ಬೆಂಗಳೂರು: ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಪೊಲೀಸ್ ಅಧಿಕಾರಿಗಳನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ ನೀವು? ನಮ್ಮ ಸರ್ಕಾರದಲ್ಲಿ ಇದಕ್ಕೆ ಅವಕಾಶ ಕೊಡೊಲ್ಲ ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯ ಸಹ ಉಪಸ್ಥಿತರಿದ್ದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಮಾತನ್ನಾಡಿದ್ದಾರೆ. ಮಂಗಳೂರು, ಬಿಜಾಪುರ, ಬಾಗಲಕೋಟೆಯಲ್ಲಿ ನೀವು ಹೇಗೆ ಕೇಸರಿ ಬಟ್ಟೆ ಹಾಕಿಕೊಂಡು ಇಲಾಖೆಗೆ ಅವಮಾನ ಮಾಡಿದ್ರಿ ಅಂತಾ ಗೊತ್ತಿದೆ. ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡು ಬರಬೇಕಾಗಿತ್ತು? ಎಂದು ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ದೇಶದ ಬಗ್ಗೆ ಗೌರವ ಇದ್ರೆ ರಾಷ್ಟ್ರ ಧ್ವಜ ಹಾಕೊಂಡು ಕೆಲಸ ಮಾಡಬೇಕಿತ್ತು ಎಂದರು.
2021ರಲ್ಲಿ ಉಡುಪಿ ಮತ್ತು ವಿಜಯಪುರ ಗ್ರಾಮೀಣ ಪೊಲೀಸರು ಆಯುಧ ಪೂಜೆಯ ದಿನ ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿ, ಬಿಳಿ ದಿರಿಸಿನ ಮೇಲೆ ಕೇಸರಿ ಶಾಲು ಹೊದ್ದು ಫೋಟೊ ತೆಗೆಸಿಕೊಂಡಿದ್ದನ್ನು ಕಾಂಗ್ರೆಸ್ ಖಂಡಿಸಿತ್ತು. ಇದನ್ನು ಶಿವಕುಮಾರ್ ಪ್ರಸ್ತಾಪ ಮಾಡಿದ್ದಾರೆ.
ನಮ್ಮ ಸರ್ಕಾರದಲ್ಲಿ ಪೊಲೀಸ್ ಇಲಾಖೆಯನ್ನ ಕೇಸರೀಕರಣ ಮಾಡಲು ನಾವು ಬಿಡೊಲ್ಲ. ಪಿಎಸ್‌ಐ ಅಕ್ರಮದಲ್ಲಿ ಒಬ್ಬ ಎಡಿಜಿಪಿ ಒಎಂಆರ್ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ ನೋಡಿ. ಪ್ರೆಸ್ ಕಾನ್ಫರೆನ್ಸ್ ಮಾಡಿ ಪ್ರಕರಣ ಬಯಲಿಗೆ ತಂದವರನ್ನೇ ಹರಾಸ್ ಮಾಡಿದ್ದೀರ. ಪ್ರಿಯಾಂಕ್ ಖರ್ಗೆ ಅವರಿಗೆ ಕಾಟ ಕೊಟ್ಟಿದ್ದೀರ. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಒಳ್ಳೆಯ ಹೆಸರಿತ್ತು. ಆ ಗೌರವ, ಘನತೆಯನ್ನ ಹಾಳು ಮಾಡಿದ್ದೀರ ನೀವು.
ಎಲ್ಲಿ ನೋಡಿದ್ರು ಬರೀ ಕಾಸು, ಕಾಸು, ಕಾಸು. ನಮ್ಮ ಸರ್ಕಾರದಲ್ಲಿ ಎಲ್ಲವೂ ಕ್ಲೀನ್ ಆಗಬೇಕು. ಜನ ಈ ಸರ್ಕಾರದಿಂದ ಬಹುದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಿದ್ದಾರೆ. ಅದು ಪೊಲೀಸ್ ಇಲಾಖೆಯಿಂದಲೇ ಶುರು ಆಗಬೇಕು. ಈ ಸರ್ಕಾರದಿಂದ ಬದಲಾವಣೆ ಸಂದೇಶ ಜನರಿಗೆ ಹೋಗಬೇಕು. ನಿಮ್ಮಿಂದ ನಮಗೆ ನಯಾಪೈಸೆ ಹಣ ಬೇಕಿಲ್ಲ. ನೀವು ಯಾರಿಗೂ ಹಣ ಕೊಡೋದು ಬೇಡ. ಜನ ನರಳದಂತೆ ಉತ್ತಮವಾಗಿ ಕೆಲಸ ಮಾಡಿದ್ರೆ ಸಾಕು.
ನಿಮ್ಮ ಹಿಂದಿನ ವರ್ತನೆ ನಮ್ಮ ಸರ್ಕಾರದಲ್ಲಿ ನಡೆಯೊಲ್ಲ. ಹಿಂದೆ ಪೇ ಸಿಎಂ ಅಭಿಯಾನ ಮಾಡಿದಾಗ ನನ್ನ ಮತ್ತು ಸಿದ್ದರಾಮಯ್ಯರ ಜೊತೆ ಹೇಗೆ ನಡೆದುಕೊಂಡಿದ್ದೀರಾ ಗೊತ್ತಿದೆ. ನಮ್ಮ ಮೇಲೆ ಕೇಸ್ ಹಾಕಿದ್ರಿ. ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು, ಸುಳ್ಳು ಸಾವಿರಾರು ಕೇಸ್ ಹಾಕಿದ್ರಿ. ಅವರನ್ನು ಹರಾಸ್ ಮಾಡಿದ್ರಿ. ನಮ್ಮನ್ನೇ, ಸಿದ್ದರಾಮಯ್ಯ ಅವರನ್ನೇ ಬಿಡದ ನೀವು ಇನ್ನು ಸಾಮಾನ್ಯ ಜನರನ್ನು ಬಿಡ್ತೀರಾ? ಆದರೆ ಎದುರು ಪಾರ್ಟಿ ವಿರುದ್ಧ ಮಾತ್ರ ಯಾವುದೇ ಕೇಸ್ ಹಾಕಲಿಲ್ಲ. ಅವರ ಜತೆ ಶಾಮೀಲಾಗಿ ಕುಣಿದ್ರಿ.
ಸಭೆಯಲ್ಲಿ ನೂತನ ಡಿಜಿಐಜಿ ಅಲೋಕ್ ಮೋಹನ್ ಸೇರಿದಂತೆ, ಬೆಂಗಳೂರು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಚಿವರಾದ ಕೆ. ಎಚ್. ಮುನಿಯಪ್ಪ, ಜಮೀರ್ ಅಹಮದ್, ಎಂ.ಬಿ. ಪಾಟೀಲ್ ಕೂಡ ಭಾಗಿಯಾಗಿದ್ದರು.
ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ಪಾಲಿಸಬೇಕು. ಕೋಮು ದಳ್ಳುರಿಯಾಗದಂತೆ ನಿಗಾ ವಹಿಸಬೇಕು. ತಳಮಟ್ಟದಲ್ಲಿನ ಸಣ್ಣ ಪುಟ್ಡ ಕ್ರೈಂಗಳನ್ನು ನಿಯಂತಿಸಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ಪ್ರತಿ ತಿಂಗಳು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳ ಕ್ಲಿಯರ್ ಮಾಡುವಲ್ಲಿ ಗಮನ ಕೊಡಬೇಕು. ಅಪರಾಧ ಪ್ರಮಾಣವನ್ನು ನಿಯಂತ್ರಿಸಬೇಕು. ಟ್ರಾಫಿಕ್ ಸಮಸ್ಯೆಗೆ ಹೊಸ ಮಾರ್ಗಸೂಚಿಗಳನ್ನು ರಚಿಸಬೇಕು ಎಂದು ಸೂಚನೆ ನೀಡಿದ್ದಾರೆ.