Site icon Vistara News

ರಾಜ್ಯದಲ್ಲಿ ಸೋಲಾರ್‌ ಘಟಕ ಸ್ಥಾಪನೆಗೆ ₹52,000 ಕೋಟಿ ಹೂಡಿಕೆ

acme group sign

ಬೆಂಗಳೂರು: ನವೀಕೃತ ಇಂಧನ ಮೂಲದಿಂದ ವಿದ್ಯುತ್‌ ತಯಾರಿಕೆ ಸಂಬಂಧ ಮಹತ್ವದ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸೋಮವಾರ ಸಹಿ ಮಾಡಿದೆ. ಮಂಗಳೂರಿನಲ್ಲಿ ₹52,000 ಕೋಟಿ ಮೊತ್ತದಲ್ಲಿ ಸೋಲಾರ್‌ ವಿದ್ಯುತ್‌ ಘಟಕ ಸ್ಥಾಪನೆಗೆ ಗುರುಗ್ರಾಮ ಮೂಲದ ಸಂಸ್ಥೆಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸಹಿ ಮಾಡಿದ್ದಾರೆ.

ಗುರುಗ್ರಾಮ ಮೂಲದ ಆಕ್ಮೆ ( ACME ) ಕ್ಲೀನ್ಟೆಕ್ ಸೊಲುಷನ್ ಪ್ರೈವೇಟ್ ಲಿಮಿಟೆಡ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಂಪೆನಿಯು ಗ್ರೀನ್ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಸ್ಥಾಪನೆ ಹಾಗೂ ಪೂರಕವಾಗಿ ಮಂಗಳೂರಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಲಿದೆ. ಇದಕ್ಕಾಗಿ ₹52,000 ಕೋಟಿ ಹೂಡಿಕೆ ಮಾಡಲಿದೆ.

ಆಕ್ಮೆ ಕಂಪನಿಯು ಎರಡು ಹಂತದಲ್ಲಿ ಯೋಜನೆ ಜಾರಿ ಮಾಡಲಿದೆ. ಮೊದಲ ಹಂತದಲ್ಲಿ ₹5,300 ಕೋಟಿ ಹಾಗೂ ಎರಡನೇ ಹಂತದಲ್ಲಿ ₹46,565 ಕೋಟಿ ಹೂಡಿಕೆ ಸೇರಿ ಒಟ್ಟಾರೆ 2027ರವರೆಗೆ ₹51,865 ಕೋಟಿ ಹೂಡಿಕೆ ಮಾಡಲಿದೆ. ಈ ಹೂಡಿಕೆ ಸಂಪೂರ್ಣ ಜಾರಿಯಾದರೆ 1800 ಜನರಿಗೆ ಉದ್ಯೋಗ ಸೃಜನೆ ಆಗುವ ಅಂದಾಜಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದೆ. ರಾಜ್ಯ ಸರ್ಕಾರವು ಗ್ರೀನ್ ಹೈಡ್ರೋಜನ್ ನೀತಿಯನ್ನು ರೂಪಿಸುತ್ತಿದ್ದು, ಆಕ್ಮೆ ಗ್ರೂಪ್‌ ಇದರ ಲಾಭ ಪಡೆದುಕೊಳ್ಳಬೇಕು. ಕರ್ನಾಟಕ ರಾಜ್ಯವು ಸದಾ ಹೊಸ ತಂತ್ರಜ್ಞಾನ, ಭವಿಷ್ಯದ ಯೋಜನೆಗಳಿಗೆ ಉತ್ತೇಜನ ನೀಡುತ್ತ ಬಂದಿದೆ. ಈ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ತ್ವರಿತವಾಗಿ ಎಲ್ಲ ಅಗತ್ಯ ಬೆಂಬಲ ನೀಡಲಿದೆ. ನೀವು ಸಹ ಸಕಾಲದಲ್ಲಿ ಯೋಜನೆ ಜಾರಿಗೊಳಿಸಿ ಎಂದು ಕಂಪೆನಿ ಪ್ರತಿನಿಧಿಗಳಿಗೆ ಸಲಹೆ ನೀಡಿದರು.

ಆಕ್ಮೆ ಗ್ರೂಪ್ ಜಾಗತಿಕ ಮಟ್ಟದಲ್ಲಿ ಹೈಡ್ರೋಜನ್ –ಅಮೋನಿಯ ಘಟಕಗಳ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದೆ. ರಾಜಸ್ಥಾನದ ಬಿಕನೇರ್‌ನಲ್ಲಿ ವಿಶ್ವದ ಮೊದಲ ಹೈಡ್ರೋಜನ್ ಅಮೋನಿಯ, ಸೋಲಾರ್ ಘಟಕವನ್ನು ಸ್ಥಾಪಿಸಿದ್ದು, ಕಾರ್ಯಾರಂಭ ಮಾಡಿದೆ ಎಂದು ಆಕ್ಮೆ ಗ್ರೂಪ್ ನ ಉಪಾಧ್ಯಕ್ಷ ಶಶಿ ಶೇಖರ್ ತಿಳಿಸಿದರು.

ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವಿಜರ್ಲೆಂಡಿನ ದಾವೋಸ್‌ ಸಮ್ಮೇಳನದಲ್ಲಿ ಭಾಗವಹಿಸಿದ್ದಾ ರೆನ್ಯೂ ಪವರ್ ಕಂಪೆನಿ ₹50,000 ಕೋಟಿ ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಮತ್ತೊಂದು ಕಂಪನಿ ಒಪ್ಪಂದ ಮಾಡಿಕೊಂಡಿದ್ದು, ಸುಮಾರು 15 ದಿನದ ಅಂತರದಲ್ಲಿ ₹1 ಲಕ್ಷ ಕೋಟಿ ಹೂಡಿಕೆ ಒಪ್ಪಂದವಾಗಿದೆ. ಈ ಒಪ್ಪಂದವನ್ನು ಸೂಕ್ತವಾಗಿ ಜಾರಿಗೊಳಿಸುವ ಹೊಣೆ ಸರ್ಕಾರದ ಮೇಲಿದೆ.
ಆಕ್ಮೆ ಸಂಸ್ಥೆಯೊಂದಿಗಿನ ಒಪ್ಪಂದದ ಸಂದರ್ಭದಲ್ಲಿ ಇಂಧನ ಸಚಿವ ವಿ. ಸುನಿಲ್ ಕುಮಾರ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ, ಆಕ್ಮೆ ಗ್ರೂಪ್ ಉಪಾಧ್ಯಕ್ಷ ಶಶಿ ಶೇಖರ್, ಕಂಪೆನಿಯ ಅಧಿಕಾರಿಗಳಾದ
ಎಂ.ವಿ.ವಿ. ಎಸ್ ರೆಡ್ಡಿ, ಅರುಣ್ ಚೋಪ್ರಾ ಉಪಸ್ಥಿತರಿದ್ದರು.

Exit mobile version