ್ದರೆ ಬದುಕು ವ್ಯರ್ಥವಾಗುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ ಎಂದು ನೆನೆದರು.
ಮನುಷ್ಯ ಹುಟ್ಟುವಾದ ತಂದೆ ತಾಯಿ, ದೇವ ಋಣ, ಗುರುವಿನ ಋಣ ಹಾಗೂ ಸಮಾಜದ ಋಣದಿಂದ ಹುಟ್ಟುತ್ತಾನೆ. ಸಮಾಜದ ಋಣವನ್ನು ನಿಮ್ಮ ಧರ್ಮದಿಂದ ತೀರಿಸಬೇಕು ಎಂದು ಎಲ್ಲರಿಗೂ ತಿಳಿಸಿದರು.
ಇದನ್ನೂ ಓದಿ: Horoscope Today: ಈ ರಾಶಿಯವರು ಸಾಲ ಕೊಟ್ಟಿದ್ದರೆ ಇಂದು ಹಣ ಹಿಂದಿರುಗುತ್ತದೆ!