ನವದೆಹಲಿ/ಬೆಂಗಳೂರು: ಕೇಂದ್ರ ಸರ್ಕಾರದ ಹಿಂದಿ ಹೇರಿಕೆ (Hindi Imposition) ಯತ್ನಕ್ಕೆ ಕರ್ನಾಟಕ ಹಾಗೂ ತಮಿಳುನಾಡು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮೊಸರಿನ ಮೇಲೆ ಹಿಂದಿಯ ದಹಿ (Dahi Row) ಎಂಬುದಾಗಿ ಮುದ್ರಿಸಬೇಕು ಎಂಬ ಆದೇಶವನ್ನು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ(FSSAI)ವು ಹಿಂಪಡೆದಿದೆ. ಆ ಮೂಲಕ ಕರ್ನಾಟಕ ಹಾಗೂ ತಮಿಳುನಾಡು ಸೇರಿ ಹಲವೆಡೆ ವ್ಯಕ್ತವಾದ ವಿರೋಧಕ್ಕೆ ಕೇಂದ್ರ ಸರ್ಕಾರ ಮಣಿದಂತಾಗಿದೆ.
ದಹಿ ಹೆಸರಿಗೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಎಫ್‌ಎಸ್‌ಎಸ್‌ಎಐ ಮಾರ್ಗಸೂಚಿಗಳನ್ನು ಬದಲಾಯಿಸಿದೆ. “ಮೊಸರಿನ ಪ್ಯಾಕೆಟ್ ಮೇಲೆ ದಹಿ ಎಂತಲೇ ಬರೆಯಬೇಕು ಎಂದಿಲ್ಲ. ಆಯಾ ರಾಜ್ಯಗಳು ಕರ್ಡ್ ಎಂಬುದಾಗಿ ಇಂಗ್ಲಿಷ್‌ನಲ್ಲಿ ಬರೆದು, ಬ್ರ್ಯಾಕೇಟ್‌ನಲ್ಲಿ ಆಯಾ ಸ್ಥಳೀಯ ಭಾಷೆಗಳಲ್ಲಿಯೇ ಮೊಸರು ಎಂಬುದಾಗಿ ಬರೆಯಬಹುದು” ಎಂದು ಹೊಸ ಆದೇಶ ಹೊರಡಿಸಿದೆ. ಮೊಸರಿನ ಪ್ಯಾಕೆಟ್‌ಗಳ ಮೇಲೆ ದಹಿ ಎಂಬುದಾಗಿ ಮುದ್ರಿಸಬೇಕು ಎಂದು ಪ್ರಾಧಿಕಾರವು ಜನವರಿ 23ರಂದು ಆದೇಶ ಹೊರಡಿಸಿತ್ತು.
ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ
ಕರ್ನಾಟಕ, ತಮಿಳುನಾಡು ವಿರೋಧ
ಕೇಂದ್ರ ಸರ್ಕಾರದ ಈ ಕ್ರಮಕ್ಕೆ ತಮಿಳುನಾಡು ಮತ್ತು ನೆರೆಯ ಕರ್ನಾಟಕದ ಹಾಲು ಉತ್ಪಾದಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಹಿಂದಿ ಪದದ ಬದಲಿಗೆ ಪ್ರಾದೇಶಿಕ ಭಾಷೆಯಲ್ಲಿ ಮೊಸರು ಬಳಸುವುದನ್ನು ಮುಂದುವರಿಸಲಾಗುವುದು ಎಂದು ಹಾಲು ಉತ್ಪಾದಕರು ಎಫ್ಎಸ್ಎಸ್ಐಗೆ ಪತ್ರ ಬರೆದಿದ್ದರು. ಮೊಸರು ಎನ್ನುವುದು ಕರ್ಡ್ ಎನ್ನುವುದು ಯಾವುದೇ ಭಾಷೆಯಲ್ಲಿ ಬಳಸಬಹುದಾದ ಸಾಮಾನ್ಯ ಪದವಾಗಿದೆ. ಆದರೆ, ಮೊಸರಗಿಂತಲೂ ವಿಭಿನ್ನ ರುಚಿ ಮತ್ತು ಸಂರಚನೆಯನ್ನು ಸೂಚಿಸುವುದಕ್ಕೆ ದಹಿ ಪದವನ್ನು ಬಳಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರದ ವಿರುದ್ಧ ಕುಮಾರಸ್ವಾಮಿ, ಸ್ಟಾಲಿನ್ ಕೆಂಡ
ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹಾಗೂ ಕರ್ನಾಟಕದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಕೆಂಡ ಕಾರಿದ್ದರು. ಕೇಂದ್ರ ಸರ್ಕಾರದ ಈ ನಿರ್ಧಾರವು ದಕ್ಷಿಣ ಭಾರತದ ಜನರನ್ನೂ ದೂರು ಇಡುವ ಪ್ರಯತ್ನವಾಗಿದೆ. ಹಿಂದಿ ಹೇರಿಕೆಯ ಮುಜುಗರವಿಲ್ಲದ ಒತ್ತಾಯಗಳು ಮೊಸರು ಪ್ಯಾಕೆಟ್‌ಗೂ ಹಿಂದಿಯಲ್ಲಿ ಲೇಬಲ್ ಮಾಡುವಂತೆ ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ. ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡದ ಮೇಲೆ ಹಿಂದಿ ಸವಾರಿ ಮಾಡುತ್ತಿದೆ. ನಮ್ಮ ಮಾತೃಭಾಷೆಯನ್ನು ಇಂತಹ ನಿರ್ಲಜ್ಜ ನಿರ್ಲಕ್ಷ್ಯವು ದಕ್ಷಿಣದಿಂದ ಶಾಶ್ವತವಾಗಿ ಗಡಿಪಾರು ಮಾಡುವುದನ್ನು ಇದು ಖಚಿತಪಡಿಸುತ್ತದೆ ಎಂದು ಹೇಳಿದ್ದರು.
ಅದರಲ್ಲೂ, ತಮಿಳುನಾಡು ಸರ್ಕಾರವು ಕೇಂದ್ರದ ಆದೇಶಕ್ಕೆ ಸೆಡ್ಡು ಹೊಡೆದು, ನಾವು ಯಾವುದೇ ಕಾರಣಕ್ಕೂ ದಹಿ ಎಂಬುದಾಗಿ ಮುದ್ರಿಸುವುದಿಲ್ಲ ಎಂದು ಹೇಳಿತ್ತು. ಬೇರೆ ರಾಜ್ಯಗಳಲ್ಲೂ ಈ ಕುರಿತು ಆಕ್ರೋಶ ವ್ಯಕ್ತವಾಗಿತ್ತು. ಈಗ ಕೊನೆಗೆ ರಾಜ್ಯ ಸರ್ಕಾರಗಳ ವಿರೋಧದ ಬಳಿಕ ಎಫ್‌ಎಸ್‌ಎಸ್‌ಎಐ ಆದೇಶದಲ್ಲಿ ಮಾರ್ಪಾಡು ಮಾಡಿದೆ.
ಇದನ್ನೂ ಓದಿ: Hindi Imposition: ಮೊಸರು ಪ್ಯಾಕೆಟ್ ಮೇಲೆ ದಹಿ ಎಂದು ಮುದ್ರಿಸಿ! ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಕರ್ನಾಟಕ, ತಮಿಳುನಾಡು!