Site icon Vistara News

Acid Attack : ರಾಜ್ಯದಲ್ಲಿ ಆ್ಯಸಿಡ್‌ ಮಾರಾಟ ನಿಷೇಧ?; ಪರಮೇಶ್ವರ್‌ ಸುಳಿವು

Acid attack G Parameshwar

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ (Dakshina Kannada News) ಕಡಬದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ (Kadaba Government PU College) ಮೂವರು ದ್ವಿತೀಯ ಪಿಯು ವಿದ್ಯಾರ್ಥಿನಿಯರ (Three Girl Students) ಮೇಲೆ ಕೇರಳದಲ್ಲಿ ಎಂಬಿಎ ಮಾಡುತ್ತಿರುವ ಯುವಕನೊಬ್ಬ ಆ್ಯಸಿಡ್‌ ದಾಳಿ (Acid attack) ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾಜ್ಯದಲ್ಲಿ ಆ್ಯಸಿಡ್‌ ಮಾರಾಟ (Acid Sales) ನಿಷೇಧಿಸುವ ಬಗ್ಗೆ ಚಿಂತನೆ ಶುರು ಮಾಡಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್‌ (G Parameshwar) ಅವರೇ ಈ ಸುಳಿವನ್ನು ನೀಡಿದ್ದಾರೆ. ಆ್ಯಸಿಡ್‌ ಸುಲಭದಲ್ಲಿ ಸಿಗುವುದರಿಂದ ಕೆಲವು ದುಷ್ಕರ್ಮಿಗಳು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅದರ ಲಭ್ಯತೆ ಮತ್ತು ಖರೀದಿಯ ವಿಚಾರದಲ್ಲಿ ಕೆಲವೊಂದು ನಿರ್ಬಂಧಗಳನ್ನು ಹಾಕಬೇಕಾದ ಅನಿವಾರ್ಯತೆಯನ್ನು ಅವರು ಪ್ರತಿಪಾದಿಸಿದ್ದಾರೆ.

ಬೆಂಗಳೂರಿನಲ್ಲಿ ಬುಧವಾರ ‘ಮಹಿಳೆಯರ ಮೇಲಿನ ದೌರ್ಜನ್ಯ’ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಲಹೆಗಳನ್ನು ಆಲಿಸಿ ಮಾತನಾಡಿದ ಪರಮೇಶ್ವರ್‌, ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಅವರ ಮೇಲೆ ದೌರ್ಜನ್ಯ ನಡೆದರೆ ಸಹಿಸುವುದಿಲ್ಲ. ಮಹಿಳೆಯರು ಮತ್ತು ಮಕ್ಕಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ, ವಿಧಾನಸೌಧದ ಕಾರ್ಯಾಲಯ ಅಥವಾ ಗೃಹ ಕಚೇರಿಗೆ ಆಗಮಿಸಿ ನನ್ನನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಳ್ಳಬಹುದು ಎಂದೂ ಹೇಳಿದ್ದಾರೆ.

ಇದನ್ನೂ ಓದಿ : Acid Attack : ಕಡಬ ಆ್ಯಸಿಡ್ ದಾಳಿಕೋರನ ವಿರುದ್ಧ ಸೂಕ್ತ ಕ್ರಮಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್‌ ಸೂಚನೆ

ಕಡಬದಲ್ಲಿ ಆ್ಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ಸರ್ಕಾರ ಈಗಾಗಲೇ 4 ಲಕ್ಷ ರೂ. ಪರಿಹಾರ ಘೋಷಿಸಿದೆ. ಅವರಿಗೆ ಪ್ಲಾಸ್ಟಿಕ್‌ ಸರ್ಜರಿ ಅವಶ್ಯವಿದ್ದರೆ 20 ಲಕ್ಷದವರೆಗೂ ಖರ್ಚನ್ನು ಭರಿಸಲು ಮುಂದಾಗಿದೆ. ಜತೆಗೆ ಸಂತ್ರಸ್ತರಿಗೆ ನಿವೇಶನವನ್ನು ಕೂಡಾ ನೀಡಲಾಗುವುದು ಎಂದು ಗೃಹ ಸಚಿವರು ಹೇಳಿದ್ದಾರೆ.

ಮಹಿಳೆಯರ ಸಮಸ್ಯೆ ಬಗ್ಗೆ ಪೊಲೀಸರಿಗೂ ಗೌರವವಿರಲಿ ಎಂದ ಪರಮೇಶ್ವರ್‌

ಪೊಲೀಸರು ಕೂಡಾ ಮಹಿಳೆಯರ ಸಮಸ್ಯೆ ಗಳ ವಿಚಾರದಲ್ಲಿ ಹೆಚ್ಚು ಕಾಳಜಿಯಿಂದ ಕ್ರಮ ವಹಿಸಬೇಕು ಎಂದು ಪರಮೇಶ್ವರ್‌ ಸಲಹೆ ನೀಡಿದರು.

  1. ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಮಹಿಳೆಯರು ತಮ್ಮ ಸಮಸ್ಯೆಗಳ ಕುರಿತು ದೂರು ನೀಡಲು ಠಾಣೆಗೆ ಬಂದರೆ ಕೂಡಲೆ ಸಮಸ್ಯೆಗಳನ್ನು ಆಲಿಸಬೇಕು.
  2. ನಮ್ಮ ಬೆನ್ನಿಗೆ ಪೊಲೀಸರು ಇದ್ದಾರೆ ಎಂಬ ಧೈರ್ಯ ಅವರಲ್ಲಿ ಮೂಡಬೇಕು.
  3. ಅವರ ದೂರುಗಳ ಬಗ್ಗೆ ತಾತ್ಸಾರ ಮಾಡಿದರೆ ಸಹಿಸುವುದಿಲ್ಲ.
  4. ಮಹಿಳೆಯರು ಧೈರ್ಯವಾಗಿದ್ದರೆ ಒಳ್ಳೆ ಆಡಳಿತ, ಜನಸ್ನೇಹಿ ಪೊಲೀಸ್ ಎನಿಸಿಕೊಳ್ಳಲು ಸಾಧ್ಯ.
  5. ಈ ಹಿಂದೆ ಪೊಲೀಸ್ ಸಹಾಯವಾಣಿ ಮೂಲಕ ಬಂದ ದೂರುಗಳನ್ನು ಆಧರಿಸಿ, ಹೋಯ್ಸಳ ಸಿಬ್ಬಂದಿ ಸ್ಥಳಕ್ಕೆ ಹೋಗಲು 20 ನಿಮಿಷ ತೆಗೆದುಕೊಳ್ಳುತ್ತಿದ್ದರು. ಪ್ರಸ್ತುತ 7 ನಿಮಿಷದೊಳಗೆ ಸ್ಥಳದಲ್ಲಿ ಹಾಜರಿರುತ್ತಾರೆ.
  6. ಬೆಂಗಳೂರು ನಗರದಲ್ಲಿ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರು ನಿರಂತರ ಕಣ್ಗಾವಲು ಇಟ್ಟಿರುತ್ತಾರೆ.

ಪೊಲೀಸ್‌ ಠಾಣೆಯಲ್ಲಿ ಮಹಿಳಾ ಸಿಬ್ಬಂದಿ ಪ್ರಮಾಣ ಹೆಚ್ಚಬೇಕು

ಈಗಿರುವ ಪೊಲೀಸ್ ಸಿಬ್ಬಂದಿಗಳಲ್ಲಿ ಶೇ.8ರಷ್ಟು ಮಹಿಳೆಯರಿದ್ದಾರೆ. ಶೇ.25ರಷ್ಟಾಗಬೇಕು ಎಂಬುದು ಗುರಿ ಹೊಂದಲಾಗಿದೆ. ಮಹಿಳಾ‌ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲು ಕ್ರಮ ಕೈಗೊಳ್ಳುವುದಾಗಿ ಜಿ. ಪರಮೇಶ್ವರ್‌ ತಿಳಿಸಿದರು.

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ನಮ್ಮ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಶಕ್ತಿ ಹೆಚ್ಚಿಸಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶ. ಮಹಿಳೆಯರ ಬಗ್ಗೆ ಅವಹೇಳನ ಮಾಡುವುದು, ಅವಾಚ್ಯ ಮಾತುಗಳನ್ನು ಹಾಗೂ ತಿರುಚಿದ ವೀಡಿಯೋಗಳನ್ನು ಪ್ರಕಟಿಸುವರ ವಿರುದ್ಧ ಕಾನೂನು ರಿತ್ಯ ಕ್ರಮ ಜರುಗಿಸಲಾಗುವುದು ಎಂದರು.

Exit mobile version